Write to us : Contact.kshana@gmail.com
5
(4)

ಸಂಜೆ ಶುಂಠಿ ಕಷಾಯದ ನಂತರ ಮನೆಯವರೆಲ್ಲಾ ಸೇರಿ ಕವಡೆ ಆಟ. ಪಕ್ಕದಲ್ಲಿ ಅದರಷ್ಟಕ್ಕೆ ಅದು ಮಾತನಾಡುತ್ತಿರುವ ಟಿವಿ. ಬರುವುದು ಒಂದೇ ಚಾನೆಲ್, ದೂರದರ್ಶನ್. ಆದರೂ ಅಜ್ಜನಿಗೆ ಅದೇನೋ ಪ್ರೀತಿ. ಟಿವಿಯ ಒಳಗೇ ಹೋಗುತ್ತಾರೇನೋ ಅನ್ನುವಷ್ಟು ಹತ್ತಿರದಲ್ಲಿ ನೆಲದ ಮೇಲೆ ಕುಳಿತು ತಲೆಯೆತ್ತಿ ನೋಡುತ್ತಿದ್ದರೆ, ಅಜ್ಜಿ ಹತ್ತಿಯಿಂದ ಹೂಬತ್ತಿ ಮಾಡುತ್ತಾ ಟಿವಿ ನೋಡುತ್ತಿದ್ದರೆ, ಉಳಿದವರು ಆಟದಲ್ಲಿ ಮಗ್ನ. ಗಲಾಟೆಯಲ್ಲಿ ಏನೂ ಕೇಳಲಾಗದೆ ಟಿವಿ ಗೆ ಅಷ್ಟು ಹತ್ತಿರದಲ್ಲಿ ಕುಳಿತುಕೊಳ್ಳುತ್ತಿದ್ದರೋ ಏನೋ ಗೊತ್ತಿಲ್ಲ. ಆಡುತ್ತಿದುದು ಕವಡೆ ಆದರೂ, ಗೆದ್ದವರಿಗೆ ಒಲಂಪಿಕ್ನಲ್ಲಿ ಮೆಡಲ್ ಗೆದ್ದಷ್ಟು ಸಂತೋಷ. ಬೇಕಾದ ಕಾಯಿ ಬೀಳಲು ಕೈಯ ಮುಷ್ಠಿಯೊಳಗೆ ಕವಡೆ ಇಟ್ಟುಕೊಂಡು ನೆನಪಿಸಿಕೊಳ್ಳುವ ದೇವರೆಷ್ಟೋ… ಒಬ್ಬೊಬ್ಬರು ಒಂದೊಂದು ದೇವರನ್ನು ನೆನಪಿಸಿಕೊಳ್ಳುವಾಗ ದೇವರುಗಳ ಮಧ್ಯೆಯೇ ಆಟ ಶುರುವಾಗುತ್ತಿತ್ತೋ ಏನೋ. ಒಂದು ನಾಲ್ಕು ರೌಂಡ್ ಆಡುವಷ್ಟರಲ್ಲಿ ಗಂಟೆ ಎಂಟೂವರೆ. ಅಜ್ಜಿ ತಟ್ಟೆಯಿಡಿ ಎಂದು ಒಂದು ಹತ್ತು ಬಾರಿಯಾದರೂ ಹೇಳಬೇಕು. ಆಮೇಲೆಯೇ ಎಲ್ಲರೂ ಏಳುವುದು.

ಊಟಕ್ಕೆ ಕೆಂಪು ಹರಿವೆ ಸೊಪ್ಪಿನ ಸಾಂಬಾರ್ ಜೊತೆ ಕರಿದ ಅವಲಕ್ಕಿ ಮತ್ತು ಬಾಳೆಕಾಯಿ ಸಂಡಿಗೆ. ಸಾಕಮ್ಮಜ್ಜಿ ಬಿಟ್ಟರೆ ಇನ್ಯಾರೂ ಬಾಳೆಕಾಯಿ ಸಂಡಿಗೆ ಮಾಡುತ್ತಿರಲಿಲ್ಲ. ಬಾಳೆಕಾಯಿಯನ್ನು ಸಿಪ್ಪೆ ಸಮೇತ ಬೇಯಿಸಿ ಹುಳಿಮಜ್ಜಿಗೆ, ಇಂಗು, ಉಪ್ಪು , ಜೀರಿಗೆ ಮೆಣಸಿನ ಕಾಯಿ ಸೇರಿಸಿ ಅರೆದು ತೆಳ್ಳಗೆ ಚಮಚದಲ್ಲಿ ಬಿಸಿಲಿನಲ್ಲಿ ಹರಡಿ ಒಣಗಿಸುವ ಬಾಳೆಕಾಯಿ ಸಂಡಿಗೆ ಅವಲಕ್ಕಿ ಸಂಡಿಗೆಗಿಂತ ರುಚಿ. ಕೇಶವ ಅಂಜನಾ ಆಚೀಚೆ ನೋಡುತ್ತಿದ್ದ ಹಾಗೆ ಆಕೆಯ ತಟ್ಟೆಯಿಂದ ಒಂದೆರಡು ಸಂಡಿಗೆ ಎಗರಿಸಿಯಾಗಿತ್ತು. ಅದನ್ನು ನೋಡಿದ ಅಜ್ಜಿ “ಮುಸುರೆಯಂತೂ ಇಲ್ಲ, ಎಂಜಿಲಾದರೂ ಬೇಡವೇ? ” ಎನ್ನುವಷ್ಟರಲ್ಲಿ ಅಂಜನಾ ಕೈ ಬೆರಳಿಗೆ ಎಂಜಿಲು ಉಗುಳಿಕೊಂಡು ತಟ್ಟೆಯಲ್ಲಿದ್ದ ಸಂಡಿಗೆಗಳಿಗೆಲ್ಲಾ ಹಚ್ಚಿದಳು. ಕೇಶವ ಇನ್ನು ಸಂಡಿಗೆ ಎಗರಿಸದಂತೆ ಆಡುವ ಏಕೈಕ ವಿಧಾನ ಇದಾಗಿತ್ತು.

ಮಜ್ಜಿಗೆ ಅನ್ನದ ಜೊತೆ ತೊಟ್ಟಿನ ಬಳಿ ಇನ್ನೂ ಹಸಿರು ಸೊನೆ ಸುರಿಸುವ ಅಪ್ಪೆಕಾಯಿ ಮಾವಿನ ಮಿಡಿ ಉಪ್ಪಿನಕಾಯಿ. ಜೀರಿಗೆ ಮೆಣಸು ಹಾಕಿದ್ದರಿಂದಲೋ ಏನೋ ಖಾರವೂ ಹಿತವಾಗಿತ್ತು. ಅಜ್ಜಿ ಹಾಕಿದ “ಎಂಜಿಲು ಮುಸುರೆಯ” ಎಲ್ಲಾ ನಿಯಮಗಳನ್ನು ಮುರಿದು ಉಪ್ಪಿನಕಾಯಿ ಮಿಡಿಯನ್ನು ತೊಳೆದುಕೊಂಡು ಊಟದ ನಂತರ ತಿನ್ನುವುದು ಮಕ್ಕಳಿಗೆ ಪ್ರೀತಿ. ಉಪ್ಪಿನಕಾಯಿ ಹಾಕಿದ ಕೂಡಲೇ, ಅಂಜನಾ ಕೇಶವ ಇಬ್ಬರೂ ರಸವನ್ನು ಮೊಸರನ್ನಕ್ಕೆ ಬೆರೆಸಿ, ಮಿಡಿಯನ್ನು ಒಂದು ಬದಿಯಲ್ಲಿ ಅನ್ನದ ಅಡಿಯಲ್ಲಿ ಮುಚ್ಚಿಟ್ಟಿದ್ದರು. ಕೊನೆಯ ತುತ್ತು ತಿನ್ನುವಾಗ ಗೊತ್ತಾಗದಂತೆ ಬೆರಳುಗಳ ಮಧ್ಯೆ ಮಿಡಿಯನ್ನು ಸೇರಿಸಿಕೊಂಡು ಕೊನೆಯ ತುತ್ತು ಬಾಯಿಗೆ ಹಾಕಿಕೊಂಡು ತಟ್ಟೆ ತೆಗೆದುಕೊಂಡು ಕೇಶವ ಓಡಿದ್ದ. ಅಂಜನಾ ಅಜ್ಜಿಯ ಹದ್ದಿನ ಕಣ್ಣಿಗೆ ಸಿಕ್ಕಿಬಿದ್ದಿದ್ದಳು. ಮಿಡಿಯನ್ನು ಅಲ್ಲೇ ತಿನ್ನಬೇಕೆಂದು ಅಜ್ಜಿ ಆರ್ಡರ್ ಮಾಡಿದಾಗ ಬಾಯಲ್ಲಿ ಹಾಕಿಕೊಂಡು ಅಗಿದಂತೆ ನಟಿಸಿ ತಟ್ಟೆ ತೆಗೆದುಕೊಂಡು ಓಡಿದಳು. ಮಲಗಿದ ಮೇಲೆ ಮಿಡಿಯನ್ನು ಉಗುರಿನಲ್ಲಿ ಚೂರುಮಾಡಿ ಸ್ವಲ್ಪ ಸ್ವಲ್ಪವೇ ತಿನ್ನುವಷ್ಟರಲ್ಲಿ ನಿದ್ದೆ ಆವರಿಸಿತ್ತು.

ಕೇಶವನ ತಾಯಿ ಬೆಳಿಗ್ಗೆ ೬ ಗಂಟೆಗೇ ಇಬ್ಬರನ್ನೂ ಎಬ್ಬಿಸಿದರು. ಶಾಲೆಯ ಪುಸ್ತಕಗಳನ್ನು ಓದಲ್ಲಲ್ಲ. ತೋಟದ ಬಳಿಯಿರುವ ಮಾವಿನ ಮರದಿಂದ ಬಿದ್ದ ಹಣ್ಣುಗಳನ್ನು ಹೆಕ್ಕಲು. ಅತೀ ಬೇಗ ಹೋದರೆ ಕತ್ತಲೆಯಲ್ಲಿ ಬಿದ್ದ ಹಣ್ಣುಗಳು ಕಾಣಿಸುವುದಿಲ್ಲ. ಸ್ವಲ್ಪ ತಡವಾದರೂ ರಘು ಮೊದಲೇ ಹೋಗಿ ಹಣ್ಣು ಹೆಕ್ಕಿರುತ್ತಾನೆ. ಹೆಕ್ಕಿದ ಹಣ್ಣುಗಳೆಲ್ಲವನ್ನೂ ತಿನ್ನಲಾಗದಿದ್ದರೂ ಯಾರಿಗೆ ಅತೀ ಹೆಚ್ಚು ಸಿಕ್ಕಿತು ಎನ್ನುವುದೇ ಒಂದು ಸ್ಪರ್ಧೆ. ಬುಟ್ಟಿಯ ತುಂಬಾ ಹಣ್ಣು ತುಂಬಿಕೊಂಡು ಮನೆಗೆ ಬಂದು “ಇವತ್ತು ಇಷ್ಟು ಸಿಕ್ಕಿತು” ಎಂದು ತೋರಿಸುವುದೇ ಒಂದು ಹೆಮ್ಮೆಯ ವಿಷಯ. ಆ ಸಂತೋಷಕ್ಕಾಗಿ ಬೆಳಿಗ್ಗೆ ಬೇಗ ಏಳುವುದು ಇಬ್ಬರಿಗೂ ಕಷ್ಟವೆನಿಸುತ್ತಿರಲಿಲ್ಲ.

ಅಂದೂ ರಘು ಇವರಿಬ್ಬರಿಗಿಂತ ಮೊದಲೇ ಹೋಗಿ ತನ್ನ ಬುಟ್ಟಿಯನ್ನು ತುಂಬಿಸಿಕೊಂಡಿದ್ದ. ಅವನಿಗೆ ಶಾಪ ಹಾಕುತ್ತಲೇ ಉಳಿದಿದ್ದ ಹಣ್ಣುಗಳನ್ನು ಹೆಕ್ಕಿದರು. ಸಿಕ್ಕ ಅರ್ಧ ಬುಟ್ಟಿಯನ್ನು ಕೇಶವ ತಲೆಯ ಮೇಲೆ ಇಟ್ಟುಕೊಂಡು ಮನೆಗೆ ಬಂದಕೂಡಲೇ ಪುನಃ ಉಪ್ಪಿನಕಾಯಿ ಪುರಾಣ ಶುರುವಾಗಿತ್ತು. ರಾತ್ರಿ ನಿದ್ದೆ ಆವರಿಸಿದಾಗ ಕೈಯಲ್ಲಿದ್ದ ಉಪ್ಪಿನಕಾಯಿ ಹಾಸಿಗೆ ಮೇಲೆ ಬಿದ್ದಿದ್ದು ಗೊತ್ತೇ ಆಗಿರಲಿಲ್ಲ. ಬೆಳಿಗ್ಗೆ ಮಾವು ಹೆರಕುವ ಸಂಭ್ರಮದಲ್ಲಿ ಉಪ್ಪಿನಕಾಯಿ ಹುಡುಕುವುದು ಮರೆತುಹೋಗಿತ್ತು. “ಎಷ್ಟು ಸಾರಿ ಹೇಳಿದರೂ ಹೀಗೆ. ಇರುವೆ ಬಂದು ಕಚ್ಚುತ್ತವೆ ನೋಡಿ” ಅಜ್ಜಿ ಬೈಯುತ್ತಲೇ ಇದ್ದರು. ಕೇಶವನ ತಾಯಿ ಇಬ್ಬರಿಗೂ ಕುಡಿಯಲು ಹಾಲು ಕೊಟ್ಟು ಬೇಗ ಬೇಗ ಹೋಗಿ ಸ್ನಾನ ಮಾಡಿ ರೆಡಿ ಆಗಿ ಎಂದು ಅಜ್ಜಿಯ ಕಣ್ಣೆದುರಿಂದ ದೂರವಾಗುವಂತೆ ಮಾಡಿದರು.

ಸ್ನಾನ ಮಾಡಿ ಆಮೇಲೆ ಸ್ವಲ್ಪ ಓದಿದ ಶಾಸ್ತ್ರ ಮಾಡಿ ತಯಾರಾಗುವಷ್ಟರಲ್ಲಿ ಬೆಳಿಗ್ಗೆ ತಿಂಡಿಯ ಸಮಯ. ಬೆಳಿಗ್ಗೆ ಸಾಮಾನ್ಯವಾಗಿ ಗಂಜಿ ಊಟ. ಗಂಜಿಯ ಜೊತೆ ಒಂದು ಚಮಚ ತುಪ್ಪ ಮತ್ತು ತರ ತರದ ಉಪ್ಪಿನಕಾಯಿಗಳು. ಅಮಟೇಕಾಯಿ, ನೆಲ್ಲಿಕಾಯಿ, ಹಸಿಮೆಣಸು ಇಂಗು ಹಾಕಿ ಹಸಿಯಾಗಿ ಕೊಳೆಸಿದ ನಿಂಬೆಹಣ್ಣಿನ ಕೊಳಕು(ಕೊಳಕು ಎಂದರೆ ಹಾಳಾಗಿದ್ದು ಎಂದರ್ಥವಲ್ಲ. ಉಪ್ಪಿನ ಕಾಯಿಯ ಹೆಸರೇ ಕೊಳಕು ಎಂದು, ಅದರ ಹೆಸರು ಕೇಳಿದರೇ ಬಾಯಲ್ಲಿ ನೀರೂರುತ್ತದೆ), ಮಾವಿನಕಾಯಿ ಅಪ್ಪೆ ಮಿಡಿ ಹೀಗೆ ಹಲವಾರು ತರದ ಉಪ್ಪಿನಕಾಯಿಗಳು. ತಟ್ಟೆ ತುಂಬಾ ಕೆಂಪಕ್ಕಿಯ ಗಂಜಿ. ಪ್ರತಿದಿನ ತಿಂದರೂ ಹೊಸತೆನಿಸುವಂತಹ ರುಚಿ. ಉಪ್ಪಿನಕಾಯಿಯ ಮಹಿಮೆಯೇ ಹೌದು. ಹಾಗಾಗಿಯೇ ಎನ್ನಿಸುತ್ತೆ ಉಪ್ಪಿನಕಾಯಿ ನೋಡಿದ ತಕ್ಷಣ ಅಜ್ಜಿಯ ಬೈಗುಳ ಮಕ್ಕಳ ಮನಸ್ಸಿನಿಂದ ಸಂಪೂರ್ಣ ಮರೆಯಾಗಿ ಪುನಃ ಅಜ್ಜಿಯ ಕಣ್ಣಿಗೆ ಮಣ್ಣೆರಚುವ ತಂತ್ರಗಳು ಆವರಿಸಿಕೊಂಡಿದ್ದು.

ಗಂಜಿ ಊಟ ಮುಗಿಸುವಷ್ಟರಲ್ಲಿ ರಘು ಶ್ರೀಮತಿಯರ ಸವಾರಿ ಹಾಜರ್. ಶಾಲೆಗೆ ಹೋಗುವಾಗ ಹೊಸದಾಗಿ ಗೆಳತಿಯರಾದ ಲಲಿತ ಸುಮಿತ್ರರನ್ನೂ ಜೊತೆಗೂಡಿಸಿಕೊಂಡು ಹೋಗೋಣವೆಂದು ಅವರ ಮನೆಯ ಹತ್ತಿರ ಹೋದರೆ ಅವರ ತಾಯಿ, “ಲಲಿತ ಸುಮಿತ್ರಾ ಶಾಲೆಗೇ ಹೋಗಿಯಾಯಿತು” ಎಂದು ಹೇಳಿದರು. ಮಾತನಾಡುತ್ತಾ, ಒಬ್ಬರ ಬ್ಯಾಗ್ ಇನ್ನೊಬ್ಬರು ಎಳೆಯುತ್ತಾ ಶಾಲೆ ತಲುಪಿದ್ದೇ ತಿಳಿದಿರಲಿಲ್ಲ. “ದೇವಿ ಶಾರದೆ …” ಪ್ರಾರ್ಥನೆ ಮುಗಿಸಿ ಶಾಲೆಯೊಳಗೆ ಹೋದರೆ ಇನ್ನು ೨-೩ ಗಂಟೆಗಳು ಮಕ್ಕಳಿಗೆ ಜೈಲಿನ ಅನುಭವ. ಮಾಸ್ಟರುಗಳು ಏನು ಹೇಳುತ್ತಾರೋ ಅವರಿಗೇ ಗೊತ್ತು. ಮಕ್ಕಳ ಮನಸ್ಸು ಶಾಲೆಯ ನಾಲ್ಕು ಗೋಡೆಗಳ ಆಚೆಯೇ ಓಡಾಡುತ್ತಿತ್ತು. ಮಧ್ಯಾಹ್ನ ಊಟದ ಸಮಯದಲ್ಲಿ ಯಾವ ಮರ ಹತ್ತುವುದು? ಯಾವ ಮರದಲ್ಲಿ ಚಿಗುರೆಲೆಗಳು ಚಿಗುರಿವೆ? ಐಸ್ ಕ್ಯಾಂಡಿ ಮಾರುವ ಸಾಹೇಬ್ರು ಇವತ್ತು ಯಾವ ಬಣ್ಣದ ಐಸ್ ಕ್ಯಾಂಡಿ ತರುತ್ತಾರೆ… ಹೀಗೆ ಯೋಚಿಸಲು ನೂರಾರು ವಿಷಯಗಳು. ಪ್ರಶ್ನೆ ಕೇಳಿದಾಗ ಎಚ್ಛೆತ್ತುಕ್ಕೊಂದು ಕಕ್ಕಾಬಿಕ್ಕಿಯಾಗಿ ಬೈಸಿಕೊಳ್ಳುವುದು ಕೆಲವರ ಜಾಯಮಾನವಾದರೆ, ಅರ್ಧ ಗಮನ ಪಾಠದ ಮೇಲಿಟ್ಟು, ಇನ್ನರ್ಧವನ್ನು ಹೊರಗೆ ಓಡಾಡಲು ಬಿಡುವುದು ಕೆಲವರ ಜಾಣತನ.

ಹನ್ನೊಂದು ಗಂಟೆಗೆ ಮೊದಲ ವಿರಾಮ. ಶಾಲೆಯಲ್ಲಿ ಶೌಚಾಲಯಗಳು ಇರಲಿಲ್ಲ. ಹುಡುಗಿಯರು ಗುಂಪುಗುಂಪಾಗಿ ಶಾಲೆಯ ಆಟದ ಮೈದಾನದ ಪಕ್ಕದಲ್ಲಿ ಬಿದಿರಿನ ಮರಗಳ ಬಳಿ ಹೋದರೆ, ಗಂಡುಮಕ್ಕಳು ಶಾಲೆಯ ಮೈದಾನದ ಪಕ್ಕದಲ್ಲಿದ್ದ ಕಪ್ಪೆ ಗುಂಡಿ ಎಂಬ ಕೆರೆಯ ಕಡೆಗೆ ಹೆಜ್ಜೆ ಹಾಕಿದರು. ಬಿದಿರಿನ ಮರಗಳ ಪಕ್ಕದಲ್ಲಿದ್ದ ಕಾಂಗ್ರೆಸ್ ಗಿಡಗಳ ಪೊದೆಗಳ ಮಧ್ಯೆಯೇ ಶೌಚಾಲಯ. ಎರಡು ಗಿಡಗಳನ್ನು ಬಗ್ಗಿಸಿ ಗಂಟು ಹಾಕಿದರೆ ಅದು ಬಾಗಿಲು ಹಾಕಿದಂತೆ. ನೇತ್ರ ನಿನ್ನೆ ಬಾಗಿಲು ಹಾಕಿದ ಶೌಚಾಲಯದೊಳಗೆ ಕುಮುದ ಹೋಗಿ ಕೂತಿದ್ದಳು. ನೇತ್ರ ಬರುವುದು ಸ್ವಲ್ಪ ತಡವಾಗಿತ್ತು. ಜಗಳಕ್ಕೆ ಬೇರೆ ಕಾರಣಗಳೇನೂ ಬೇಕಿರಲಿಲ್ಲ. ನನ್ನ ಗಿಡಗಳ ಮಧ್ಯೆ ನೀನ್ಯಾಕೆ ಕುಳಿತೆ? ಬೀಗ ಹಾಕಿದ್ದು ಕಣ್ಣಿಗೆ ಕಾಣಿಸಲಿಲ್ಲ್ವಾ? ಕುಮುದ ಬೈಯುತ್ತಿದ್ದರೆ, ನೇತ್ರ ಆರಾಮಾಗಿ ಪೊದೆಗಳ ಮಧ್ಯೆ ಕುಳಿತಿದ್ದಳು. ಅಷ್ಟರಲ್ಲಿ ಕುಮುದಳ ಕಣ್ಣಿಗೆ ಕಾಂಗ್ರೆಸ್ ಎಲೆಗಳನ್ನು ಕೀಳುತ್ತಿದ್ದ ಪೂರ್ಣಿಮಾ ಕಾಣಿಸಿದ್ದಳು. ಬರೀ ಮೂತ್ರ ಮಾಡುವುದಾದರೆ ಆ ಪೊದೆಗಳು, ಕಪ್ಪೆ ಗುಂಡಿ ಸಾಕಾಗಿತ್ತು. ಆದರೆ ಎರಡಕ್ಕೆ ಹೋಗುವುದಾದರೆ? ಒರೆಸಿ ಶೌಚ ಮಾಡಿಕೊಳ್ಳಲು ಕಾಂಗ್ರೆಸ್ ಎಲೆಗಳೇ ಗತಿ. ಆ ರೀತಿ ಶುಚಿಗೊಳಿಸಿಕೊಂಡು ಬಂದು ಕ್ಲಾಸಿನ ಒಳಗೆ ಕುಳಿತರೆ ಪಕ್ಕದವರಿಗೆ ಮೂಗು ಮುಚ್ಚಿಕೊಳ್ಳುವುದು ಬಿಟ್ಟರೆ ಬೇರೆ ದಾರಿಯಿರುತ್ತಿರಲಿಲ್ಲ. ಅದರ ಸೂಚನೆ ಸಿಕ್ಕ ಕೂಡಲೇ ಕುಮುದ ಮುಖ ವಾರೆ ಮಾಡಿ, “ಪೂರ್ಣಿಮಾ, ಎರಡಾ ಮನೆಯಲ್ಲಿ ಮಾಡಿಕೊಂಡು ಬರಬಾರ್ದಾ? ಇನ್ನು ದಿನವಿಡೀ ವಾಸನೆ ತಡೀಬೇಕು ” ಎಂದು ಬೈಯ್ಯುತ್ತಿದ್ದರೆ, ಪೂರ್ಣಿಮಾ ಮುಖದಲ್ಲಿ “ಅದೂ ಹೇಳಿ ಕೇಳಿ ಬರುತ್ತದೆಯೇ? ಅರ್ಜೆಂಟ್ ಆದರೆ ನಾನೇನು ಮಾಡಲಿ?” ಎನ್ನುವ ಭಾವ.

ಇತ್ತ ಹುಡುಗರ ಗುಂಪಿನಲ್ಲಿ ಕಪ್ಪೆಯ ಗುಂಡಿಯಲ್ಲಿ ಉಚ್ಛೆ ಹುಯ್ಯ್ಯುವಾಗ ಯಾರು ಹೆಚ್ಚು ದೂರ ಹಾರಿಸುತ್ತಾರೆ ಎನ್ನುವ ಸ್ಪರ್ಧೆ ಶುರುವಾಗಿತ್ತು. ರಘು ಮತ್ತು ಕೇಶವ ಯಾವಾಗಲೂ ಒಟ್ಟಿಗೇ ಇರುವುದು. ಮಾವಿನ ಕಾಯಿ ಹೆಕ್ಕುವುದರಲ್ಲೂ ಸ್ಪರ್ಧೆ. ಮೂತ್ರ ಮಾಡುವುದರಲ್ಲೂ ಸ್ಪರ್ಧೆ. ಅಂದು ವಸಂತ  ಸ್ಪರ್ಧೆಯಲ್ಲಿ ಕೊನೆಯವನಾಗಿದ್ದ. “ವಸಂತ ಹುಡ್ಗಿರ ತರ ಮಾಡ್ತಾನೆ” ಎಂದು ರೇಗಿಸುತ್ತಾ ಒಬ್ಬರನ್ನೊಬ್ಬರು ಅಟ್ಟಿಸಿಕೊಂಡು ಓಡುತ್ತಿರುವಷ್ಟರಲ್ಲಿ ವಿರಾಮ ಮುಗಿದ ಗಂಟೆ ಬಾರಿಸಿತ್ತು.

ಕೇಶವ ಮತ್ತು ಅಂಜನಾಳಿಗೆ ಮಧ್ಯಾಹ್ನ ಊಟಕ್ಕೆ ಬೆಳಿಗ್ಗೆಯೇ ಬಿಸಿ ಬಿಸಿ ಅಡುಗೆ ಮಾಡಿ ಮೂರಂತಸ್ತಿನ ಟಿಫನ್ ಕ್ಯಾರಿಯರ್ ನಲ್ಲಿ ಹಾಕಿ ಬುತ್ತಿ ಕಟ್ಟಿ ಕೊಟ್ಟಿದ್ದರು. ಒಂದು ಬಾಕ್ಸಿನಲ್ಲಿ ಅನ್ನ, ಇನ್ನೊಂದರಲ್ಲಿ ಹುಳಿ /ಸಾಂಬಾರ್, ಇನ್ನೊಂದರಲ್ಲಿ ಪಲ್ಯ. ಕೇಶವ ಊಟ ಮಾಡಲು ತನ್ನ ಸ್ನೇಹಿತರ ಗುಂಪನ್ನು ಸೇರಿದರೆ, ಅಂಜನಾ ಲಲಿತ ಸುಮಿತ್ರರ ಸ್ನೇಹಿತೆಯರ ಗುಂಪನ್ನು ಸೇರಿದ್ದಳು. ಎಲ್ಲರೂ ಶಾಲೆಯ ಕಾರಿಡಾರಿನಲ್ಲಿ ಅಲ್ಲಲ್ಲಿ ಗುಂಪುಗುಂಪಾಗಿ ವೃತ್ತಾಕಾರದಲ್ಲಿ ಕುಳಿತು ಮಾತನಾಡುತ್ತಾ ಊಟ ಮಾಡುತ್ತಿದ್ದರು. ಅಷ್ಟರಲ್ಲಿ  ೪ನೇ ಕಾಸಿನ ಮೀನಾಕ್ಷಿ ಬಸಮ್ಮಳನ್ನು ಕೇಳಿದಳು, “ನಿಮ್ಮ ಮನೆಯಲ್ಲಿ ಪ್ರತಿದಿನ ಗಂಜಿ ಊಟವೇ? ಪ್ರತಿದಿನ ಅದನ್ನೇ ತರುತ್ತೀಯಲ್ಲ” ಮೀನಾಕ್ಷಿ ಕುತೂಹಲದಿಂದ ಕೇಳಿದ ಪ್ರಶ್ನೆ ಬಸಮ್ಮಳಿಗೆ ಹಂಗಿಸುವ ಮಾತಾಗಿ ತೋರಿತ್ತು.  ಆಕೆ ತಕ್ಷಣ “ಹೌದು. ನಾವು ಬಡವರು. ಕಾಯಿ ಪಲ್ಯೆ ತರಲು ನಮಗೆ ತಾಕತ್ತಿಲ್ಲ. ನಿಮ್ಮಂತೆ ಶ್ರೀಮಂತರಲ್ಲ. ಪ್ರತಿದಿನ ಗಂಜಿ ಊಟ ಮಾಡುತ್ತೇವೆ. ನೀನು ದೌಲತ್ ತೋರಿಸಬೇಡ. ” ಎಂದು ಜೋರಾಗಿ ಜಗಳವನ್ನೇ ಶುರು ಮಾಡಿದ್ದಳು. ಮೀನಾಕ್ಷಿ ಯಾಕಾದರೂ ಆ ಪ್ರಶ್ನೆ ಕೇಳಿದೆನೋ ಎಂಬಂತೆ ಪೆಚ್ಚು ಮುಖ ಮಾಡಿಕೊಂಡು ತಲೆತಗ್ಗಿಸಿ ತನ್ನ ಊಟದ ಡಬ್ಬಿಯಲ್ಲಿದ್ದ ಒಣಕಲು ದೋಸೆಯನ್ನು ತಿನ್ನಲು ಶುರುಮಾಡಿದಳು. ಅಂಜನಾಳಿಗಿಂತ ಮೂರು ಕ್ಲಾಸ್ ಮುಂದಿದ್ದ ಅವರಿಬ್ಬರೊಂದಿಗೂ ಮಾತನಾಡಲು ಅಂಜನಾಳಿಗೆ ಹೆದರಿಕೆ. ಮನಸ್ಸಿನಲ್ಲಿ ” ಗಂಜಿ ಊಟ ಅದೆಂತಾ ಸ್ವರ್ಗ. ತರಕಾರಿ ಪಲ್ಯ ತಿನ್ನುವುದು ಅದೆಷ್ಟು ಕಷ್ಟ. ತರಕಾರಿ ತಿನ್ನಬೇಕೆಂದು ಮನೆಯಲ್ಲಿ ಒತ್ತಾಯ ಮಾಡಿದಾಗ ಅದೆಷ್ಟು ಬಾರಿ ಕಣ್ಣಲ್ಲಿ ನೀರು ಬಂದಿದ್ದಿದೆ. ಇವರ್ಯಾಕೆ ಹೀಗೆ ಆಡುತ್ತಿದ್ದಾರೆ ? ಸಾಧ್ಯವಾಗಿದ್ದರೆ ನಮ್ಮ ಬಾಕ್ಸ್ ಬದಲಾಯಿಸಿಕೊಂಡು ತಿನ್ನಬಹುದಿತ್ತು. ” ಎನ್ನಿಸಿದರೂ, ಬಾಯಿ ಬಿಟ್ಟು ಆಡಲು ಹೆದರಿಕೆ. ಅಷ್ಟರಲ್ಲಿ ಮೀನಾಕ್ಷಿ ಅವಮಾನದಿಂದ ಬಸಮ್ಮಳೊಂದಿಗೆ ಟೂ ಬಿಟ್ಟಾಗಿತ್ತು. ಬಸಮ್ಮಳೂ ತೋರು ಮತ್ತು ಮಧ್ಯಬೆರಳನ್ನು ಒಂದರ ಮೇಲೊಂದು ಮಾಡಿ ಮೀನಾಕ್ಷಿಯೊಂದಿಗೆ ಟೂ ಬಿಟ್ಟಳು. “ಆದರೂ ಮೀ ವೈರಿ ಹಾಗೆ ಕೇಳಬಹುದಾ? ನಾವು ಬಡವರು. ಮೀ ವೈರಿಯಂತೆ ಶ್ರೀಮಂತರಲ್ಲ. ನಮ್ಮ ತಂದೆ ತಾಯಿ ಕಷ್ಟಪಟ್ಟು ಕೂಲಿ ಮಾಡುತ್ತಾರೆ. ಗಂಜಿ ಮಾಡುವುದೇ ಹೆಚ್ಚು. ಅವಳಿಗೆ ಅದೆಷ್ಟು ದೌಲತ್ತು ”  ಒಮ್ಮೆ ಟೂ ಬಿಟ್ಟರೆ, ಪುನಃ ಮಾತನಾಡುವಂತೆ ಮಾಡಲು ಟೀಚರುಗಳ ಮಧ್ಯವರ್ತಿಕೆಯೇ ಬೇಕಾಗುತ್ತಿತ್ತು. ಟೂ ಬಿಟ್ಟವರ ಹೆಸರನ್ನೂ ಹೇಳದೆ, “ಅ ವೈರಿ”, “ಪೂ ವೈರಿ” ಎಂದು ಅವರವರ ಹೆಸರಿನ ಮೊದಲ ಅಕ್ಷರದ ಜೊತೆ ವೈರಿ ಸೇರಿಸಿ ಅವರವರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಇವೆಲ್ಲಾ ಅಂಜನಾಳಿಗೆ ಹೊಸತು. ಲಲಿತ ಸುಮಿತ್ರಾ ಇದೆಲ್ಲಾ ಪ್ರತಿದಿನದ ಕಥೆ ಎನ್ನುವಂತೆ ತಲೆಬಗ್ಗಿಸಿ ತಾವು ತಂದಿದ್ದ ಬುತ್ತಿ ತಿನ್ನುತ್ತಿದ್ದರು.

ಊಟ ಮುಗಿಸಿ ಅಂಜನಾ, ಲಲಿತ ಸುಮಿತ್ರ ಶಾಲೆಯ ಆವರಣದಲ್ಲಿದ್ದ ಮೇ ಫ್ಲವರ್ ಮರದ ಕೆಳಗೆ ನಿಂತು ತಮ್ಮ ತಮ್ಮ ಮನೆಯಿಂದ ತಂದಿದ್ದ ಉಪ್ಪಿನಕಾಯಿಯ ಮಿಡಿಯನ್ನು ಹಂಚಿಕೊಳ್ಳಲು ಶುರುಮಾಡಿದರು. ಮಣ್ಣಿನಲ್ಲಿ ಕುಳಿತು ಆಟವಾಡಿ ಕೊಳೆಯಾದ ಸ್ಕೂಲ್ ಯುನಿಫಾರ್ಮ್ ನ ತುದಿಯಲ್ಲಿ ಮಾವಿನ ಮಿಡಿಯನ್ನು ಸುತ್ತಿ, ಹೊರಗಿನಿಂದ ಕಚ್ಚಿ (ಕಾಗೆ ಎಂಜಿಲು) ಚಿಕ್ಕ ಚಿಕ್ಕ ಪೀಸ್ ಮಾಡಿ ಹಂಚಿಕೊಳ್ಳಲು ಶುರುಮಾಡಿದರೆ, ಜೊತೆಗೆ ಇನ್ನೂ ನಾಲ್ವರು ಅವರವರ ಮನೆಯ ಉಪ್ಪಿನಕಾಯಿಗಳೊಂದಿಗೆ ಗುಂಪನ್ನು ಸೇರಿದ್ದರು. ಉಪ್ಪಿನಕಾಯಿ ಹಂಚಿಕೊಂಡು ತಿನ್ನುವುದರಲ್ಲಿ ಹೊಸ ಹೊಸ ಸ್ನೇಹಗಳು ಬೆಸೆಯುತ್ತಿದ್ದವು. ಕೆಲವೊಮ್ಮೆ ಸ್ನೇಹ ಒಡೆಯುವುದಕ್ಕೂ ಕಿರುಬೆರಳಿನ ಉಗುರಿನ ಗಾತ್ರದ ಉಪ್ಪಿನಕಾಯಿಯೇ ಕಾರಣವಾಗುತ್ತಿತ್ತು .

ಮುಂದುವರೆಯುವುದು…

ಹಿಂದಿನ ಭಾಗ

How do you like this post?

Click on a star to rate it!

Average rating 5 / 5. Vote count: 4

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಅಶ್ವಿನಿ ಕೋಟೇಶ್ವರ

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಜನನ ಮರಣದ ಮದ್ದು