Write to us : Contact.kshana@gmail.com

ಸಂಸ್ಕಾರ ಮನದಲ್ಲಿ ಚಿಗುರಲು ಸಮಯ ಬೇಕು

0
(0)
“ಅಮ್ಮಾ ನನಗೆ ಜಾಸ್ತಿ ಕೊಡುತ್ತೀಯಾ?” ಎಂದು ತನ್ನ ಪ್ರೀತಿಯ ತಿಂಡಿಯನ್ನು ಕೇಳುವಾಗ ಇನ್ನು ಅರ್ಧ ಗಂಟೆ ಉಪದೇಶ ಕೇಳಬೇಕಾಗುವುದೆಂದು ಆಕೆ ಯೋಚಿಸಿರಲಿಲ್ಲ.
ನಾನು ಮನೆಯಲ್ಲಿ ಮೊದಲ ಮಗುವಾಗಿದ್ದ ಕಾರಣ ಬೆಳೆದದ್ದೆಲ್ಲಾ ದೊಡ್ಡವರ ಒಡನಾಟದಲ್ಲಿಯೇ. ತಮ್ಮ ಜಗಳವಾಡುವಷ್ಟು ದೊಡ್ಡವನಾಗುವ ಮೊದಲೇ ಅಜ್ಜನ ಮನೆ ಸೇರಿಯಾಗಿತ್ತು. ಮಾವನ ಮಕ್ಕಳಲ್ಲಿ ಒಬ್ಬ ನನಗಿಂತ ದೊಡ್ಡವನಾದರೆ, ಇನ್ನೊಬ್ಬ ನನಗಿಂತ ಸುಮಾರು ಚಿಕ್ಕವನು. ಅತ್ತೆ ತಮ್ಮ ಚಿಕ್ಕ ಮಗನನ್ನು ಒಂದು ಕಡೆ ಸೊಂಟದ ಮೇಲೆ ಏರಿಸಿಕೊಂಡರೆ, ನನ್ನನ್ನು ಇನ್ನೊಂದು ಕಡೆ ಕೂರಿಸಿಕೊಂಡು ಓಡಾಡುತ್ತಿದ್ದಾಗ ಮನಸ್ಸಿನಲ್ಲಿ ಅಸೂಯೆ ಬೆಳೆಯಲು ಸಾಧ್ಯವೇ ಇರಲಿಲ್ಲ. ಆಸೆ ಪಟ್ಟಿದ್ದೆಲ್ಲಾ ಸಿಗದಿದ್ದರೂ, ಅಗತ್ಯಗಳಿಗಾಗಿ ಕಷ್ಟ ಪಟ್ಟಿದ್ದಿಲ್ಲ. ಅಜ್ಜ ದೊಡ್ಡಮ್ಮರ ಜೊತೆಯಲ್ಲಿ ಮನೆಯವರೆಲ್ಲರೂ ಸಂಕುಚಿತ ಮನೋಭಾವ ಮನಸ್ಸಿನಲ್ಲಿ ಮೂಡುವುದೇ ಅಪರಾಧ ಎನ್ನುವಷ್ಟು ಮಟ್ಟಿಗೆ ನೀತಿಗಳನ್ನು ಆಡುತ್ತಾ, ಅದರಂತೆ ನೆಡೆಯುತ್ತಾ ಇದ್ದಾಗ ಎಷ್ಟೇ ಇರಲಿ, ಹಂಚಿ ತಿನ್ನಬೇಕು, ಕೂಡಿ ಬಾಳಬೇಕು ಎನ್ನುವ ಭಾವನೆ ಬೆಳೆದಿದ್ದು ಸಹಜ.
ಅಂತದ್ದರಲ್ಲಿ ಮೊದಲ ಬಾರಿ ಮನಸ್ಸಿನಲ್ಲಿ ಕಸಿವಿಸಿ ಶುರುವಾಗಿತ್ತು. ಅದು ಮೊದಲ ಮಗು ಹೊಟ್ಟೆಯಲ್ಲಿದ್ದಾಗ. ದೊಡ್ಡವರು ಹೇಳುತ್ತಾರೆ, ಮಗು ಹೊಟ್ಟೆಯಲ್ಲಿ ಇರುವಾಗ ನಮ್ಮ ಮನಸ್ಥಿತಿ ಹೇಗಿರುತ್ತದೆಯೋ ಅದೇ ರೀತಿ ಮಗುವಿನ ಬೆಳವಣಿಗೆ ಆಗುತ್ತದೆ ಎಂದು. ಯಾಕೋ, ಈ ಥಿಯರಿಯನ್ನು ಒಪ್ಪಲಾಗುತ್ತಿಲ್ಲ. ಆ ಸಮಯ ಹಣ್ಣು, ಉಪ್ಪಿಟ್ಟು ಬಿಟ್ಟು ಬೇರೇನೂ ತಿಂದರೂ ವಾಂತಿಯಾಗುತ್ತಿತ್ತು. ಜೊತೆಗೆ ನಿಶ್ಯಕ್ತಿ. ಆಗ ಮಾವಿನ ಕಾಲ ಶುರುವಾಗಿತ್ತು ಅಷ್ಟೇ. ಸಿಕ್ಕಾಗ ಒಂದೆರಡು ಮಾವಿನ ಹಣ್ಣು ತಂದರೆ, ಎಲ್ಲಿ ಮನೆಯಲ್ಲಿರುವ ಬೇರೆಯವರು ತಿಂದುಬಿಡುತ್ತಾರೋ ಎನ್ನುವ ಸಂಕಟ. ಅಷ್ಟೂ ಹಣ್ಣು ನನಗೇ ಬೇಕು ಎನ್ನಿಸಲು ಶುರುವಾಗಿತ್ತು. ಮುಚ್ಚಿಟ್ಟು ತಿನ್ನುವ ಬಯಕೆ. ನನಗೇ ಆಶ್ಚರ್ಯ, ನನಗೇನಾಗಿದೆ ಎಂದು. ಈ ಸ್ವಭಾವ ಇದ್ದಿದ್ದು ಮಗು ಹುಟ್ಟುವವರೆಗೆ ಮಾತ್ರ. ಆಮೇಲೆ ಪುನಃ ನಾನು ನಾನಾಗಿದ್ದೆ. ಹಾಗಾಗಿ ಮಗು ಹೊಟ್ಟೆಯಲ್ಲಿರುವಾಗ ಮಗುವಿನ ಗುಣ ತಾಯಿಗೆ ಬರುತ್ತದೆ ಎನ್ನುವುದು ನನ್ನ ಥಿಯರಿ.
ದೊಡ್ಡ ಮಗಳಿಗೆ ಒಬ್ಬಳೇ ಇದ್ದ ಕಾರಣ ಅಸೂಯೆ ಪಡುವ, ಒಕ್ಕುಂಟ್ಲಿ ಮಾಡುವ ಪ್ರಮೇಯವೇ ಇರಲಿಲ್ಲ. ತನ್ನ ಆಟದ ಸಾಮಾನುಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವಾಗ ಆಕೆ ಹಿಂಜರಿದಿದ್ದು ಸುಮಾರು ೭-೮ ವರ್ಷಗಳ ಕಾಲ ನೋಡಲೇ ಇಲ್ಲ. ಒಬ್ಬರೇ ಮಕ್ಕಳಾದರೆ ಒಕ್ಕುಂಟಲಿಯಾಗುತ್ತಾರೆ. ಎರಡು ಮಕ್ಕಳು ಇರಬೇಕು ಎಂದವರಿಗೆಲ್ಲಾ ಸವಾಲು ಹಾಕುತ್ತಿದ್ದೆ. ತಂಗಿ ಬೇಕು ತಂಗಿ ಬೇಕು ಎನ್ನುವ ಹುರುಪು ಉಳಿದಿದ್ದು ತಂಗಿ ತುಂಟಾಟ ಮಾಡುವ ತನಕ ಮಾತ್ರ. ತನ್ನ ಆಟದ ಸಾಮಾನುಗಳನ್ನು ಮನೆಯಲ್ಲೇ ಇರುವ ತಂಗಿಯೊಂದಿಗೆ, ಎಲ್ಲಾ ಸಮಯವೂ ಹಂಚಿಕೊಳ್ಳಬೇಕಾದ ಪ್ರಮೇಯ ಬಂದಾಗ ಓದಾರತೆ ಕ್ರಮೇಣ ಮಾಯವಾಗತೊಡಗಿತ್ತು. ೭ ವರ್ಷಗಳ ಅಂತರವಿದ್ದರೂ ಕೂಡ. ಆಕೆ ನಿನ್ನ ತಂಗಿ. ನೀನೆ ಬೇಕೆಂದು ಆಸೆಪಟ್ಟು ಹುಟ್ಟಿದವಳು. ೭ ವರ್ಷಗಳ ಕಾಲ ಎಲ್ಲಾ ನಿನ್ನೊಬ್ಬಳದ್ದೇ ಆಗಿತ್ತು. ನಮ್ಮ ಪ್ರೀತಿಯೂ ಕೂಡ. ಇಷ್ಟು ದಿನ ಹಂಚಿಕೊಳ್ಳುವಾಗ ಹಿಂಜರಿಯುತ್ತಿರಲಿಲ್ಲ. ತಂಗಿಯನ್ನು ಪ್ರೀತಿಸು ಎಂದು ಹೇಳುವುದು ಸುಲಭವಾದರೂ, ತುಂಟತನ ಮಾಡುತ್ತಿದ್ದ, ಜುಟ್ಟು ಎಳೆಯುತ್ತಿದ್ದ ತಂಗಿಯೊಂದಿಗೆ ಹಂಚಿಕೊಳ್ಳುವುದು ಆಕೆಗೆ ಕಷ್ಟವಾಗುತ್ತಿತ್ತು.
ಹೀಗೆ ಒಂದು ದಿನ ಆಕೆಗೆ ಇಷ್ಟವಾದ ಏನೋ ತಿಂಡಿ ಮಾಡಿದಾಗ ಅಚಾನಕ್ಕಾಗಿ ಆ ಪ್ರಶ್ನೆ ಬಂದಿತ್ತು. “ಅಮ್ಮಾ ನನಗೆ ಜಾಸ್ತಿ ಕೊಡುತ್ತೀಯಾ?”. ನನ್ನ ದೃಷ್ಟಿಯಲ್ಲಿ ಅದೊಂದು ಅಪರಾಧವಾಗಿತ್ತು. ಎಲ್ಲವನ್ನೂ ಹಂಚಿ ತಿನ್ನಬೇಕು. ಜಾಸ್ತಿ ಎನ್ನುವುದು ಸ್ವಾರ್ಥ. ಆ ಸ್ವಾರ್ಥ ಕೆಟ್ಟದ್ದು. ನಾನು ಅಮ್ಮ, ನಿನ್ನ ಹೊಟ್ಟೆಗೆ ಎಷ್ಟು ಬೇಕು ಎಂದು ನನಗೆ ಗೊತ್ತಾಗುವುದಿಲ್ಲವೇ? ಎಲ್ಲರಿಗೂ ಬೇಕಾದಷ್ಟು ಮಾಡಿರುವುದಿಲ್ಲವೇ? ಸರಿಯಾಗಿ ಹಂಚುವುದಿಲ್ಲವೇ? ಹಾಗಿರುವಾಗ ಆ ಪ್ರಶ್ನೆ ಕೇಳುವ ಅಗತ್ಯವೇನಿದೆ? ಎಂದು ನನ್ನ ವಾದ. “ನಾನು ಬರೀ ಕೇಳಿದೆ ಅಷ್ಟೇ. ಕೇಳುವುದರಲ್ಲಿ ತಪ್ಪೇನು?” ಆಕೆಯ ವಾದ. ಆಕೆ ಬೆಳೆಯುತ್ತಿರುವ ಪರಿಸರದಲ್ಲಿ ಆ ಪ್ರಶ್ನೆ ಖಂಡಿತವಾಗಿಯೂ ತಪ್ಪಾಗಿರಲಿಲ್ಲ. ಯಾಕೆಂದರೆ ಇಲ್ಲಿ ನಮ್ಮಲ್ಲಿರುವಂತೆ ಉಪಚಾರಕ್ಕಾಗಿ ಊಟೋಪಚಾರ ವಿಚಾರಿಸುವಾಗ ತಿಂದು ಬರದಿದ್ದರೂ, “ಬೇಡ” ಎಂದು ಹೇಳಿ, ಉಪಚರಿಸುವವರು “ಸ್ವಲ್ಪ ತೆಗೆದುಕೊಳ್ಳಿ” ಎಂದು ಉಪಚಾರ ಮಾಡುವ ಸಂಸ್ಕೃತಿ ಇಲ್ಲಿಯದಲ್ಲ. ಹಸಿವಿದ್ದರೆ, ಬಾಯಾರಿಕೆಯಿದ್ದರೆ ಕೇಳಿದಾಗ ಬೇಕಿದ್ದರೆ “ಬೇಕು” ಎನ್ನಬೇಕು. ಬೇಡವಾಗಿದ್ದಲ್ಲಿ “ಬೇಡ ” ಎನ್ನಬೇಕು. ಬೇಡ ಎಂದು ಹೇಳಿದ ಮೇಲೆ “ಸ್ವಲ್ಪ ತೆಗೆದುಕೊಳ್ಳಿ” ಎಂದು ಒತ್ತಾಯವೇ ಇರುವುದಿಲ್ಲ. ಬೇಕು ಎಂದರೂ ತಪ್ಪು ತಿಳಿಯುವ ಅಥವಾ “ಬೇಕೆಂದು ಕೇಳಿದರಲ್ಲ” ಎಂದು ಅಂದುಕೊಳ್ಳುವ ಸ್ವಭಾವವೂ ಇರುವುದಿಲ್ಲ. ನೇರ ನುಡಿ ಅಷ್ಟೇ.
ಊರಿಂದ ಬರುತ್ತಿದ್ದ ಗೆಳೆಯರೊಬ್ಬರು ಅವರ ಜರ್ಮನ್ ಗೆಳೆಯರ ಮನೆಯಲ್ಲಿ ಉಳಿಯಬೇಕಾಗಿತ್ತು. ಬರುವಾಗ ಮೊದಲು ಫೋನ್ ಮಾಡಿ, ಟೇಬಲ್ ಮ್ಯಾನರ್ಸ್ ಹೇಗಿರುತ್ತದೆ? ಹೇಗೆ ವ್ಯವಹರಿಸಬೇಕು? ಎಂದೆಲ್ಲಾ ಕೇಳಿದಾಗ ಹೇಳಿದ್ದೆ. “ಕೆಲವೊಮ್ಮೆ ಊಟಕ್ಕೂ ಒಣ ಬ್ರೆಡ್ ಅಥವಾ ಸಿಹಿಯಾದ ಕೇಕ್ ತಿನ್ನುತ್ತಾರೆ. ಬೇಯಿಸಿ ಮೊಸರು ಸೇರಿಸಿದ ಆಲೂಗೆಡ್ಡೆ ತಟ್ಟೆ ತುಂಬಾ ಸೇವಿಸುತ್ತಾರೆ. ಮೆಣಸು ಸೇರಿಸದ ಕಾರಣ ಗ್ಯಾಸ್ ಆಗುವುದಿಲ್ಲ.” ಜೊತೆಯಲ್ಲಿ ಸೇರಿಸಿದ್ದೆ, “ಸಂಜೆ ಆರರಿಂದ ಏಳು ಗಂಟೆಯ ಒಳಗೆ ರಾತ್ರಿಯ ಊಟ ಮಾಡುತ್ತಾರೆ. ಸಂಜೆಯ ಉಪಹಾರ ಎಂದುಕೊಳ್ಳಬೇಡಿ. ಊರಿನಲ್ಲಿ ನೆಂಟರ ಮನೆಯಲ್ಲಿ ಮಾಡುವಂತೆ ಹಸಿವಿದ್ದರೂ “ಪರವಾಗಿಲ್ಲ, ಬೇಡ” ಎಂದು ಸಂಕೋಚ ತೋರಬೇಡಿ. ಇಲ್ಲದಿದ್ದರೆ ಉಪವಾಸ ಇರಬೇಕಾಗುತ್ತದೆ. ಜಾಗ್ರತೆ. “
ಇಂತಹ ಪರಿಸರದಲ್ಲಿ ದಿನನಿತ್ಯ ಶಾಲೆಯಲ್ಲಿಯೇ ಊಟ ಮಾಡುವಾಗ ಬೇಕಾಗಿದ್ದಕ್ಕೆ ಬೇಕೆಂದು ಹೇಳಿ, ಸಾಕಾದಾಗ ಸಾಕು ಎಂದು ನೇರವಾಗಿ ಹೇಳುವ ಸ್ವಭಾವ ಬೆಳೆಸಿಕೊಂಡಿದ್ದು ತಪ್ಪಲ್ಲದಿದ್ದರೂ, ನನ್ನ ಬಳಿ, ಅದೂ ಅಮ್ಮನ ಬಳಿ “ನನಗೆ ಜಾಸ್ತಿ ಬೇಕು” ಎಂದು ಕೇಳಿದ್ದು ನನ್ನ ತಾಯ್ತನಕ್ಕೆ ಒಡ್ಡಿದ್ದ ಸವಾಲಾಗಿತ್ತು. ಇಲ್ಲಿಯ ರೀತಿನೀತಿಗಳಿಗೂ, ನಮ್ಮ ರೀತಿನೀತಿಗಳಿಗೂ ವ್ಯತ್ಯಾಸ ವಿವರಿಸಿ, “ಜಾಸ್ತಿ” ಎಂದು ಕೇಳಿದ್ದು ಸ್ವಾರ್ಥ ಎಂದು ಒಂಬತ್ತು ವರ್ಷದವಳಿಗೆ ತಿಳಿಸುವ ಪ್ರಯತ್ನ ಮಾಡಿದ್ದು ನನ್ನ ಕಡೆಯಿಂದ ಸ್ವಲ್ಪ ಓವರ್ ರಿಯಾಕ್ಷನ್ ಆಗಿತ್ತೇನೋ. ಆದರೂ ಆ ಕ್ಷಣದಲ್ಲಿ ಅದೇ ಸರಿಯೆಂದು ತೋರಿತ್ತು.
ಇಂತಹ ಸಂದರ್ಭಗಳು ಬಂದಾಗ ಉತ್ತರ ಹುಡುಕುವುದು ಬರೀ ಇಬ್ಬರಲ್ಲಿ. ಒಬ್ಬರು ಜಯಶೀಲ ಮಾವ. ಇನ್ನೊಬ್ಬರು ಮುಕುಂದ್ ಮಾಸ್ಟರ್ಜಿ. ಜಯಶೀಲ ಮಾವನವರಲ್ಲಿ “ನಾವು ಸ್ವಾರ್ಥ ಕಲಿಸದಿದ್ದರೂ ಮಕ್ಕಳು ಸ್ವಾರ್ಥ ಬೆಳೆಸಿಕೊಂಡರೆ ಅವರೊಂದಿಗೆ ಹೇಗೆ ವ್ಯವಹರಿಸಬೇಕು ? ” ಎಂದು ಕೇಳಿದಾಗ “ಮಕ್ಕಳಿಗೆ ನೀತಿಗಳನ್ನು ನಾವು ಪಾಲಿಸುವ ಮೂಲಕ ಕಲಿಸುವ ಪ್ರಯತ್ನ ಮಾಡುವುದು ಹಾಗೂ ಬಾಯಿಯಿಂದ ತಿಳಿಹೇಳುವುದು ಎರಡೂ ಮಣ್ಣಿನಲ್ಲಿ ಬೀಜ ಬಿತ್ತಿದಂತೆ. ಇವತ್ತು ಬಿತ್ತಿದ ಬೀಜ ಇವತ್ತೇ ಮೊಳಕೆಯೊಡೆಯುವುದಿಲ್ಲ. ಹಾಗೆಯೇ ಬಿತ್ತಿದ ಬೀಜಗಳೆಲ್ಲವೂ ಮೊಳಕೆಯೊಡೆಯುತ್ತವೆ ಎಂಬುದೂ ಇಲ್ಲ. ಪ್ರಯತ್ನ ಮಾತ್ರ ನಮ್ಮದು. ಮೊಳಕೆಯೊಡೆಯಲು ಸರಿಯಾದ ಸಮಯವೂ ಕೂಡಿ ಬರಬೇಕು. ನಮ್ಮ ನಡವಳಿಕೆಗಳ ಮೂಲಕ ಮಾತಿನ ಮೂಲಕ ಬಿತ್ತಿದ ಬೀಜಕ್ಕೆ ನೀರೆರೆಯುವ ಪ್ರಯತ್ನ ಮಾತ್ರ ನಾವು ಮಾಡುತ್ತಿರಬೇಕು. ತುಂಬಾ ತಲೆಕೆಡಿಸಿಕೊಳ್ಳುವ, ಶಿಕ್ಷಿಸುವ ಅಗತ್ಯವಿಲ್ಲ. ಬೆಳೆದಂತೆ ಬದಲಾಗುತ್ತಾರೆ.” ಎಂದು ಹೇಳಿದಾಗ, “ಹೌದಲ್ಲವೇ. ನಮ್ಮಲ್ಲಿಯೂ ಇದ್ದ ಅದೆಷ್ಟೋ ಕೆಟ್ಟ ಗುಣಗಳನ್ನು ತಂದೆ ತಾಯಿಯರೋ , ಶಿಕ್ಷಕರೋ ಅಥವಾ ಮನೆಯ ಯಾರೋ ಹಿರಿಯರೋ ಆಡಿದ ಮಾತುಗಳನ್ನು ನೆನಪಿಸಿಕೊಂಡು, ಅಥವಾ ಅವರು ನೆಡೆದ ದಾರಿಯನ್ನು ನೆನೆದು ತಿದ್ದಿಕೊಂಡಿಲ್ಲ? ದಾರಿಯಲ್ಲಿ ಹತ್ತು ಪೈಸೆ ಸಿಕ್ಕರೂ ದೇವರ ಹುಂಡಿಗೆ ಹಾಕುವಂತೆ ಪ್ರೇರೇಪಿಸುತ್ತಿದ್ದ ದೊಡ್ಡಮ್ಮನ ಗುಣ, ಚಿನ್ನದ ಉಂಗುರ ಅದೂ ಯಾವುದೊ ದೇಶದ ನಿರ್ಜನವಾದ ಬೀಚಿನಲ್ಲಿ ಸಿಕ್ಕಾಗ, ಚಿನ್ನವೆಂಬ ಆಸೆ ಮನಸ್ಸಿನಲ್ಲಿ ಕೊಂಚವೂ ಮೂಡದೇ ದೊಡ್ಡಮ್ಮನ ನೀತಿಯನ್ನು ಪಾಲಿಸುವಂತೆ ಮಾಡಿರಲಿಲ್ಲವೇ? ” ನೆನಪಾಗಿತ್ತು.
ಮೊನ್ನೆ ಚಿಕ್ಕ ಮಗಳ ಗೆಳತಿಯೊಬ್ಬಳು ಮನೆಗೆ ಬಂದಿದ್ದಳು. ಇಬ್ಬರೂ ಟಿವಿ ನೋಡುತ್ತಿದ್ದರು. ಚಳಿ ಜೋರಾಗಿತ್ತು. ಚಿಕ್ಕ ಮಗಳು ತಮ್ಮಿಬ್ಬರಿಗೂ ಹೊದಿಕೆ ತೆಗೆದುಕೊಳ್ಳಲು ಉಪ್ಪರಿಗೆಗೆ ಬಂದು ಹಾಸಿಗೆಯ ಮೇಲಿದ್ದ ಒಂದು ದಪ್ಪದ, ಇನ್ನೊಂದು ಸ್ವಲ್ಪ ತೆಳುವಾದ ಹೊದಿಕೆ ತೆಗೆದುಕೊಂಡು ಕೆಳಗೆ ಹೊರಟಾಗ ದೊಡ್ಡ ಮಗಳು “ಸೋಹಂ, ನಿನ್ನ ಗೆಳತಿಗೆ ದಪ್ಪದ ಹೊದಿಕೆ ಕೊಡು. ನೀನು ತೆಳುವಾಗಿರುವುದನ್ನು ಹೊದ್ದುಕೊ” ಎಂದು ಹೇಳಿದಾಗ “ಅರೇ ಇದೇನು?” ಎಂದು ನನ್ನ ಹುಬ್ಬು ಮೇಲೇರಿತ್ತು . ಚಿಕ್ಕ ಮಗಳು “ಯಾಕೆ?” ಎಂದು ಕೇಳಿಯೇ ಬಿಟ್ಟಳು. “ಆಕೆ ನಮ್ಮ ಅತಿಥಿ ಆಕೆಗೆ ಇರುವುದರಲ್ಲಿ ಒಳ್ಳೆಯದನ್ನು ಕೊಡಬೇಕು” ದೊಡ್ಡ ಮಗಳು ಉತ್ತರಿಸಿದಾಗ ಜಯಶೀಲ ಮಾವ ಪುನಃ ನೆನಪಾಗಿದ್ದರು. ಜೊತೆಗೆ ಮಾಸಿದ್ದ ಬೆಡ್ ಶೀಟ್ ಮೇಲೆ ಮಲಗಿ ನೆಂಟರು ಬಂದಾಗ ಮಾತ್ರ ಅವರಿಗಾಗಿ ಹೊಸ ಬೆಡ್ ಶೀಟ್, ಹೊಸ ಕಂಬಳಿ ತೆಗೆದು ಉಪಚರಿಸುತ್ತಿದ್ದ ಅಪ್ಪ, ಚಿಕ್ಕಪ್ಪಂದಿರೂ ಕೂಡ

How do you like this post?

Click on a star to rate it!

Average rating 0 / 5. Vote count: 0

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಅಶ್ವಿನಿ ಕೋಟೇಶ್ವರ

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಶರಣನೊಲು ಬದುಕೇಳು