ಜಂಭವಳಿದವ ಜಗವ
ಜಯಿಪನೆನುವಂತ ನುಡಿ
ಜಂಬವಳಿದರೆ ತುಳಿವ
ರೆಲ್ಲ ಕಲಿಯುಗದಿ !
ಪದವಿಗಳ ಪಡೆದು ಬರಿ
ಡಂಭ ಮೆರೆದೊಡೆ ಆಯ್ತೆ ?
ಆತ್ಮಸಾಕ್ಷಿಯ ಸಾವೊ
ಜಾಣಮೂರ್ಖ //
ಸರಳ ಜೀವನ ಉದಾತ್ತ ಚಿಂತನೆಯ ತತ್ತ್ವ ಇಂದು ವಿದ್ಯಾವಂತ ಸಮುದಾಯದಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ ? ಆದರೆ ವಿಪರ್ಯಾಸವೆಂದರೆ ಈ ಮಾತು ಸೈದ್ಧಾಂತಿಕವಾಗಿ ಬದುಕಿದೆ. ಅಳವಡಿಕೆಯ ದೃಷ್ಟಿಯಿಂದ ಸತ್ತಿದೆ ! ಸಾಯುತ್ತಿದೆ ಎಂದೇ ಹೇಳಬೇಕು. ವಾಸ್ತವದಲ್ಲಿ ಸರಳವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಯುವವನು ಎಲ್ಲರ ಟೀಕೆಗೆ ಗುರಿಯಾಗಬೇಕಲ್ಲದೇ ಜಗತ್ತು ಅವನನ್ನು ತುಂಬಾ ವಿಚಿತ್ರವಾಗಿ , ಒಬ್ಬ ಪ್ರತ್ಯೇಕವಾದಿಯಂತೆ ಪರಿಗಣಿಸುತ್ತಿರುವುದು ಒಂದು ದೊಡ್ಡ ದುರಂತ. ಮೌಲ್ಯಾದರ್ಶಗಳು ಸಿದ್ಧಾಂತಗಳಾಗಿ ಉಳಿದಿವೆಯಷ್ಟೆ. ಆಚರಣೆಯಲ್ಲಿ ಬರುತ್ತಿಲ್ಲ. ಪದವಿಗಳನ್ನು ಪಡೆದು , ಪ್ರತಿಯೊಂದನ್ನೂ ತಾತ್ತ್ವಿಕವಾಗಿ ಚಿಂತಿಸುವ ಗುಣವುಳ್ಳವರೇ ಗುಣವಿಹೀನ ಪಶುಗಳಂತೆ ವರ್ತಿಸಿ ತಮಗೆದುರಿಲ್ಲವೆಂಬಂತೆ ಮೆರೆದರೆ ಇದು ಆತ್ಮಸಾಕ್ಷಿಯ ಸಾವಲ್ಲದೇ ಮತ್ತೇನು !? ( ಕ್ಷಮಿಸಿ ನಾನು ಪಶುಗಳೆಂದುಬಿಟ್ಟೆ ! ಪಶುಗಳಲ್ಲಿ ಮಾನವೀಯತೆಯನ್ನು ಮೀರಿದ ಗುಣವಿರುವುದನ್ನು ಇಂದು ಗಮನಿಸುತ್ತಿದ್ದೇವೆ ! ಆದರೆ ಮಾನುಷ್ಯ ಮಾತ್ರ ಯಾಕೋ ಹೀಗಾಗಿಬಿಟ್ಟ !) ಏನು ಮಾಡುವುದು ! ಕಾಲಾಯ ತಸ್ಮೈ ನಮಃ ಎಂದು ಸುಮ್ಮನಿರುವುದೆ ? ಅದು ಮಾನವತೆಯಾಗುವುದಿಲ್ಲ. ನಾವು ಮೊದಲು ಮಾದರಿಯಾಗೋಣ. ತಿದ್ದಿಕೊಂಡರೆ ಸಂತೋಷ. ಇಲ್ಲದಿದ್ದರೆ ಬಿಡಿ ಅದ ಅವರಿಗೆ ಬಿಟ್ಟದ್ದು . ಇಂತು ಎಲ್ಲರೂ ತಮ್ಮನ್ನು ತಾವು ತಿದ್ದಿಕೊಂಡು ನಡೆದರೆ ಈ ಭುವಿ ರಾಮರಾಜ್ಯವಾದೀತು ! ಏನಂತೀರಿ ?!
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021