Write to us : Contact.kshana@gmail.com
0
(0)
ಕೇರಿಯ ದಾರಿಗೆ ಬಹು ತಗ್ಗಿನಲ್ಲಿತ್ತು ಈ ಗುಡಿಸಲು. ಪಕ್ಕದಲ್ಲಿರುವುವು ಕೊಟ್ಟಿಗೆಗಳಾಗಿದ್ದವು. ಇದೂ ಕೂಡ! ಮಳೆ ಬಂದಾಗಂತೂ ಬೀದಿಯ ನೀರೆಲ್ಲ ಒಳನುಗ್ಗಿ ಎತ್ತೆತ್ತಲೋ ಸಾಗಿ ಮಾರಾಮಾರಿವೇರ್ಪಡುತ್ತಿತ್ತು ಪ್ರತೀ ವರ್ಷವೂ ! ದೊಡ್ಡ ಕುಟುಂಬದಲ್ಲಿ ಒಂದು ರೂಪಾಯಿಯ ಜಗಳಕ್ಕೆ  ಅವಮಾನಿತನಾಗಿ ಬೇರ್ಪಟ್ಟ ಹಿರಿಮಗ ತನ್ನವೆರಡು ಕಂದಮ್ಮಗಳನ್ನೂ ಛಲಗಾತಿ ಮಡದಿಯನ್ನೂ ಈ ಗುಡಿಸಲೆಂಬ ಕೊಟ್ಟಿಗೆಗೆ ಸಾಗಿಸಿದ್ದ. ಎರಡು ಗಂಗಾಳ, ಹಿತ್ತಾಳೆ ಕೊಳಗ, ಕೊಣಗೆ ಇವಿಷ್ಟೆ ಇವರೊಂದಿಗೆ ಬಂದ ಬಳುವಳಿಗಳು. ಉಳಿದಂತಿನ್ನು ಸ್ವಯಾರ್ಜಿತ. ಎರಡು ಜಲ್ಲೆ ಸಾಗುವಷ್ಟು ಅಗಲ, ದೊಡ್ಡಬಾವಿ ಹಗ್ಗದಷ್ಟು ಉದ್ದವಿದ್ದ ಜಾಗದಲ್ಲಿ ಹತ್ತುಹೆಜ್ಜೆಯುದ್ದದ ಸೋಗೆಹುಲ್ಲಿನ ಗುಡಿಸಲಿದು. ಉಳಿದದ್ದು ಹಾಳು ಹಿತ್ತಲು.
ಸೂರಿನ ಗಳದೊಳಗಾಡುವ ಗುಂಗೆ ಹುಳುಗಳೇ ಈ ಮಕ್ಕಳಿಗೆ ಒಡನಾಡಿಗಳು. ದೊಡ್ಡವರ ಮುನಿಸುಗಳಿಗೆ ಮೊದಲು ಕಮರುವ ಪುಷ್ಪಗಳಿವು. ಎಲ್ಲರಿದ್ದೂ ಅನಾಥವಾಗುವುವು. ಹೊಸಜೀವನ ಶುರುವಿಟ್ಟ ಮೇಲೆ ಈ ದಂಪತಿಗಳ ದುಡಿಮೆ ಕೇಳಬೇಕೆ? ಹಗಲು,ರಾತ್ರಿ,ಮುಂಜಾವು ಹೀಗೆ ದಿನವೊಂದಕ್ಕೆ ಮೂರಾಳಿನ ದುಡಿಮೆ. ಗೋಧಿ ಕಡ್ಲೆ ಕೊಯ್ಲಿಗೆ ಬಂದ ಸಮಯವಾದ್ದರಿಂದ ಬಿಡುವೇ ಇಲ್ಲ.
ರಂಗ, ಭೈರವಿ ಪುಟಾಣಿಗಳಿನ್ನು ಚಿಕ್ಕವು. ಏನೇನೋ ತಿನ್ನುವಾಸೆ. ಅಮ್ಮಪ್ಪನ ಶ್ರಮ ಸುಸ್ತು ನೋಡಿ ಬಾಯ್ಕಟ್ಟಿವೆ. ಹೀಗೊಂದು ಮುಂಜಾವು. ಎತ್ತಿನಗಾಡಿಗಳೆಲ್ಲ ಹೊಲದೆಡೆಗೆ ಹೋಗುವ ಸದ್ದು ಕಿವಿಗೆ ಬೀಳುತ್ತಿದೆ. ಮಕ್ಕಳು ಆಗಿನ್ನು ಕಣ್ಣುಜ್ಜುತ್ತಿವೆ. ಮುದ್ದಿಸುವರಿಲ್ಲ… ಆಡಿಸುವರಿಲ್ಲ… ಹೀಗಾಗಿ ಅಳುವೆಂಬುದೇ ಮರೀಚಿಕೆ! ಮನೆಯ ಸೂರಲ್ಲೂ ಮಕ್ಕಳ ಒಡಲಲ್ಲೂ ಗುಂಗಾರಗಳಾಡುತ್ತಿವೆ! ಅಪ್ಪ ಅಮ್ಮ ಬಾಗಿಲ ಮುರುಕು ಕದಕ್ಕೆ ಹಗ್ಗ ಬಿಗಿದು ಕೂಲಿಗೆ ಹೋಗಿದ್ದಾರೆ. ಹುಳುಹಿಡಿದ ಬಾಗಿಲ ಪಡಕಿನಲ್ಲಿ ಕಣ್ಣರಳಿಸಿ ಹೊರಗೆ ನೋಡುತಿವೆ ಕಂದಮ್ಮಗಳು. ಬಾಗಿಲ ಹಳೆಯ ಧೂಳಿನ ಕಮಟು ವಾಸನೆ ಎಂದೋ ಸಹ್ಯವಾಗಿಬಿಟ್ಟಿದೆ. ‘ಯಾರಾದರೂ ಬರುವರೆ? ಅಮ್ಮನೇ ಬರುವಳು! ಬಾಗಿಲು ತೆರೆದು ಸಿಹಿ ಮುತ್ತನಿತ್ತು ರುಚಿಯಡುಗೆ ಮಾಡುವಳು!’ ಎಂದು ಕಾಯುತಿವೆ. ಎಷ್ಟು ಹೊತ್ತು ನೋಡುವುದು? ಹಾದಿಯಲ್ಲಿ ಹೆಜ್ಜೆಗಳು ಕರಗಿ, ಎತ್ತಿನ ಕೊರಳ ಗೆಜ್ಜೆದನಿ ಸೊರಗಿ ವಿರಳವಾಗುತ್ತಾ ಬಂದು ಇಲ್ಲವಾಗಿ ಬಿಡುವ ಸಮಯ!
ತಂಗಿ ಭೈರವಿಗೊಂದು ಮಿಂಚಿನಂಥ ಹೊಳಹು! ತಂಗಿಗಲ್ಲದೆ ಮತ್ತಾರಿಗೆ ಹೊಳೆಯುತ್ತವೆ? ಈ ಅಣ್ಣರೇ ಹೀಗೆ ನಿರಾಶೆ ಹೊದ್ದು ಮಲಗಲು ಕಾತರಿಸುವರು. ಆದರೆ ತಂಗಿಯೆಂಬ ಚಿನಕುರಳಿ ಬಿಡಬೇಕಲ್ಲ? ಈಗದನು ಸಾಧಿಸಲು ಹಾಗೂ ಹೀಗೂ ಪುಟ್ಟ ಏಣಿಯೊಂದನಿಟ್ಟು ‘ಸೂರಿನ ಗಳುಗಳನ್ನೇ’ ಜೋಡಿಸಿಟ್ಟ ಅಟ್ಟವನೇರುವನು. ತಂಗಿಯನೂ ಎತ್ತಿಕೊಳ್ಳುವ… ಹಾಗಂದುಕೊಳ್ಳುವ…ಅವಳೋ ಹಾರಿಯೇ ಬಿಡುವಳು! ಸ್ವಲ್ಪ ಆಯ ತಪ್ಪಿದರೆ ಸಾಕು ಗಳುಗಳ ಸಂದುಗಳೊಳಗೆ ಈ ಪುಟಾಣಿ ಪಾದಗಳು ಸಿಲುಕಿ ಒದ್ದಾಡಿ ಬಿಡುವುವು.
‘ಅಗೋ ಅಲ್ಲಿದೆ!’ ದೊಡ್ಡಮ್ಮ ಕೊಟ್ಟಿದ್ದ ಅಮೂಲ್ ಡಬ್ಬಿ. ಏಡಿ ಹೆಜ್ಜೆಗಳನ್ನಿಟ್ಟು ಬಳಿ ಸಾರುವರು. ಆ ಪುಟ್ಟದೊಂದು ಡಬ್ಬಿಯೊಳಗಿದೆ ತೇರು ಹಬ್ಬಕ್ಕೆಂದು ಇಟ್ಟ ಸಕ್ಕರೆ. ಇನ್ನು ತಡವಿಲ್ಲ. ಮೊಳೆಯೊಂದರ ಸಹಾಯದಿಂದ ಮುಚ್ಚಳ ತೆಗೆದು ಸವಿಯುವರು. ಆಹಾ! ಅದೇನು ಆನಂದ? ಹಸಿದವನಿಗೆ ಎರೆಹೊಲದ ಮಧ್ಯೆ ಸಿಕ್ಕ ಪಿರ್ಕಿ ಟಮೋಟೋ ಹಣ್ಣಿನಂತೆ! ಬಿಸಿಲ ಬಯಲಲಿ ಬಳಲಿ ಬೆಂಡಾದವನಿಗೆ ಕುರಿಗಾಹಿಯೊಬ್ಬ ನೀಡಿದ ಬೊಗಸೆ ಹಾಲಿನಂತೆ!
‘ಅಣ್ಣಾ, ಸಕ್ಕರೆ ಅದೆಷ್ಟೋ ಸಿಹಿಯೋ! ಚೆನ್ನಿದೆ ಅಲ್ವೇನೋ?’
‘ಪಪಿ, ಮೆಲ್ಲಗೆ ಮಾತಾಡೇ! ಕಳ್ಳರು ಕೇಳಿಸಿಕೊಂಡು ಕದ್ದು ಬಿಟ್ಟಾರು!’
ಆದರೆ ಎಷ್ಟು ತಿನ್ನುವುದು? ಎರಡೇ ಎರಡು ಸಕ್ಕರೆ ಗುಕ್ಕಿಗೆ ತಲೆ ಕೊಟ್ರಿಸಿ ಬಿಟ್ಟಿದೆ. ಸಕ್ಕರೆ ಬಗ್ಗೆ ಅವರಿಗಿದ್ದ ಅತ್ಯಾಸೆಯಲ್ಲ ಈಗ ಮಂಜು ಮಂಜು! ಅದೂವರೆಗು ಇರದಿದ್ದ ‘ಅಪ್ಪಮ್ಮನ ಭಯ’ ಧುತ್ತನೆದ್ದು ನರ್ತಿಸ ತೊಡಗಿತು. ನಾಜೂಕಾಗಿ ಎಲ್ಲ ಮುಚ್ಚಿಟ್ಟು ಕೆಳಗಿಳಿಯುವ ಗಡಿಬಿಡಿಯಲ್ಲಿ ಡಬ್ಬಿ ಉರುಳಿ ಸಕ್ಕರೆಯೆಲ್ಲ ಆರಿದೊಲೆಯ ಬೂದಿಯಲ್ಲಿ ಒಂದಾಗಿತ್ತು!
ಈಗ ಅಮ್ಮ ಬರುವ ನಿರೀಕ್ಷೆ ಭಯವನ್ನು ತರಿಸಿದೆ.
ಮಕ್ಕಳ ಕಣ್ಗಳು ಬಾಗಿಲ ಸಂಧಿಯಲ್ಲಿ ನಡುಗುತ್ತಿದ್ದವು…!
~~~~~~~ *** ~~~~~~~
ಮೋಡಗಳನೇ ಮೆಟ್ಟಿ ತುಳಿವಂತೆ ಹೆಜ್ಜೆಯಿಕ್ಕುತ ಭತ್ತದ ನಾಟಿಯನ್ನು ಮುಗಿಸುವುದರಲ್ಲಿ ನಿರತಳಾಗಿದ್ದಾಳೆ ಚೆನ್ನಮ್ಮ. ಬಾನಲೆದ್ದು ಬರುತಿರುವ ಮೋಡಗಳು ಈಕೆಯ ಮನವನ್ನಾವರಿಸಿ ಗುಡುಗುತಿವೆ. ಕತ್ತಲು ಕಾಳಸರ್ಪದಂತೆ ಏಳುತಿರೆ ಇವಳು ಕೃಷ್ಣನನ್ನೂ ನಾಚಿಸುವಷ್ಟು ಉದ್ವಿಗ್ನಳಾಗಿದ್ದಾಳೆ. ಕೂಲಿಕೆಲಸ ಎಷ್ಟು ದುಡಿದರೂ ಅಷ್ಟೇ ಬಂತು. ಅತ್ತ ತಲೆಗಿಲ್ಲ, ಇತ್ತ ಕಾಲಿಗಿಲ್ಲದ ಕಂಬಳಿ. ಸಿಗುವ ಐದು ರೂಪಾಯಿ ಕೂಲಿಗೆ ಕುಡುಕಟ್ಟೆಯಿಂದ ಹತ್ತುಮೈಲಿ ದೂರದ ಕೃಷ್ಣಪುರಕ್ಕೆ ಬಂದಿದ್ದಾರೆ. ಐದುರೂಪಾಯಿಯೇನು ಕಡಿಮೆಯೆ? ಎರಡು ಬುಧವಾರದ ಸಂತೆಗಾಗುವಷ್ಟರ ಸಂಪತ್ತದು. ಈಗ ಕೆಲಸದ ಹುಮ್ಮಸ್ಸೆಲ್ಲ ಕರಗಿ ಮುಂಗಾರಿನ ಈ ಆರ್ಭಟಕೆ ಜೀವ ನಡುಗುತಿದೆ. ಗಂಡ ಶೇಖರ ಊಟದ ಗಂಟೆಲ್ಲವನ್ನು ಎತ್ತಿಕೊಂಡು ಬದುಗಳನ್ನು ಹಾರುತ್ತ ಬರುತಿದ್ದಾನೆ…. ‘ಬೇಗ ಹೊರಡು ಮನೆಯಲ್ಲಿ ಅವೆರಡೇ ಇವೆ. ಏನು ಗತಿಯೋ! ಏನೋ?’. ಇದನ್ನೇ ಕಾಯುತ್ತಿದ್ದ ಚೆನ್ನಮ್ಮ ಕೆಸರುಗದ್ದೆಗುಟ್ಟ ಸೀರೆಗಚ್ಚೆಯನ್ನೂ ಸರಿಪಡಿಸಿಕೊಳ್ಳದೆ ಊರಹಾದಿಯೆಡೆಗೆ ದಾಪುಗಾಲಿಕ್ಕುವಳು.
ಹತ್ತುಮೈಲಿಯೇನು ಸಾಮಾನ್ಯವೇ? ಒಂದು ಹೊಳೆ, ಎರಡು ಹಳ್ಳ ದಾಟಿ, ಲಾರಿರಸ್ತೆ ತಪ್ಪಿಸಿ ಸರ್ಕಾರಿ ಜಾಲಿ ಪ್ಲಾಂಟೇಶನ್ನಿನ ಅಡ್ಡಕಾಲುದಾರಿ ಹಿಡಿದು ಇನ್ನೇನು ದೇಹ ಸೋತು… ಕಾಲು ಸತ್ತವು ಎನ್ನುವಷ್ಟು ದೂರ! ಇದೆಲ್ಲ ಇವರಿಗೆ ದೂರವೇ ಅಲ್ಲ ಹೀಗಾಗಿ ಕೂಲಿಗಂತು ಬರವಿಲ್ಲ. ಬೇಕಾದರೆ ಚಂದ್ರನಲೂ ಕಳೆ ತೆಗೆದುಬರುವ ಛಲವುಳ್ಳವರು!  ಮಳೆಯ ಆರ್ಭಟ ಕೃಷ್ಣಪುರದ ಪಡುವಣದಿಂದ ದಾಂಗುಡಿಯಿಡುತಿದೆ… ಕುಡುಕಟ್ಟೆಯ ದಿಬ್ಬ… ದೊಡ್ಡಾಲದ ಮರ ಯಾವುದು ಕಾಣುತ್ತಿಲ್ಲ. ಮಳೆ ಬರುತ್ತಿರುವ ದಿಕ್ಕನ್ನು ಹಿಡಿದು ಸಾಗಿದ್ದೇ… ಸಾಗಿದ್ದು… ಹೊಳೆಯಂತೂ ರುದ್ರಜಟೆಯಂತೆ ನರ್ತಿಸುತ್ತಿದೆ. ಬೆಳಗ್ಗೆ ಪಾದವನ್ನೂ ಏರದಿದ್ದ ನೀರಿನ ಹರಿವು ಈಗ ಏರಡಾಳಿನೆತ್ತರಕ್ಕೆ ಉಕ್ಕಿ ಹರಿಯುತ್ತಿದೆ. ಊರಕಡೆ ಹೊರಟ ಕೂಲಿಯಾಳುಗಳೆಲ್ಲ ಅಪ್ಪಿ…ಜಗ್ಗಿ…ಎಳೆದುಕೊಂಡು ಸಾಗುತಿದ್ದರೆ…..
ಶೇಖರ ಚೆನ್ನಮ್ಮನ ಇಬ್ಬರು ಪುಟಾಣಿಗಳಿಲ್ಲಿ ಗುಬ್ಬಚ್ಚಿಗಳಾಗಿವೆ. ಕುಡುಕಟ್ಟೆಯಲ್ಲಿ ವರ್ಷಧಾರೆಗೆ ಮಾದನಕೆರೆ, ಚೌಡಿಹಳ್ಳವೆಲ್ಲ ತುಂಬಿರೆ… ಊರೊಳಗಣ ತಿಪ್ಪೆಗುಂಡಿ ಚರಂಡಿಗಳೆಲ್ಲ ಉಕ್ಕಿ ಮನೆಕಣಕೊಟ್ಟಿಗೆಗಳೆಲ್ಲ ರಾಡಿಯಾಗಿವೆ. ಶಿಶುವಾರದಿಂದ ವಾಪಾಸ್ಸಾದ ರಂಗ,ಭೈರವಿ ಈ ಸಂಜೆ ಮಳೆಗೆ ಹೆದರಿ ತಮ್ಮ ಗುಡಿಸಲಿಗೆ ಹೋಗದೆ ಸೋಮಜ್ಜಿ ಕರಿಹೆಂಚಿನ ಮನೆ ಕಟ್ಟೆಯಲ್ಲೇ ಕೂರುವರು. ಸೋಮಜ್ಜಿಯ ಮನೆಗೂ ನೀರು ನುಗ್ಗಿತ್ತಾದರೂ ಅಂದು ಅವರ ಮನೆಯಲ್ಲೇನೋ ಸಡಗರ! ಕಿರಿಮಗಳು ತೌರಿಗೆ ಬಂದಿರುವಳು. ಹೋಳಿಗೆ ತುಪ್ಪದ ಘಮ ಆ ಮಳೆಯಾರ್ಭಟಕೂ ಹೆದರದೆ ಬೀದಿಯಲ್ಲಿ ವಿಹರಿಸುತಿದೆ.
ಈ ಮಕ್ಕಳಿಗೆ ಸೋಮಜ್ಜಿ ದೂರದ ಸಂಬಂಧಿಯೂ ಹೌದು. ಶೇಖರನಿಗೆ ದೊಡ್ಡಮ್ಮ. ಹಾಗಂತ ಮಕ್ಕಳು ಹೆಚ್ಚು ಸಲುಗೆ ಬೆಳೆಸರು. ಅಮ್ಮ ಹೇಳಿದ್ದಾಳೆ ‘ಮಂದಿ ಮನೆಬಾಗಿಲಿಗೆ ಹಾಗೆಲ್ಲ ಹೋಗಬಾರದು. ಹಲ್ಕಿರಿಯಬಾರದು’ ಎಂದು. ಈಗ ತಗ್ಗಿನಲ್ಲಿರುವ ತಮ್ಮ ಗುಡಿಸಲಿಗೆ ನೀರು ನುಗ್ಗುತ್ತಿರುವ ಕಾರಣ ಇಲ್ಲಿ ಆಶ್ರಯಿಸಿದ್ದಾರಷ್ಟೆ. ಈ ಮಕ್ಕಳಿಗೋ ಸೋಮಜ್ಜಿ ಮನೆಯೆದುರಿನ ಚರಂಡಿಯಲ್ಲಿ ತುಳುಕಾಡುತ ಬಳುಕಾಡುತ ಮುಳುಗೇಳುತ ಸಾಗುತಿರುವ ವಸ್ತುಗಳೆಡೆಗೇ ಗಮನ! ತಮ್ಮ ಜೀವನದಲ್ಲೆಂದೂ ಕಾಣದಿದ್ದ ಅವೆಷ್ಟೋ ಸಂಗತಿಗಳು ಚರಂಡಿ ಪಾಲಾಗಿರುವುದನ್ನು ಪಿಳಿಪಿಳಿ ನೋಡುತಿವೆ! ಬಿಳಿಚಪ್ಪಲಿ, ಕೆಂಪುಟೋಪಿ, ಹಿಡಿ ಮುರಿದ ಸ್ಲೇಟು, ಲೆದರ್ ಬೆಲ್ಟ್, ಹಲ್ಲುಪುಡಿ ಡಬ್ಬ, ಬಾಯ್ಚೀಪುತಿರುವ ಅಮೂಲ್ ಬೇಬಿಯ ತೃಪ್ತ ಮೊಗ… ಕೆಲವರ ಮನೆಯ ಪಾತ್ರೆಗಳೂ ತೇಲಿ ಬಂದಿವೆ. ಜೊತೆಗಿಷ್ಟು ನಾಯಿಮೂಳೆ, ರಾಶಿ ರಾಶಿ ಭಿನ್ನ ವಿಭಿನ್ನ ಕಸ! ಊರಿಗೊಂದು ಮಹಾಮಜ್ಜನ! ಹೀಗೆ ಬರುತಿರುವ ವಸ್ತುವೈವಿಧ್ಯ ನೋಡುವ ಕುತೂಹಲ ಭೈರವಿಗೆ. ಎದ್ದೆದ್ದು ಕೂರುವಳು. ಇಣುಕಿಣುಕಿ ನೋಡುವಳು. ಸೋಮಜ್ಜಿಗೆ ಬೇರೇನೋ ಅನುಮಾನ… ಒಳಗೊಳಗೆ ಮುಳಮುಳ… ‘ಧಡಾರ್! ಧಮ್..ಧಮ್! ಗಡಗುಡು’ ಕದವಿಕ್ಕುವಳು. ಬೀಟೆಮರದ ಕರ್ರನೆ ಜಾತಿಯ ದಪ್ಪನೆ ಕದ! ಮಕ್ಕಳು ಸಿಡಿಲು ಬಡಿದಂತಾಗಿ ಬೆಚ್ಚಿ ಕೂರುವರು. ನಿರ್ಭಾಗ್ಯ ಬಡ ಮಕ್ಕಳ ಹಣೆಬರೆಹವೇ ಇಷ್ಟು. ಎಲ್ಲೆ ಕೂರಲಿ… ಮತ್ತೆಲ್ಲೇ ನಿಲ್ಲಲಿ ನಮ್ಮ ಸಂಪತ್ತನ್ನು ನುಂಗಲೆಂದೇ ಬಂದಿವೆಯೆಂದು ಮೂಗು ಮುರಿಯುವರು ಜನ. ಸ್ವಾಭಿಮಾನವನ್ನೇ ಮೈವೆತ್ತಿದ್ದರೂ ಜಗತ್ತಿಗಿವರೇ ಮೊದಲ ಆಹಾರ!
ಮಳೆ ನಿಂತು ಊರೆಲ್ಲ ತಣ್ಣಗೆ ಮಲಗಿತ್ತು. ದಪದಪ ತಪತಪ ಹೆಜ್ಜೆ ಸದ್ದು ಕೇಳಿದೊಡನೆ ಮಕ್ಕಳ ಮನದಲ್ಲೊಂದು ಗೆಜ್ಜೆನಾದ. ಆ ಕತ್ತಲರಾಶಿಯಲಿ ಹೊಳೆವ ಕಣ್ಗಳಿಂದ ಅಪ್ಪ ಅಮ್ಮನನ್ನು ಬರಸೆಳೆದು ತಬ್ಬುವರು. ಅಪ್ಪ ಬಂದವರೆ ಗುಡಿಸಲೊಳಗಿನ ನೀರಿಗೊಂದು ದಾರಿ ಕಾಣಿಸಿ ನೆರಕೆಗೊರಗುವನು. ಇನ್ನು ಅಮ್ಮಳೋ ಅದೇ ಮೊನ್ನೆ ಹಬ್ಬದ ಹುಳ್ಳಿಕಟ್ಟಿನ ಸಾರಿಗೆ ಮುದ್ದೆ ತಟ್ಟಿ ಇಡುವಳು. ಇಬ್ಬರಿಗೊಂದೇ ನಿರಾಳ ಭಾವ, ಮಕ್ಕಳು ಸೌಖ್ಯವಿದ್ದಾರೆ! ಮಳೆಯ ಚಳಿಗೆ ಏನೇನೋ ಕನಸು ಕಂಡಿದ್ದ ಮಕ್ಕಳಿಗೆ ಸಪ್ಪೆಸಾರು-ಮುದ್ದೆ ತಣ್ಣೀರೆರೆಚಿತ್ತು. ನಾಲ್ಕು ದಿನವಾಯಿತು… ಅದೇ ಸಾರು ಪ್ರತೀದಿನ ನೀರಿನೊಂದಿಗೆ ಕುದಿಕುದಿ ಕುದ್ದು ಗುದ್ದಾಡಿ ತನ್ನೆಲ್ಲ ಜೀವರಸ ಕಳೆದುಕೊಂಡು ಬಾಡಿ ಬೆಂಡಾಗಿತ್ತು!
ಇನ್ನೇನು ‘ಉಸ್ಸಾಪ್ಪಾ…ಶಿವಶಿವ’ ಎಂದು ಈಚಲುಚಾಪೆ ಸುರುಳಿ ಬಿಚ್ಚಬೇಕೆನ್ನುವಷ್ಟರಲ್ಲಿ ರಂಗ, ‘ಅಮ್ಮ, ನನ್ನದೇನು ತಪ್ಪಿಲ್ಲಮ್ಮ! ಭೈರವಿನೆ ಹೇಳಿದ್ದು. ಇಲ್ಲಿ ತುಂಬ ಕೆಸರು, ಸೋಮಜ್ಜಿ ಮನೆ ಕಟ್ಟೆಯಲ್ಲಿ ಕೂತಿರೋಣ ಬಾರೋ ಅಂತ…’ ಎನ್ನುವಷ್ಟರಲ್ಲಿ ಸೋಮಜ್ಜಿ ಮಕ್ಕಳನ್ನು ನೋಡಿ ಕದವಿಕ್ಕಿದರ ಮರ್ಮ ಚೆನ್ನಮ್ಮಳನ್ನು ಕಂಗೆಡಿಸಿತು.
ಮೊನ್ನಿನ ಹಬ್ಬಕೂ ಒಂದೊಳ್ಳೆ ಅಡುಗೆ ಮಾಡಲಾಗಲಿಲ್ಲ. ಅದೇ ಹುಳ್ಳಿಕಟ್ಟು, ನೀರುನೀರು ಹಾಲು. ಅದನ್ನೇ ಅಮೃತ ಮಾಡಿ ತಿಂದವು. ಅದಕೂ ಮೊನ್ನೆ ಹಾಳುಹೊಟ್ಟೆಗೆ ಸಕ್ಕರೆ ತಿಂದು ಬೇಧಿ ಬೇರೆ ಮಾಡಿಕೊಂಡಿದ್ದವು. ‘ಹನುಮಪ್ಪ, ಚಿನ್ನದಂಥ ಮಕ್ಕಳ ಕೊಟ್ಟು ಅದೇನು ಪರೀಕ್ಷೆ ಅಂತೀನಿ ನಿಂದು’. ಮಕ್ಕಳನ್ನು ತಟ್ಟಿ ಮಲಗಿಸುವಳು.
ಮುಂಜಾವಿಗೂ ಮುಂಚಿನ ಸಮಯ. ನಾಗಜ್ಜಿಯ ಕೋಳಿಯಿನ್ನೂ ಕೂಗಿಲ್ಲ. ಮಕ್ಕಳ ನರನಾಡಿಯಲ್ಲೇನೋ ಮಿಂಚಿನ ಸಂಚಾರ… ಮೂಗು ಮತ್ತೆ ಮತ್ತೆ ಪರೀಕ್ಷಿಸುತ್ತಿದೆ, ಮೆದುಳು ಒತ್ತಿ ಒತ್ತಿ ಖಾತ್ರಿ ಪಡಿಸುತಿದೆ. ಇದು ಹೋದವರ್ಷ ದೊಡ್ಡಮ್ಮನ ಮನೆಯಲ್ಲಿ ಕೆಂಡದಚನೆ ದಿನ ಮಾಡಿದ್ದ ಕರಿಗಡುಬಿನ ಪರಿಮಳ! ರಂಗ, ಭೈರವಿಗೆ ಒಮ್ಮೆಲೆ ಎಚ್ಚರಾಗುವುದು. ಮಳೆಬಿದ್ದ ಮಾರನೆಯ ದಿನದ ತಂಪುಹವೆ… ಕರಿಗಡಬಿನ ಬಿಸಿಬಿಸಿ ಅಲೆ… ಬಿದಿರ ಬುಟ್ಟಿಗೆ ಬೀಳುತ್ತಿದ್ದಂತೆ ಮಕ್ಕಳ ಬಾಯಲ್ಲಿ ಕರಗುತ್ತಿವೆ. ಯಾಲಕ್ಕಿಶುಂಠಿಯ ಸಣ್ಣನೆ ಘಮ ಬೇರೆ… ಬಾಯಿಗಿಡುವ ಅವಸರದಲ್ಲಿ ವಸಡನ್ನು ಬೆಚ್ಚಗಾಗಿಸುತಿದೆ ಸಿಹಿಹೂರಣ! ಆಹಾ, ಸುಹಿತ! ಶೇಖರನಿಗೂ ಒಳಗೊಳಗೆ ಖುಷಿ… ತಾನೆರಡು ತಿಂದು ಮತ್ತೆ ಮಲಗುವ.
ಕುಡುಕಟ್ಟೆಯ ದಪ್ಪನೀರಿಗೆ ಬೇಳೆಯಿರಲಿ ಬೆಲ್ಲ ಬೇಯುವುದೇ ದುಸ್ಸಾಧ್ಯ! ಅಂಥಾ ತೊಗರಿಬೇಳೆ ಬೇಯಿಸಿ… ಶಿವಿ ಹಿತ್ತಲಿನ ಯಮದುಂಡಿಯಲ್ಲಿ ಅದನ್ನು ತಿರುವಿ… ಆ ಸರಿರಾತ್ರಿ ಪಟ್ಟ ಶ್ರಮ ಮಕ್ಕಳ ಮೊಗದಲಿ ಕಮಲವನ್ನರಳಿಸಿತ್ತು!
ರಂಗ,ಭೈರವಿಗೆ ಬಿಡಿಸಲಾಗದೊಂದೇ ಒಗಟು! ಅಮ್ಮ ಅಷ್ಟೆಲ್ಲ ಸಾಮಾನು ಯಾವಾಗ? ಎಲ್ಲಿಂದ? ಹೇಗೆ ತಂದಳು? ಒಂದೇ ಎರಡೆ!? ಒಟ್ಟಿನಲ್ಲಿ ಅಮ್ಮಳೆಂದರೆ ಭೀಕರಮಳೆಯ ಮಾರನೆಯ ದಿನದ ರವಿಯಂತೆ! ಅವೆಷ್ಟು ಬೆಟ್ಟಗುಡ್ಡಗಳಿದ್ದರೂ ಅವುಗಳ ಮಧ್ಯೆಯೇ ಉದಯಿಸುವಳು. ಇಂದಿಗೂ!
~~~~~~~ *** ~~~~~~~
‘ಎಷ್ಟು ವರ್ಷವಾಯ್ತು ರಂಗ ಇನ್ನು ಶಿಶುವಾರಕ್ಕೇ ಹೋಗುತಿದ್ದಾನೆ. ಹೊಟ್ಟೆನಂಜಪ್ಪ ಮಾಷ್ಟ್ರಿಗೆ ಹೇಳಿ ಶಾಲೆಗೆ ಸೇರಿಸಬೇಕು. ನಾಲ್ಕಕ್ಷರ ಕಲ್ತು ದೊಡ್ಡ ಸಾಹೇಬಾಗದಿದ್ದರೂ ಹೋತು, ನಾಲ್ಕು ಮಂದಿ ಮಧ್ಯೆ ತಲೆಯೆತ್ತಿ ನಿಲ್ಲಬೇಕು!’ ಚೆನ್ನಮ್ಮ ಒಲೆಯ ಬೂದಿ ತೆಗೆದ ಕೈಯನ್ನು ಸೆರಗಿಗೊರಸಿಕೊಳ್ಳುವಳು.
ಶಿಶುವಾರದ ಅಷ್ಟೂ ದಿನಗಳನ್ನು ರಂಗನು ಬಿಳಿಜುಬ್ಬ-ಪೈಜಾಮ, ಭೈರವಿಯು ಗಿಣಿಕುಪ್ಪಸ-ನೆರಿಗೆ ಲಂಗದಲ್ಲೇ ಕಳೆದಿದ್ದಾರೆ. ಎರಡೇ ಎರಡು ಜೊತೆ. ಮಕ್ಕಳ ತಲೆಗೂದಲು ತೆಗೆಸುವಾಗ ಹೊಲಿಸಿದ್ದು. ಕೆಸರು ಧೂಳು ತಿಪ್ಪೆಗಳಲ್ಲೆಲ್ಲ ಓಡಾಡಿ ಮಸಿ ಅರಿಬೆಯಾಗಿವೆ. ಈಚಲುಚಾಪೆ ಬಿದಿರುಬುಟ್ಟಿ ಹಿತ್ತಲಬೇಲಿ ಬಣವೆ ಮುಡುಕೆ ನೆರಕೆಗೆಲ್ಲ ತರಚಿ ಬಟ್ಟೆಯ ನೂಲೆಲ್ಲ ಗಾಳಿಗೆ ಹಾರಾಡುತ್ತಿವೆ. ‘ಲಂಕಾದಹನ’ ನಾಟಕದ ಜಾಂಬುವಂತನ ಪಾರ್ಟಿಗೆ ಹೇಳಿ ಮಾಡಿಸಿದಂತಿವೆ! ‘ಶಾಲೆ ಅಂದ್ರೆ ಸುಮ್ನೇನಾ? ಎಂಥೆಂಥೋರ ಮಕ್ಕಳೆಲ್ಲ ಬರ್ತಾರೆ!’ ಎಂದುಕೊಳ್ಳುತ್ತಿದ್ದಂತೆ ಟ್ರಂಕಿನ ಮೇಲಿದ್ದ ದಿಂಬು ಗೋಚರಿಸಿತು ಚೆನ್ನಮ್ಮಳಿಗೆ. ಥೇಟ್ ಬಟ್ಟೆಯಂಗಡಿಯಂತೆ! ಚೆನ್ನಮ್ಮಳ ಅಕ್ಕ ಸ್ವಲ್ಪ ಸ್ಥಿತಿವಂತರ ಮನೆ ಸೇರಿದ್ದಳು. ಎರಡು ಗಂಡು ಒಂದು ಹೆಣ್ಣು ಅವಳಿಗೆ. ಅವೀಗ ಹೈಸ್ಕೂಲು ಕಾಲೇಜು ಅಂತ ಹೋಗ್ತಿವೆ. ಅವರಳತೆಗೆ ಆಗದ ಹಳೆಬಟ್ಟೆಗಳೆಲ್ಲ ಈ ದಿಂಬನು ಸೇರಿವೆ.
ರಂಗನಿಗೊಂದು ಖಾಕಿಚಡ್ಡಿ, ಉದ್ದತೋಳಿನ ಚಕ್ಸ್ ಅಂಗಿ. ಭೈರವಿ ಸುಮ್ಮನಿರಬೇಕೆ? ಅವಳಿಗೂ ಒಂದು ಕಾಫೀ ಬಣ್ಣದ ಚೂಡಿದಾರ. ರಂಗನಿಗೆ ಚಡ್ಡಿ ನಿಲ್ಲದು. ಭೈರವಿ ಕಾಣಳು. ಮಕ್ಕಳ ಬೊಂಬೆಯಾಟಕೆ ತಾಯಿಯೊಡಲು ನಲುಗುತಿದೆ. ಭೈರವಿಗೆ ಹಳೆ ಬಟ್ಟೆಯನ್ನೇ ತೊಡಿಸಿ, ರಂಗನ ಚಡ್ಡಿಗೆ ಉಡುದಾರ ಬಿಗಿದು, ಅಂಗಿಯ ಉದ್ದ ತೋಳನು ಮಡಿಚಿ ಪಿನ್ನ ಹಾಕಿ ತೆಗೆದಿರಿಸುವಳು.
ರಾತ್ರಿಯೆಲ್ಲ ಏನೇನೋ ಚಡಿಪಡಿಕೆ ಭೈರವಿಗೆ! ಶಾಲೆಗೆ ಹೊರಟಿರುವವನು ಅಣ್ಣ. ಆದರೆ ಬಣ್ಣಬಣ್ಣದ ಕನಸುಗಳು ಮಾತ್ರ ತಂಗಿಗೆ! ಅಣ್ಣನ ಜೊತೆ ಅಷ್ಟು ದೂರ ಹೋಗಿ ಬರುವ ಉತ್ಸವದ ಸಂಭ್ರಮ ಹೇಳಲಾಗದು. ರಂಗನಿಗೋ ಭಯ! ಮಾಸ್ತರುಗಳೆಲ್ಲ ಕಂಬಳಿಮೀಸೆಯವರು…ಗುಡಾಣದಂಥ ಹೊಟ್ಟೆಯವರು!! ಏನು ಕಾದಿದೆಯೋ ಏನೋ? ಆದರೆ ಅಮ್ಮನ ಮಾತು ಮೀರನು. ಈಗಾಗಲೇ ಅನೇಕರು ಅಣಕಿಸಿದ್ದೂ ಇದೆ… ‘ಶಿಶುವಾರದ ಮಾಲ್ದಿ…ಉಪ್ಪಿಟ್ಟು ಒಳ್ಳೆ ರುಚಿ ಅಲ್ವೆನೋ ರಂಗ? ಆ ಶಾಲೆಯಲ್ಲೇನೈತಿ ಬರೀ ಪೆಟ್ಟು ತಲೆಚಿಟ್ಟು!’ ರಂಗನಿಗೆ ತಿನ್ನುವುದನು ಹಂಗಿಸಿದರಾಗದು. ಈ ಕಿಚ್ಚಿಗರ್ಧ ಶಾಲೆಕಡೆ ಮುಖ ಮಾಡಿದ್ದಾನೆ.
‘ಎಲ್ಲೀss ಕಿವಿ ಮುಟ್ಟು…ಆss ಸರಿಸರಿ…ಹೋಗಿ ಆ ಮೂಲೆ ಕ್ಲಾಸಿಗೆ ಕೂತ್ಕೋ. ಚೆನ್ನವ್ವ ಇಲ್ಲೊಂದು ಸೈನ್ ಹಾಕು’
‘ಸೈನ್’ ಎಂದ ಕೂಡಲೆ ಗಡಗಡ ನಡುಗುತಿದ್ದ ಚೆನ್ನಮ್ಮಳೀಗ ಪೆನ್ ಹಿಡಿದು ದೃಢವಾಗಿ ಹೆಸರು ಬರೆದು ಬಿಡುವಳು…. ‘ಚss ನss ಮss’ ದಾಖಲಾತಿ ಹಾಳೆಯ ಆಚೆ ಪುಟದಲ್ಲೂ ಮೂಡಿ, ಮಾಸ್ತರ ಮುಖ ಕೆಂಡವಾಗುವುದು. ಅಕ್ಷರತುಂಗಾದಲ್ಲಿ ಪೋಸ್ಟ್ ಮಾಸ್ತರ್ ಮೊಮ್ಮಗಳು ರೂಪ ಅಷ್ಟು ಚೆನ್ನಾಗಿ ಕಲಿಸಿದ್ದಾಳೆ… ಹೀಗೀಗ ಸೈನ್ ಮಾಡೋ ಅವಕಾಶಗಳೆ ಕಡಿಮೆಯಾಗಿವೆ ಬೇರೆ! ನನ್ನ ಮಗನಿಗೂ ಹೀಗೆ ಧೈರ್ಯ ಬರುವುದೆಂದು ಬೀಗುವಳು.
‘ಬರ್ತೀನಿ ಸರ್’ ಎಂದವಳೆ ತಿರುಗಿ ನೋಡ್ತಾಳೆ ಭೈರವಿನೇ ಇಲ್ಲ? ಸೀದಾ ಅಣ್ಣನ ಜೊತೆ ಮೂಲೆ ರೂಮಲ್ಲಿ ಕೂತು ಬಿಟ್ಟಿದ್ದಾಳೆ. ಆಕೆಗೆ ಗೊತ್ತೇ ಇಲ್ಲ! ನಾನು ಎಂದೆಂದಿಗೂ ಅಣ್ಣನ ಸಂಗಡವೇ ಇರೋದು! ಅವನೊಟ್ಟಿಗೇ ಜೀವನ ಪೂರ್ತಿ ಆಡೋದು ಎಂದುಕೊಂಡಿದ್ದಾಳೆ. ಮಗು ಮನಸ್ಸೇ ಹಾಗೆ…ಹೀಗಿರುವಂತೆಯೇ ಎಲ್ಲವೂ ಸುಂದರ! ಶಾಂತ! ಒಟ್ಟಾಗಿಯೇ ಇರುವೆವು. ನಾವೆಲ್ಲ ಒಂದು! ನಾಳೆಯಂತು ಇನ್ನು ಚೆನ್ನ! ಎಂದುಕೊಳ್ಳುವುದು.  ಬಾಲ್ಯ ಎಲ್ಲರಿಗೂ ಇಷ್ಟವಾಗಿರುವುದು ಇದೇ ಕಾರಣಕ್ಕೆ. ಕಷ್ಟವೋ, ಸುಖವೋ, ನಷ್ಟವೋ… ಇಡಿ ಜಗತ್ತೇ ನನ್ನದು! ನನ್ನ ಜೊತೆಯಿರುವವರೆಲ್ಲ ಶಾಶ್ವತ! ಆ ಕಟ್ಟೆ, ಈ ರಸ್ತೆ, ಯಾರದೋ ತೋಟದ ಮನೆ, ಇನ್ನೆಲ್ಲಿಯದೋ ಆಲೆಮನೆ… ಮೇಕೆ ಕುರಿ ಕರು… ಮರ ಗಿಡ ಹೂ ಬಳ್ಳಿ ಹೀಚು ಕಾಯಿ… ರಂಗ ಬೀರ ಮಾದ ಚೆನ್ನ ಶಿವಿ ನಾಗಿ ರತ್ನ ಯಾರೂ ಬೇರೆಯಲ್ಲ! ಎಲ್ಲರೂ ನನ್ನವರೆ! ನನಗಾಗಿಯೇ ಇವರು! ಇಂದು ಜಗಳವಾದರೂ… ನಾಳೆಗೆ ಮತ್ತೆ ವಸಂತ! ದಿನದಿನವೂ ಹೊಸಚಿಗುರು! ನಿನ್ನೆಗಳೇ ಇಲ್ಲ! ಎಲ್ಲವೂ ಹೊಸತು! ನಿತ್ಯವೂ ವಸಂತ!
ಒಂದು ತಿಂಗಳಾಯಿತು ಅಣ್ಣನ ಜೊತೆ ಭೈರವಿಯ ಶಾಲೆ ಪಯಣ. ಆ ದೊಡ್ಡಿಯಂತಿರುವ ಕೋಣೆಯಲ್ಲಿ ಮೇಷ್ಟ್ರಿಗೆ ಯಾರೂ ಕಾಣರು. ಕಣ್ಣು ಬಿಟ್ಟರೆ ತಾನೆ! ಅದ್ಯಾವ ತರಗತಿಯೋ ಏನೋ! ಪಿಳ್ಳೆಯಿಂದ ದೊಣ್ಣೆಯಂಥವರೆಲ್ಲ ಇದ್ದಾರೆ. ಶಾಲೆ ಪಕ್ಕದ ಸರದಲ್ಲಿನ ಹಿಟ್ಟುಗಲ್ಲನ್ನೇ ತೇದು ಬಳಪ ಮಾಡಿಕೊಂಡಿದ್ದಾರೆ ಮಕ್ಕಳು. ಹೊರಗೋಡೆ, ನೆಲ, ಮೋರಿಕಟ್ಟೆಗಳೇ ಸ್ಲೇಟುಗಳು! ಗೀಚಿ ಗೀಚಿ ಎಲ್ಲೆಲ್ಲೂ ಹಕ್ಕಿಗೂಡುಗಳು!
ಮಧ್ಯಾಹ್ನಕ್ಕೆ ಅಮ್ಮ ಮಾಡಿಟ್ಟಿದ್ದ ಅಡುಗೆಯಿದ್ದರೂ ತಣ್ಣನೆಯ ಆ ಸಪ್ಪೆಯೂಟ ಹೇಗೆ ಬಯಸಿ ಉಂಡಾರು? ಸಿಹಿಹುಣಸೆಹಣ್ಣು, ಪತ್ರೆಕಾಯಿ ಸಿಪ್ಪೆ, ಗಾಳಿಗುದುರಿ ಬೇಲಿಯಾಚೆ ಬಿದ್ದ ಕೇಶಜ್ಜನ ತೋಟದ ಮಾವಿನ ಹೀಚುಗಾಯಿ, ಖಾಕಿ ಹಣ್ಣಿನ ರುಚಿ ದೊರೆತ ಮೇಲಂತು ಕಷ್ಟಕಷ್ಟ! ಶಾಲೆ ಊರಿನಿಂದ ಚೌಡಿಹಳ್ಳಕ್ಕೆ ಹೋಗಿ ಬರುವಷ್ಟು ದೂರ. ಎಲ್ಲರೂ ಗಾಜಿನ ಬಾಟಲಿಯಲ್ಲಿ ನೀರು ತರುವರು. ಬಾಯಾರಿದರೆ ಎಲ್ಲಿ, ಯಾರನ್ನು ಬೇಡುವುದು? ಚೆನ್ನಮ್ಮಳಿಗೆ ದನದಾಸ್ಪತ್ರೆ ಮಂಜಣ್ಣನ ಪರಿಚಯವಂತು ಇತ್ತು. ಹೇಗೋ ಒಂದು ಗ್ಲುಕೋಸು ಬಾಟಲಿ ಪಡೆದು ಅದರ ರಬ್ಬರ್ ಬಿರಡೆ ಸಮೇತ ಅಂಟುವಾಳಕಾಯಿ ಪುಡಿ ಹಾಕಿ ತಿಕ್ಕಿ ತೊಳೆದು ಒಪ್ಪಮಾಡಿಡುವಳು.
ಈ ಕುಡುಕಟ್ಟೆಯ ನೀರೋ ಉಪ್ಪುಪ್ಪು! ಹಣವಂತರ ಮಕ್ಕಳೆಲ್ಲ ಬಾಟಲಿಯೊಳಕ್ಕೆ ನಿಂಬೆಹುಳಿ ಪೆಪ್ಪರಮೆಂಟ್, ಬೆಲ್ಲ ಮತ್ತೇನನೋ ಹಾಕಿಕೊಂಡು ನೀರನ್ನು ಸಿಹಿಯಾಗಿಸಿ ಸವಿಯುವರು. ಇವರಿಗೆಲ್ಲಿ ಸಿಗಬೇಕು ಲೋಹ, ಕಾಗದದ ಲಕುಮಿ? ಈ ನಿಸರ್ಗದೇವಿ ಮಕ್ಕಳಿಗೂ ಒಂದೊಳ್ಳೆ ಉಪಾಯವೂ ಸಿಕ್ಕಿತು. ಸಂಭ್ರಮವೋ ಸಂಭ್ರಮ!
‘ಅಣ್ಣಾ, ನೋಡ್ತಿರು ಇವತ್ತು ಸಂಜೆಗೆ ನೀರೆಷ್ಟು ಸಿಹಿಸಿಹಿಯಾಗಿರುತ್ತೆ?’
‘ಪಪಿ, ನಿನಗರ್ಧ ನನಗರ್ಧ ಆಯ್ತಾ? ಸಂಜೆಗೆ ಹಠ ಮಾಡಬಾರದು?’
‘ನಾನೇನು ಹಾಗೆ ಮಾಡಲ್ಲ…ನಡಿ ನಡಿ ಶಾಲೆಗೆ ಹೊತ್ತಾಯ್ತು’
ಹೊಟ್ಟೆನಂಜಪ್ಪ ಮಾಸ್ತರರು ತರಗತಿಗೆ ಬಂದವರೆ ಅಪರೂಪಕ್ಕೆ ಎರಡು ಲೆಕ್ಕ ಹೇಳಿ ಬಿಟ್ಟಿದಾರೆ…ಅವತ್ತಿಡೀ ರುದ್ರನರ್ತನ… ಹೊಟ್ಟೆ ಮೇಲೆ ಕೈಯಾಡಿಸುತ… ಹೆಗಲ ಮೇಲೊಂದು ಚಿಕ್ಕ ಟವೆಲ್ಲ ಹಾಕಿಕೊಂಡು, ಕಬ್ಬಿಣದ ನೀಲಿ ಕುರ್ಚಿಗೊರಗುವರು. ‘ಎಲ್ಲಿ ಲೆಕ್ಕ ತೋರ್ಸಿಯೆಲ್ಲ’ ಎನ್ನುತ ದಿಢೀರ್ ತಪಾಸಣೆ ಶುರು. ಒಬ್ಬೊಬ್ಬರೇ ಸಾಲುಗಟ್ಟುವರು…ಮಾಸ್ತರ ಪರಿಚಯವಿರುವವರಿಗಷ್ಟೆ ಮೊದಲು ನಿಲ್ಲುವ ಧೈರ್ಯ.
‘ಹೋss ಯಾರಿವನು? ಸೂssರಿ… ಬಾಳಪ್ಪ ಮೇಷ್ಟ್ರು ಮಗನಲ್ಲವೇ ನೀನು? ಲೆಕ್ಕ ಸರಿಯಿದೆ’
‘ಇವನು? ತೇಜಪ್ಪ ಗೌಡ್ರು ಮಗ… ವೆರೀಗುಡ್’
‘ಲೇ…ಚಿಕ್ಕ, ಲೆಕ್ಕದಲಿ ನೀ ಚೊಕ್ಕ ಹಿಡಿ ಹಿಡಿ ಕೈ’ (ಛಟೀರ್…) ….. ಹೀಗೆ ವಂಶಾವಳಿ ಪ್ರಭಾವಿತ ಪ್ರಶಂಸೆಗಳು ಸಾಗುತಿರಲು ಭೈರವಿಯು ಅಣ್ಣನ ದೊಗಲೆ ಅಂಗಿಯನ್ನು ಬಿಗಿಯಾಗಿ ಹಿಡಿದು ಕೂರುವಳು… ಬಿಡಲೇ ಒಲ್ಲಳು… ರಂಗನ ಜೊತೆಗೆ ಬೆನ್ನಿಗಾತು ಬಂದಳು… ‘ಯಾರಿದು!? ಹ್ಞಾ…ಕತ್ತೆಬಡವನ್ ತಂದ್…ಬದ್ಮಾಶ್…ಇದೇನು ದೊಡ್ಡಿಯೋ ತಿಪ್ಪೆಗುಂಡಿಯೋ(?) ನಾಳೆಯಿಂದ ಇವಳೂ ಬಂದ್ರೆ ಚಡ್ಡಿ ಉದುರಿ ಹೋಗುತ್ತೆ… ಎಲ್ಲಿ ಲೆಕ್ಕ ತೋರ್ಸ್….’
‘ಕೊನೆಕೇರಿ ಶೇಖ್ರಿ ಮಗ ರಂಗ…ದ್ರಾಬೆ…ದ್ರಾಬೆ…ನಾಲ್ಕಕ್ಕೆ ನಾಲ್ಕು ಕೂಡಿದ್ರೆ ಎಂಟಂತೆ?! ಕತ್ತೆಬಡವ… ಸೂರಿ ಸೂರಿನ್ ನೋಡಿ ಕಲಿ’ ಛಳ್ ಛಳ್ ಛಟೀರ್ ಹುಣಸೆ ಚುಳುಪಿಯು ಲೆಕ್ಕವನು ನೋಡುವುದಕೂ ಮುಂಚೆಯೇ ಝಳಪಿಸುವುದು… ಭೈರವಿಯಂತು ಬಾಗಿಲಮೂಲೆಗಾತು ಬಿಕ್ಕಳಿಸುವಳು. ಹೊರಬಂದು ನೋಡಿದ್ರೆ ಬಾಳಪ್ಪ ಮೇಷ್ಟ್ರು ಮಗ ಸೂರಿ ಲೆಕ್ಕವೇ ತಪ್ಪಿದೆ… ಇವನ ಲೆಕ್ಕವೇ ಸರಿ… ಹಿರಿಯ ತರಗತಿ ಹಾಲೇಶಿ ತೀರ್ಪಿಡುವನು.
‘ಇವೆಲ್ಲ ಮಾಮೂಲು….? ಪಾಪ ಮೇಷ್ಟ್ರಿಗೆ ನಿನ್ನೆ ಏನ್ ಕೆಲ್ಸವಿತ್ತೋ ಏನೋ? ನಿದ್ದೆಗಣ್ಣಲ್ಲಿ ನೋಡಿದ್ರೇನೋ!’ ಎಂದು ತಂಗಿಯನ್ನು ಸಮಾಧಾನಿಸುವಾಗ ಹಜಾರದ ಕಂಬದ ಮೂಲೆಯಲ್ಲಿ ಮಿನುಗುತ್ತಿದೆಯೊಂದು ಕನಸು! ದಾರಿಯಲಿ ಅದರ ಬಿರಡೆ ತೆಗೆದು ಒಂದೊಂದೇ ಹನಿಯನ್ನು ಅಮೃತದಂತಿಳಿಸುವ ಕಾತರ.
‘ಅಯ್ಯೋ…ಹುಳಿ ಹುಳಿ’
‘ಭೈರವಿ ನೋಡಿದ್ಯಾ…ಬರೀ ಹುಳಿ..ಹಿತ್ತಲ ಹುಣ್ಸೆಹಣ್ಣು ಹಾಗೆಯೇ ತಿನ್ನೋಕಷ್ಟೆ ಸಿಹಿ ಕಣೆ’
ಬಾಳಪಯಣದಲಿ ಸಿಹಿಯೊಂದು ಗುರಿಯಷ್ಟೆ? ಉಳಿದೆಲ್ಲವು ಅದರೆಡೆಗಿನ ಮೆಟ್ಟಿಲುಗಳು. ಆ ಹಾದಿಯಲ್ಲಿ ಹುಳಿಯೂ ಒಂದು ಅನುಭವವೆ! ಕಹಿಯನ್ನು ಮೀರಿದ್ದು….ಮನೆಗೆ ಬರುವಷ್ಟರಲ್ಲಿ ಬಾಟಲಿ ತಳದಲ್ಲಿ ನಾಲ್ಕು ಹುಣಸೆ ಬೀಜಗಳಿದ್ದವಷ್ಟೆ!
~~~~~~~ *** ~~~~~~~
ಶೇಖರ ಮನೆಗೆ ಬಂದವನೆ ಕಿರೀಟದಂತಿದ್ದ ಸಾಗುವಾನಿ ಬಣ್ಣದ ಟರ್ಕಿ ಟವೆಲ್ಲನ್ನು ಬಿಚ್ಚಿ ದಿಂಬಿನ ಮೇಲೆ ಒಗೆಯುವನು. ಏನೋ ಸಂಕಟ? ಸಿಲ್ವರ್ ಅಂಗಿ ಬಿಚ್ಚಿ ಕಂಬದ ಮೊಳೆಗೆ ನೇತಾಕಿ ಅಂಗಾತ ಮಲಗುವನು. ಊರಲ್ಲಿ ಭೂಮಿಹುಣ್ಣಿಮೆ ಸಂಭ್ರಮ. ಎಲ್ಲರು ಕಂಬಳಿಗೊಪ್ಪೆ ಹಾಕಿಕೊಂಡು ಎಡಿಗೆ ಹೊತ್ತು ತಂಡೋಪತಂಡವಾಗಿ ಭೂಮಿಪೂಜೆಗೆ ತೆರಳುತಿದ್ದಾರೆ. ಶೇಖರನಿಗೆ ತನ್ನದು ಅಂತ ಎರಡು ಗೆರೆ ಜಮೀನಿಲ್ಲ. ಸಂಸಾರ ಹೂಡಿದ ಹೊಸದರಲ್ಲಿದ್ದ ಪಿತ್ರಾರ್ಜಿತ ಆಸ್ತಿ ಮೇಲಿನ ತಿರಸ್ಕಾರವೆಲ್ಲ ಕರಗಿ ನನ್ನ ಪಾಲು ಅಂತಾದ್ರೂ ನಾಲ್ಕು ಗುಂಟೆ ಜಮೀನನ್ನು ಕೇಳಬೇಕೆಂಬ ಆಸೆ ಮೊಳೆಯುತ್ತಿದೆ. ಊರು ಎಂದ ಮೇಲೆ ನಂದೂ ಅಂತ ಒಂದಿಷ್ಟು ನೆಲವಿಲ್ಲದಿದ್ದರೆ ಹಳ್ಳಿಗವನು ಭಿಕಾರಿಯೆ! ಹಗಲು ರಾತ್ರಿಯೆನ್ನದೆ ಕೂಲಿ ನಾಲಿ ಮಾಡಿ ಗಂಡ ಹೆಂಡತಿ ಹೊಟ್ಟೆ ಬಟ್ಟೆಗಿಷ್ಟು ಅನುಕೂಲ ಮಾಡಿಕೊಂಡಿದ್ದಾರೆ. ಎಷ್ಟಂದ್ರೂ ಕಾಸು ಕೈಲಿ ನಿಲ್ಲುತ್ತೆಯೆ? ಕಾಳು-ಕಡೆ ಎಷ್ಟಂಥ ಕೊಳ್ಳೋದು? ಮನೆಗೆ ಹಿರಿಮಗನಾದರೂ ದೇವರ ಪೂಜಾರಿಕೆಯನ್ನೂ ಕೊಡದೆ ಅವಮಾನಿಸಿದರು. ಅದಾದರೂ ಇದ್ದಿದ್ರೆ ದೇವರಹೊಲನಾದ್ರೂ ಉಳಿಮೆ ಮಾಡಿಕೊಳ್ಳಬಹುದಿತ್ತು. ಹಬ್ಬಕ್ಕೆ ಹೆಂಡತಿ ಮಕ್ಕಳು ಎಷ್ಟು ಬಟ್ಟೆ ಹಾಕಿಕೊಂಡು ಕುಣಿದ್ರೇನು ಬಂತು! ಒಂದು ಗೇಣು ಜಮೀನಾದ್ರೂ ಇದ್ದಿದ್ರೆ ಭೂಮಿತಾಯಿಯನ್ನು ಕಣ್ಣಿಗೊತ್ತಿಕೊಂಡು ಮಕ್ಕಳನ್ನ ಅವಳ ಮಡಿಲಿಗೆ ಹಾಕಬಹುದಿತ್ತು. ನಾವೆಷ್ಟು ಪೊರೆದು ಬೆಳೆಸಿದ್ರು ಕೊನೆಗೆ ಕೈ ಹಿಡಿಯೊಳು ಅವಳೊಬ್ಬಳೆ ತಾನೆ? ಬೆಳೆಯುತಿರೋ ಮಕ್ಕಳು ಅನ್ನೋಣಾss… ಉಟ್ಟರೆ ತೊಡಲಿಲ್ಲ, ತೊಟ್ಟರೆ ಉಡಲಿಲ್ಲ! ಭೈರವಿಯ ಕೈ ಕಾಲು ಕೊರಳು ಕಿವಿಯ ಬರಡುತನವಂತೂ… ಅಯ್ಯೋ! ಅನ್ಸುತ್ತೆ. ಆ ಹಸಿರು ಲಂಗ-ದಾವಣಿಯೊಂದನ್ನೇ ಹಾಕಿಕೊಂಡು ದೇವರಗುಡಿಗೂ ಮನೆಗೂ ಸಂಭ್ರಮಿಸಿ ಓಡಾಡುತ್ತೆ. ಭೂಮಿತಾಯಿ ಎಷ್ಟು ಹಸಿರಾಗಿದ್ದರೇನು ಬಂತು? ಚಿಗುರು ಹೂವು ಫಲಗಳೆಂಬ ಒಡವೆಗಳೇ ಅಲ್ಲವೆ ಅದಕೊಂದು ಶೋಭೆ!… ಶೇಖರ ಮಗ್ಗಲು ಬದಲಿಸಿ ಬದಲಿಸಿ ಬೆಂಗ್ಟಿ ನೋಡುತ್ತ ಹೊರಳಾಡುತ್ತಿರುವನು.
ಹಿತ್ತಿಲಿಂದ ರಂಗ ಭೈರವಿಯ ಗಲಾಟೆಯ ಶಬ್ದ ಶೇಖರನನ್ನು ವಾಸ್ತವಕ್ಕೆ ತರುವುದು. ಎದ್ದವನೆ ದೇವರ ಉಯ್ಯಾಲೆಗಂಬದ ಸಿಂಗಾರಕ್ಕೆ ಹೊರಡುವನು. ‘ನೋಡಿಲ್ಲಿ, ಈ ರಂಗನನ್ನು ವಸಿ ಅಗಸೆಬಾಗ್ಲು ಕಡೆ ಕರ್ಕೊಂಡು ಹೋಗಿ… ಅವುಗಳ ಜಗಳ…ನನ್ನಿಂದ ಆಗಲ್ಲ…’ ಪೀಠಿಕೆ ಹಾಕುತ್ತ ಚೆನ್ನಮ್ಮ ಇನ್ನೇನನ್ನೊ ಕೇಳಬೇಕೆನ್ನುವಷ್ಟರಲ್ಲಿ ಶೇಖರ ಓಣಿದಾಟಿ ಹೋಗಿಯಾಗಿತ್ತು.
ಶಾಲೆಯ ಜೀವನ ರಂಗನಿಗೆ ಸಾಕಷ್ಟು ನೀರು ಕುಡಿಸಿತ್ತು. ಈ ತಂಗಿಯೆಂಬ ಬಾಲವನ್ನು ಕಳಚಿಕೊಳ್ಳಲು ಅವನಾಡಿದ ನಾಟಕಗಳು ಒಂದೇ ಎರಡೆ? ಹೊಸಹೊಸ ಗೆಳೆಯರ ಪರಿಚಯ, ಓರಗೆಯವರು ಅಣಕಿಸುವರೆಂಬ ಅಂಜಿಕೆ, ‘ಪುಕ್ಕಲ’ ಎನ್ನುವರೇನೋ ಎಂಬ ಭಯ? ಈ ಎಲ್ಲ ಹೊರಾವರಣಗಳಿಂದಾಗಿ ತಂಗಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯೂ ಆಗಿದ್ದ. ಭೈರವಿ ಮೊದಮೊದಲು ಮುನಿಸು ವಿರೋಧ ತೋರಿ ಹಠ ಮಾಡಿದಳಾದರೂ ಅನಿವಾರ್ಯವಾಯಿತು. ಈಗ ಅವಳೂ ದೊಡ್ಡಶಾಲೆ ಮೆಟ್ಟಿಲು ಏರಿದ್ದಾಳೆ. ತನ್ನದೇ ಗುಂಪು ಬೇರೆ! ಹೊರಗೆಲ್ಲ ಪರಿಚಯವೇ ಇಲ್ಲದ ಪರದೇಶಿಗಳಂತಾಡುತ್ತಿದ್ದ ಮಕ್ಕಳು ಮನೆಗೆ ಬಂದ ಕೂಡಲೆ ಇಲ್ಲಸಲ್ಲದ ನೆಪಗಳನೆಲ್ಲ ಕೆದಕಿ ಎಳೆದಾಡಿ ತಳ್ಳಾಡಿ ಗುದ್ದಾಡಿ ಸುಸ್ತಾಗಿ ಕೆದರಿದ ಕೂದಲಲ್ಲಿ ಗುರಾಯಿಸುತ್ತ ಕೂರುವರು…ಉಗ್ರನರಸಿಂಹನಂತೆ! ಈ ವಯಸ್ಸಿನ ಮೊಂಡುತನವೇ ಅಂಥದು! ಸೋದರ ಪ್ರೇಮದ ಉತ್ಕಟತೆಯನ್ನು ಅರಿಯರು!? ಬುಳ್ಳಿ ಬೆಕ್ಕಿನ ಮರಿಗಳಂತೆ!
ದೇವರಗುಡಿ ಮುಂದೆ ಹೊಸಹೊಸ ಫೋಟೋ, ಬಲೂನ್, ಪೀಪಿ, ಬೆಂಡು-ಬತಾಸು ಕೈ ಬೀಸಿ ಕರೆಯುತ್ತಿವೆ. ರಂಗನಿಗೆ ಒಂದೇ ಆಸೆ ‘ಹನುಮಂತ ದೇವರ ಫೋಟೋ ತಗೋಬೇಕು’. ಆದರೆ ಅವೆಲ್ಲ ಮಾರಾಟಕ್ಕಲ್ಲ! ಒಂದು ರೂಪಾಯಿಗೆ ಚೀಟಿ ಪಡೆಯಬೇಕು. ಅದರಲ್ಲಿರುವ ನಂಬರಿನ ಫೋಟೋ ಇವನದಾಗುವುದು. ನಂಬರು ಬರಲಿಲ್ಲವೋ ಒಂದು ರೂಪಾಯಿ ಗೋವಿಂದ! ಗೋವಿಂದ!! ಬೆಳಗ್ಗೆಯಿಂದ ಅಮ್ಮನಲ್ಲಿ ಬೇಡುತಿದ್ದಾನೆ…ಗೋಗರೆಯುತಿದ್ದಾನೆ. ಗಂಡನಿಗೆ ಹೇಳಿ ಕೊಡಿಸೋಣವೆಂದರೆ ಅವರೇಕೋ ಇಂದು ಮಾತೇ ಕೇಳರು? ಟೀಪುಡಿಗೆಂದು ಕೂಡಿಟ್ಟಿದ್ದ ಒಂದೂವರೆ ರೂಪಾಯಿಯನ್ನು ಕೈಗಿತ್ತು, ‘ಇದು ನಿನ್ನ ದೇವರ ಫೋಟೋ ಚೀಟಿಗೆ… ಮತ್ತೆ ಈ ಎಂಟಾಣೆಯಲ್ಲಿ ಭೈರವಿಗೇನಾದ್ರು ಕೊಡಿಸು…ಹೋಗು’
‘ಅಮ್ಮಾ, ನಾ ತಗೊಳೋ ಚೀಟಿಗೆ ನಂಬರ್ರು ಬಂದೆ ಬರುತ್ತೆ ಅಲ್ವೆನಮ್ಮಾ? ಹೇಳಮ್ಮಾ…’ ಸೆರಗು ಹಿಡಿದು ಪೀಡಿಸುವನು. ಎಷ್ಟೊಂದು ಕೆಲಸವಿದೆ..ಇವನು ಗುಡಿಕಡೆ ಹೋದ್ರೆ ಸಾಕೆನಿಸಿ, ‘ನನ್ನಪ್ಪಾ, ದೇವರು ನಮ್ಮನ್ನು ಯಾವತ್ತೂ ಕೈ ಬಿಡಲ್ಲ. ಒಂದು ಕೆಲ್ಸ ಮಾಡು. ಈ ಒಂದು ರೂಪಾಯಿಯನ್ನು ದೇವರ ಮುಂದೆ ಇಟ್ಟು ಬೇಡಿಕೊಂಡು ಅದರ ಒಪ್ಪಿಗೆ ಪಡೆದುಕೊಂಡೇ ಹೋಗಿ ಚೀಟಿ ತಗೊ.. ಹನುಮಪ್ಪ ಅಲ್ಲ ರಾಮಪ್ಪನ ಫೋಟೋನು ಸೇರಿಸಿ ಬರುತ್ತೆ. ಅದ್ಯಾಕೆ ಬರಕಿಲ್ಲ. ಹನುಮಪ್ಪನ ಶಕ್ತಿಯೇ ಅಂಥದು…ಹೋಗು..ಹೋಗು…ಭೈರವಿಯನ್ನೂ ಕರೆದುಕೊಂಡು ಹೋಗು..’
ಇದೀಗ ತಾನೆ ಭರ್ಜರಿ ಜಗಳವಾಡಿ ಅದು ಹೇಗೆ ಸೋಲೊಪ್ಪಿಕೊಂಡು ಕರೆದಾನು? ಭೈರವಿಯ ಎಂಟಾಣೆಯನ್ನೂ ಲಪಟಾಯಿಸುವ ಸಂಚೊಂದು ಬೇಡವೆಂದರೂ ಮಿಂಚಿ ಮಾಯವಾಗುವುದು! ಬುರ್…ಬುರ್…ಬುರ್ರ್‌್್ ಬಸ್ ಬಿಡುತ್ತ ಗುಡಿಗೆ ಬರುವನು. ಊರಿನ ಮುಖ್ಯಗುಡಿಯ ಪಕ್ಕದಲ್ಲಿದೆ…ಚಿಕ್ಕದೊಂದು ಭೂತಪ್ಪನ ಗುಡಿ. ಊರಲ್ಲಿ ಆಂಜನೇಯಗೆ ಗುಡಿಯಿಲ್ಲದೆ…ಈ ಭೂತಪ್ಪಗಳ ಜೊತೆಯೇ ನೆಲೆಸಿರುವನು. ದೊಡ್ಡಬಾವಿ ತೆಗೆಯುವಾಗ ಸಿಕ್ಕ ಮೂರುತಿಯಂತೆ…ಒಡೆದು ಮೂಡಿದ್ದು..ಮಹಾ ಶಕ್ತಿವಂತ! ಹಬ್ಬದ ಕಾರಣ ಕುಂಕುಮ ಪೂಜೆ ಬೇರೆ ನಡೆದಿದೆ. ಇಷ್ಟು ದಿನ ಎಣ್ಣೆ ಮೆತ್ತಿಕೊಂಡು ಮಿನುಗುತ್ತಿದ್ದ ರಂಗನ ನೆಚ್ಚಿನ ದೈವವಿಂದು ಉದಯಿಸುವ ಸೂರ್ಯನಂತೆ ಮಿಂಚುತ್ತಿದೆ. ರಂಗನಿಗೇನೋ ಪುಳಕ! ನಮ್ಮೆಲ್ಲ ಬೇಡಿಕೆಯನ್ನು ಕ್ಷಣ ಮಾತ್ರದಲಿ ಪೂರೈಸುವ ಮಹಾಮೂರುತಿಯೇ ಎದುರಿಗಿರುವಾಗ ಇನ್ನೇನು ಬೇಕು? ಹೌದು ಇನ್ನೇನು ಬೇಕು! ಏನು ಬೇಕು? ಬೇಡಬೇಕೆಂದಿದ್ದೆಲ್ಲವನ್ನೂ ಮರೆತು ಮಹಾತಪಸ್ವಿಯಂತೆ ಕುಳಿತಿದ್ದಾನೆ. ಘಂಟೆಯ ಸದ್ದಾಗಿ ಎಚ್ಚೆತ್ತು ಹೊರಬರುವನು. ನಾಣ್ಯಕ್ಕೂ ಕುಂಕುಮಾಭಿಷೇಕವಾಗಿದೆ. ‘ಯಾವ ಚೌಡಿ ಭೂತ ದೆವ್ವಗಳಿಂದಲೂ ತಡೆಯಲು ಸಾಧ್ಯವಿಲ್ಲ. ಹನುಮಂತದೇವರ ಫೋಟೋದ ನಂಬರ್ರು ಬಂದೇ ಬರುತ್ತೆ! ನಮ್ಮ ಹನುಮಂತ ದೇವರಿಗೆ ಎಲ್ಲ ಗೊತ್ತಿದೆ. ನಾನು ಬೇಡಿಕೊಳ್ಳಬೇಕಂತೆನೂ ಇಲ್ಲ’ವೆಂದುಕೊಳ್ಳುತ ಗುಡಿಯ ದ್ವಾರದಿಂದ ಹೊರಬರುತ್ತಿದ್ದಂತೆ ಶೇಷಮ್ಮನ ಬುಟ್ಟಿಯೊಳಗಿರುವ ಬಳೆಗಳು ಫಳಫಳ ಹೊಳೆಯುತ್ತಿವೆ. ‘ನಮ್ಮ ಭೈರವಿ ಪಪಿಗೆ ಬಳೆಗಳೆಂದರೆ ಎಷ್ಟೊಂದಿಷ್ಟ! ಆಕೆ ನನ್ನನೆಂದು ಏನನ್ನೂ ಕೇಳಿಲ್ಲ…ಪಾಪದ್ದು.. ಅವಳಿಗೆ ಕಿತ್ತಳೆಬಣ್ಣದ ಬಳೆಗಳೆಂದರೆ ಪಂಚಪ್ರಾಣ…ಇಂದು ಹಬ್ಬಕ್ಕಾದರೂ ಹಾಕಿಕೊಳ್ಳಲಿ…’ ಎಂದು ಒಂದುರೂಪಾಯಿಗೆ ಚಡ್ಡಿಜೇಬಿನ ತಳ ಸೇರಿದ್ದ ಎಂಟಾಣೆಯನ್ನೂ ಸೇರಿಸಿ ಅರ್ಧಡಜನ್ ಬಳೆ ಖರೀದಿಸುವನು.
‘ಅಣ್ಣ ಮೊಟ್ಟಮೊದಲ ಬಾರಿಗೆ…ನನಗೇ ಅಂತ ಬಳೆ ತಂದಿದ್ದಾನೆ! ಅದೂ ಕಿತ್ತಳೆಬಣ್ಣ! ಈ ಅಣ್ಣ ಎಷ್ಟು ಒಳ್ಳೆಯವನು! ಆದರೂ ಬೈಯುತಾನೆ.. ಏನೇ ಆಗಲಿ ನನ್ನಣ್ಣ ತಾನೆ…!’ ಬಳೆ ತೊಟ್ಟು ತನ್ನೆಲ್ಲ ಗೆಳತಿಯರಿಗೆ ಕಾಣಿಸುವಂತೆ ಭೈರವಿ ಸಡಗರದಿಂದ ಓಡಾಡುವಳು. ಬಳೆಗಳ ಸಂಖ್ಯೆ ಮುಖ್ಯವಲ್ಲ. ನನ್ನವರು ತನ್ನವರು ಅಂಥ ನನ್ನನೂ ಪ್ರೀತಿಸುವವರೂ ಇದ್ದಾರೆಂಬುವುದರ ದ್ಯೋತಕವದು. ನಾವೇ ಕೊಂಡು ಧರಿಸಿ ಸಂಭ್ರಮಿಸುವುದು ಕೇವಲ ಹಣದ ಶೋಕಿಯಷ್ಟೆ? ನಮಗಾಗಿ ಮಿಡಿಯುವ, ನಮ್ಮನ್ನು ಎತ್ತಿಕೊಳ್ಳುವ ಪ್ರೇಮ ಮಮತೆಗಳೇ ಅಲ್ಲವೆ ನಿಜವಾದ ಸಿರಿತನ.
ಗುಡಿಯ ಬಳಿ ಬಂದ ರಂಗನಿಗೆ ‘ಬೆಟ್ಟವನು ಹೊತ್ತ ಹನುಮ ದೇವರ ಫೋಟೋ’ ಕಾಣುತ್ತಲೇ ಇಲ್ಲ! ಅವನು ಬಯಸಿದ್ದು ಅದೊಂದನಷ್ಟೆ. ಮನಸ್ಸು ನಿರಮ್ಮಳವಾಯಿತು! ಇನ್ನಾವುದೇ ತುಡಿತವಿಲ್ಲ! ಶಾಂತಮನದ ಮೂಲೆಯಲ್ಲಿ ಧ್ವನಿಸುತಿತ್ತು… ‘ರಾಮ…ರಾಮ…ರಾಮ…ರಾಮ…ರಾss’
ಅಮ್ಮನ ಮಾತು ಸುಳ್ಳಾಗಲಿಲ್ಲ!
~~~~~~~ *** ~~~~~~~
ಕುಡುಕಟ್ಟೆ ಬಯಲುಸೀಮೆಯ ಒಂದು ಹಳ್ಳಿ. ಬಯಲನಾಡಿಗೆ ಹೆಬ್ಬಾಗಿಲು. ಸಾಲುಸಾಲು ಗುಂಪು ಮನೆಗಳು. ಮೂಡಣಕೆ ಎರೆಹೊಲದ ಬಯಲು, ಪಡುವಣಕೆ ಕೆಂಗ್ಲು…ಏರುತಗ್ಗುಗಳು. ತಿಳಿನೀಲಾಗಸಕೆ ಬಣ್ಣಬಳಿದಿರುವಂತೆ ಕಾಣುವ ಕ್ಷಿತಿಜದ ಬೆಟ್ಟಸಾಲುಗಳು. ಏಕಾಕಿಯಾಗಿ ನಿಂತು ನೋಡುವುದೇ ಒಂದು ಆನಂದ. ದೂರದಲ್ಲಿ ಚೆಲುವಿದೆ! ಬಹುದೂರದಲಿ ಸ್ವರ್ಗವಿದೆ! ಮನದ ಪಾತಾಳದಲೊಮ್ಮೆ ತಳವಿಲ್ಲದ ಪ್ರಪಾತಕ್ಕೆ ಮ್sss ಎನ್ನುವಂತೆ ಬೀಳುತ್ತಿರುವ ಅನುಭವ. ನೋವಿಲ್ಲ! ನಲಿವಿಲ್ಲ! ಇರುವುದರಿಂದ ಕಳಚಿಕೊಳ್ಳುತ್ತಿರುವ ಭಾವ! ಇತ್ತ ಕಳಚಿಲ್ಲ! ಅತ್ತ ತಲುಪಿಲ್ಲ!
ಶಾಲೆಯ ದಾರಿಯಲ್ಲಿ ರಂಗನನ್ನು ಕಾಡುವ ಪ್ರತೀದಿನದ ಮಂಪರಿದು. ಅಪ್ಪ ಅಮ್ಮರೇಕೆ ಅಷ್ಟು ದೂರ ನಮ್ಮನ್ನು ಕರೆದೊಯ್ಯರು? ಅಪ್ಪ ಹೇಳುತಿದ್ದನು ‘ಅಗೋ ಅಲ್ಲಿ ದೂರದಲ್ಲಿ ಕಾಣುತ್ತಿದೆಯಲ್ಲ… ಆ ಬೆಟ್ಟದ ಸಾಲುಗಳಾಚೆ ಹೋಗುತಿದ್ದರಂತೆ ಕೂಲಿಕೆಲಸಕ್ಕೆ! ಈಗ ಇಲ್ಲ! ಅಲ್ಲೆಲ್ಲ ಹಾದಿಬೀದಿಯಲ್ಲಿ ಬಿದ್ದಿರುತ್ತವಂತೆ ಹಲಸಿನ ಹಣ್ಣುಗಳು. ದುಡ್ಡೇ ಬೇಡವಂತೆ! ಎಷ್ಟಾದರೂ ತಿನ್ನಬಹುದಂತೆ! ಅಲ್ಲಿಯ ಜನ ಅದೆಷ್ಟು ಸಾಹುಕಾರರಿರಬಹುದು? ಎಷ್ಟೋ ಮನೆಗಳಲ್ಲಿ ಅವನ್ನು ಮೂಸುವವರೇ ಇಲ್ಲಂತೆ! ಅದರ ಘಮ ಅದೆಷ್ಟು ಚೆಂದ? ಹೋದವರ್ಷ ಬುಧವಾರದ ಸಂತೆಯಲ್ಲಿ ಎರಡು ಹಿಡಿ ಮೆಣಸಿನಕಾಯಿಗೆ ನಾಲ್ಕು ತೊಳೆ ತಂದಿದ್ದಳು ಅಮ್ಮ. ಬಿಗಿಯುಸಿರೆಳೆದು ಮೂಸಿದರೆ ನನ್ನ ಕೈ ಈಗಲೂ ಘಮ್ss ಎನ್ನುವುದು! ನನಗದರ ವಾಸನೆಯೇ ಸಾಕು! ಹೊಟ್ಟೆ ತುಂಬಿ ಬಿಡುವುದು.
‘ಹೊಲ ಮನಿ ಬೆಳ್ಳಿ ಬಂಗಾರ ಎಷ್ಟಿದ್ರೆ ಏನ್ ಬಂತು ಚೆನ್ನವ್ವ? ಹೊಟ್ಯಾಗ ಹುಟ್ಟಿದ್ ಮಕ್ಳು ಹಿಂಗೆ ಮಾಡಿದ್ರೆ? ನಿಮ್ಮಕ್ಕನ ಹಣೇಲಿ ಆ ಶಿವ ಏನ್ ಬರ್ದಾನೋ ಅದಾಕ್ತತೆ ಬಿಡು. ಆಗೋದು ಹೋಗೋದ್ ಏನ್ ನಮ್ ಕೈಯಾಗೈತೇನವ್ವ? ನಾನಿನ್ ಬರ್ತೀನಿ ತಾಯಿ. ಇನ್ನು ತುಂಬ ಊರಿಗೆ ಪತ್ರಿಕೆ ಹಂಚೋದೈತಿ..’ ಮಗಳ ಮದುವೆ ಪತ್ರಿಕೆ ಕೊಡಲು ಬಂದ ತೌರೂರಿನ ಭೀಮಪ್ಪ ಚೆನ್ನಮ್ಮಳಿಗೆ ಅವಳಕ್ಕನ ಮಗ ಊರು ಮನೆ ಬಿಟ್ಟು ಹೋಗಿರುವುದನ್ನು ಅರಹುತ್ತಾನೆ. ಭೀಮಪ್ಪನನ್ನು ಬೀಳ್ಕೊಟ್ಟ ಚೆನ್ನಮ್ಮ, ‘ಯಾಕೀಗೆ ಹೊಟ್ಟೆ ಉರಿಸ್ತಾವೆ ಅಂತೀನಿ… ಏನ್ ಕಡಿಮೆಯಾಗದೆ ಅಂತ?’ ಚಾ ಲೋಟ ತೆಗೆದಿಟ್ಟು ಗಂಡನನ್ನು ನೆರಟೂರಿಗೆ ಹೋಗಿ ಬರುವಂತೆ ತಿಳಿಸುತ್ತಾಳೆ.
ನೆರಟೂರು ಕುಡುಕಟ್ಟೆಯ ಪಡುವಣಕ್ಕೆ ಎರಡುಮೈಲಿ ದೂರದಲ್ಲಿರುವ ಒಂದು ಪುಟ್ಟಹಳ್ಳಿ. ಆ ಊರಲ್ಲಿ ಕಳೆದುಹೋದ ಎಮ್ಮೆ, ಕಳ್ಳತನವಾದ ಮಾಲು, ಮನೆ ಬಿಟ್ಟು ಹೋದವರ ಬಗ್ಗೆ ‘ಅಂಜನ ಹಾಕಿ’ ಹೇಳುತ್ತಾರೆ. ಹನ್ನೆರಡು ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಆ ಡಬ್ಬಿಯೊಳಗೊಬ್ವ ಅಜ್ಜ ಕಾಣ್ತಾನೆ. ಕೇಳಿದ ಪ್ರಶ್ನೆಗೆ ಹೌದು…ಅಲ್ಲ ಉತ್ತರ ಕೊಡುತ್ತಾನೆ. ಮಗು ಅದನ್ನು ಗ್ರಹಿಸಿ ಹೇಳಬೇಕು. ಕೂಡಲೆ ಹೊರಟ ಶೇಖರನೊಟ್ಟಿಗೆ ರಂಗನನ್ನೂ ಕಳುಹಿಸಲು ಸಿದ್ಧತೆ ಶುರುವಾಗುತಿದ್ದಂತೆಯೆ ಭೈರವಿಯ ಹಠ ಶುರು… ‘ನಾನೂ ಹೋಗ್ತೀನಿ…ನಾನು ಅಣ್ಣನಿಗಿಂತ ಚಿಕ್ಕವಳು…ಡಬ್ಬಿಅಜ್ಜ ನನಗೆ ಇನ್ನೂ ಚೆಂದ ಕಾಣ್ತಾನೆ…’ ಎನ್ನುತಿದ್ದಂತೆ ‘ಪಪಿ, ಹಾಗೆಲ್ಲ ಹಠ ಮಾಡ್ಬಾರ್ದು ಕಂದ. ಆ ಊರಲ್ಲಿ ಗುರ್ತಿಲ್ಲ… ಪರಿಚಯ ಇಲ್ಲ..! ಅಷ್ಟುss ದೂರ ಬೇರೆ! ಸುಮ್ನೆ ಮನೆಯಲ್ಲಿರವ್ವ. ಹೆಣ್ಣುಮಕ್ಳು ಹೀಗೆಲ್ಲ ತಿರುಗಾಡಬಾರ್ದು ಕಣೋ! ಮೊನ್ನೆ ಜೀರಿಗೆ ಕೇಳಿದ್ದೆಯಲ್ಲಾ…ಇವತ್ತು ಕೊಡ್ತೀನಿ…ಹಠ ಮಾಡದೆ ಆಡಿಕೊಂಡಿರು…’ ಎಂದು ಚೆನ್ನಮ್ಮ ಸಮಾಧಾನಿಸುತಿದ್ದಂತೆ ಸ್ವಲ್ಪವೂ ಬಿಗುಮಾನ ಬಿಡದೆ ‘ಅಣ್ಣ ಒಬ್ನೆ ತಿರುಗಾಡ್ಲಿ ನನಗೇನು ಬೇಡ!!!! ಜೀರಿಗೆ ಜೊತೆ ಒಂಚೂರು ಬೆಲ್ಲನೂ ಕೊಡ್ಬೇಕು ಮತ್ತೆ…!!!!!!!’ ಎನ್ನುತ ಹಲಗೆ ಮೇಲಿನ ಡಬ್ಬಿಗಳೆಡೆಗೆ ದೃಷ್ಟಿ ಮಾಡುವಳು. ಮೇರೆಗಳನು ದಾಟುವ ಗಂಡಿನ ಹಂಬಲ ಹಲವೊಮ್ಮೆ ದಿಕ್ಕುತಪ್ಪಿರುವುದುಂಟು. ಆದರೆ ಬಳ್ಳಿ ರಂಗೋಲಿಯಂತೆ ಅಲ್ಲೆ ಶುರುವಾಗಿ ಅಲ್ಲೆ ಮುಗಿಯುವ ಹೆಣ್ಣಿನ ಜೀವನ ಅವೆಷ್ಟೆ ತಿರುವು ಪಡೆದರೂ ಅದು ಹೊಮ್ಮಿಸುವ ಚೆಲುವಿದೆಯಲ್ಲ ಅನೂಹ್ಯ. ಇಂದಿಗೂ!
ತನ್ನನ್ನೇ ಕರೆದುಕೊಂಡು ಬಂದಿದ್ದಕ್ಕೆ ರಂಗನಿಗೆ ಮೂಡಿದ ಕಿರೀಟ ಗದೆ ಚಕ್ರ ಒಂದೇ ಎರಡೆ? ಅಪ್ಪನ ದೊಡ್ಡ ಹೆಜ್ಜೆಗಳನೂ ನಾಚಿಸಿ ದಿಗ್ವಿಜಯಕ್ಕೆ ಹೊರಟವನಂತೆ ಮುನ್ನುಗ್ಗುತ್ತಿರುವನು! ಜೇಬಿನಲ್ಲಿ ಇಷ್ಟು ದಿನ ಕೂಡಿಟ್ಟಿದ್ದ ಪೈಸೆಗಳ ಝಣಝಣ ಬೇರೆ! ಕನ್ನಡ ಕಸ್ತೂರಿ ಪುಸ್ತಕದಲ್ಲಿರುವ ಎಲ್ಲ ಪೇಟೆ, ಬೀದಿ, ಅಂಗಡಿಗಳು ತಾನು ಹೋಗುತ್ತಿರುವ ದಾರಿಯಲ್ಲಿ ಸಾಲುಗಟ್ಟಿರುತ್ತವೆಂಬ ಹುಮ್ಮಸ್ಸು ಜೊತೆಗೆ! ಅದರಲ್ಲೊಂದು ಪಾಠ ‘ವಾಸನೆಯ ಬೆಲೆ’ ಜಾಣಹುಡುಗನೊಬ್ಬ ಹಣ್ಣಿನ ವಾಸನೆಗೆ ನಾಣ್ಯಗಳನ್ನು ‘ಝಣಝಣ’ವೆನ್ನಿಸಿ ಅದರ ಬೆಲೆ ತೀರಿಸಿರುತ್ತಾನೆ. ಹೋಗುವ ದಾರಿಯಲ್ಲಿ ಹಲಸಿನ ‘ಘಮ್..’ ವಾಸನೆ ಬಂದು ಯಾರಾದರೂ ಅದಕೆ ಹಣ ಕೇಳಿಬಿಟ್ಟರೆ!? ಅದಕ್ಕೆ ತಯಾರಿದೆ ಜೇಬು!
ಮನೆಗಳೆಲ್ಲಿ ಸಣ್ಣ ಮರಗಿಡಗಳೂ ಕಾಣುತ್ತಿಲ್ಲ….ಅದೆಲ್ಲಿರುವುದೋ ನೆರಟೂರು? ಇನ್ನೂss ದೂರವಿರಲೆಂಬ ಬಯಕೆ ರಂಗನಿಗೆ! ಶಾಲೆ, ಮಾರಿದಿಬ್ಬ, ಕೆರೆ ಏರಿ, ಕೆಂಗಲು ದಾಟಿದ ಮೇಲೆ ಈ ಮಣ್ಣರಸ್ತೆಗೆ ಅಡ್ಡಬರುವ ಹೆದ್ದಾರಿ ಬಿಸುಟು ಹೋದರೆ ಸಿಗುವುದೇ ನೆರಟೂರು. ಹೆದ್ದಾರಿ ಕಾಣುತಿದ್ದಂತೆ ಶೇಖರನು ರಂಗನಿಗೆ ಹನುಮಂತದೇವರ ಬೆವರಿನ ತಾಯತವನ್ನು ಬಿಗಿಯಾಗಿ ಹಿಡಿದುಕೊಳ್ಳಲು ಮತ್ತೆ ಮತ್ತೆ ನೆನಪಿಸುವನು. ಸೊಂಟದ ಉಡುದಾರದಲ್ಲಿದ್ದ ತಾಯತ ಹೊರಬಂದು ಬಿಸಿಲಿಗೆ ಮಿಂಚುವುದು. ಮಗನನ್ನು ಎತ್ತಿಕೊಂಡು ಮಿಂಚಿನ ವೇಗದಲ್ಲಿ ಹೆದ್ದಾರಿ ದಾಟಿ ಬಿಡುವನು ಶೇಖರ! ಕಣ್ಣು ಮಿಟುಕಿಸುವಷ್ಟರಲ್ಲಿ ಹೆದ್ದಾರಿ ದಾಟಿಯಾಗಿತ್ತು! ರಂಗ ಹೆದ್ದಾರಿಯನ್ನೇ ತಿರುತಿರುಗಿ ನೋಡುವನು… ಅಪ್ಪನ ಆ ಗಡಿಬಿಡಿ ನೋಡಿದ ಮೇಲಂತೂ… ಕರಿಹೆಬ್ಬಾವಿನಂತೆ ಬುಸುಗುಟ್ಟುವುದು ಕಪ್ಪುಟಾರಿನ ಝಳ! ನೆರಟೂರು ಬಂದೇ ಬಿಟ್ಟಿತು.
ಕಪ್ಪು ಕಂದು ಕೆಂಪು ಬಣ್ಣಗಳೆಲ್ಲ ನರ್ತಿಸುತ್ತಿವೆ ಡಬ್ಬಿಯೊಳಗೆ. ಅಜ್ಜನೇ ಕಾಣಲೊಲ್ಲ! ಏನು ಹೇಳುತ್ತಿರುವನು? ಇದರೊಳಗೆ ಅದ್ಹೇಗೆ ಕೂತಿರುವನು? ಸಾವಿರ ಪ್ರಶ್ನೆಗಳು! ನನಗೆ ಕಾಣುತ್ತಿಲ್ಲವೆಂದು ಬಿಟ್ಟರೆ! ಛೆ…ಎಂಥ ಅವಮಾನ? ಭೈರವಿಗೆ ಗೊತ್ತಾದರಂತೂ ಎಷ್ಟು ಛೇಡಿಸುವಳೋ ಏನೋ? ಅಂಜನದ ಮನೆ ಆ ರುಮಾಲುಧಾರಿ ವ್ಯಕ್ತಿಯ ಹುರಿಮೀಸೆ, ನೆಟ್ಟದೃಷ್ಟಿ, ಗಟ್ಟಿಸ್ವರಕೆ ಇವನಲ್ಲಿ ದೃಢವಾದ ನಂಬುಗೆಯೊಂದು ಹೊಮ್ಮಿ ಕಾಣಿಸಿಯೇ ಬಿಟ್ಟ ನೋಡಿ ಅಜ್ಜ!!
‘ಯಾವ ದಿಕ್ಕಿಗೆ ಹೋಗಿದಾನಂತೆ?’
‘ಈ ಕಡೆ…!’
‘ಯಾವಾಗ ಬರ್ತಾನಂತೆ…?’
‘ಊ…ಉಂ..ಬರದಿಲ್ಲ…!’
‘ಸರಿಯಾಗಿ ನೋಡಿ ಹೇಳು ಯಾವಾಗ ಬರುವನಂತೆ..?’
‘ಊ…..ಉಮ್…!’
‘ಹೋಗಿರೋದು ಎರಡು ಹೆಜ್ಜೆಯೋ ನಾಲ್ಕು ಹೆಜ್ಜೆಯೋ..?’
‘ಎರಡು….!’
‘ಮಾದಮಾಸೆ ಕಳೆದು ಬರ್ತಾನಂತಾ..?’
‘ಊ….ಉಂ…!’
”ನೋಡ್ ಶೇಖ್ರಪ್ಪ ವಿಷ್ಯಾ ಹಿಂಗೈತಿ…ಯಾವ್ದಕ್ಕೂ ಇನ್ನೊಮ್ಮೆ ಬಂದು ನೋಡು…”
ಮಗನಿಗಿಷ್ಟು ನೀರು ಕುಡಿಸಿ ಕಾಲು ಸೋತಿರಬೇಕೆಂದು ಹೆಗಲ ಮೇಲೆ ಕೂರಿಸಿಕೊಂಡು ಶೇಖರಪ್ಪ ಊರ ದಾರಿ ಹಿಡಿದ. ಅಪ್ಪನ ತಲೆಯ ಪೇಟವನ್ನು ತನ್ನೆರಡು ಕೈಬಳಸಿ ಬಿಗಿಯಾಗಿ ಹಿಡಿದ ರಂಗ,
‘ಅಪ್ಪಾ.. ನಾವೀಗ ಬಂದ ದಾರಿಯಲ್ಲೇ ವಾಪಾಸ್ ಹೋಗೋದಾ…?’
‘ಹೌದು ಕಣೋ, ಮತ್ತ್ಯಾವ ದಾರಿ ಐತಿ? ಯಾಕೆ ಸುಸ್ತಾಯ್ತಾ?’
ರಂಗನ ಕನಸಿನ ಗೋಪುರಗಳೆಲ್ಲ ದಬದಬನೆ ಉರುಳಿ ಬಿದ್ದವು. ಒಂದು ಪೇಟೆ ನೋಡ್ಲಿಲ್ಲ…ಪೇಟೆ ಬೀದಿ ನೋಡ್ಲಿಲ್ಲ…ಬೀದಿಯಂಗಡಿ ನೋಡ್ಲಿಲ್ಲ…!!!
ಆದರೂ ಅಷ್ಟು ದೂರದ ಈ ನಡಿಗೆ ಅವನಲ್ಲೇನೋ ಹೊಸ ಅಲೆಯನ್ನೆಬ್ಬಿಸಿತ್ತು. ಕಾಲುಗಳ ಕೀಲು ಎಲುಬು ಮಂಡಿಗಳಿಗೆ ವಿಶಿಷ್ಟ ಅನುಭವವಾಗಿ… ಆ ನಡಿಗೆಯ ದಣಿವೂ ಕೂಡ ಒಂದು ಚೇತೋಹಾರಿ ಸಮಾಚಾರವೆನಿಸಿತ್ತು. ಹೆದ್ದಾರಿ ನಂತರ ಅಪ್ಪನ ಹೆಗಲಿನಿಂದ ಇಳಿದವನೆ… ಈ ಸಾಹಸಯಾತ್ರೆಯ ದಣಿವನ್ನು ಮತ್ತಷ್ಟು ಪೇರಿಸಿಕೊಳ್ಳುವುವನಂತೆ ನಡೆದ….ನಡೆದ…ನಡೆದ….
ನಿರಾಸೆ ಹೊತ್ತು ಬಂದ ಗಂಡನ ಮುಖ ನೋಡಿ ಚೆನ್ನಮ್ಮ, ‘ಇನ್ನೊಮ್ಮೆ ಹೋಗ್ ಬಂದ್ರಾತು…ಈಗ ಊಟಕ್ಕೆ ಬನ್ನಿ’ ಎನ್ನುತ್ತಿದ್ದಂತೆ ಬಿಸಿಲಿನ ಝಳಕ್ಕೆ ಕಪ್ಪಿಟ್ಟಿದ್ದ ಮಗನ ಮುಖ ನೋಡಿ ಎಲ್ಲಿಲ್ಲದ ಮಮತೆಯುಕ್ಕಿ ತಣ್ಣೀರ ಅರಿವೆಯಲ್ಲಿ ಮುಖ ಕೈ ಕಾಲು ಒರೆಸಿ ಸೆರಗಿನಿಂದ ಗಾಳಿ ಹಾಕ ತೊಡಗಿದಳು. ಏನನ್ನೋ ಸಾಧಿಸಿದ ಸಂಭ್ರಮ ರಂಗನಿಗೆ! ರಾತ್ರಿಯೂಟಕ್ಕೆ ಕೂತೊಡನೆ ಅದೇ ಮುದ್ದೆ-ತಂಬುಳಿ! ಮತ್ತೇನೋ ಬೇಜಾರು….!?
ಬಾವಿ ಓಣಿಯಿಂದ ಓಡಿ ಬಂದ ಭೈರವಿ, ‘ಅಣ್ಣಾ! ಏನ್ ಗೊತ್ತೇನೋ? ಕೆಂಪಣ್ಣ ಗೌಡ್ರು ಮನೆಯಲ್ಲು ಟಿವಿ ತಂದಾರಂತೆ ಕಣೋ! ಪೋಸ್ಟ ಮಾಷ್ಟ್ರು ಮನೆಯೊಳಗಿಂದ ಅದೇನೇನೋ ಬೆಳಕು ಕಿಟಕಿಯಿಂದ ಕಾಣ್ಸುತ್ತಲಾ ಅಂತದೇ ಅಂತೆ! ಅದರೊಳಗಿರೋರೆಲ್ಲ ಯಾವಾಗ್ಲೂ ಆಟ ಆಡ್ತಾನೆ ಇರ್ತಾರಂತೆ…ಕಣೋ…!’ ಇವಳ ಈ ಟೀವಿ ಬಣ್ಣನೆಯಲ್ಲಿ ನನ್ನ ಪಯಣವೆಲ್ಲ ಎಲ್ಲಿ ಮಸುಕು ಆಗಿ ಬಿಡುತ್ತೋ ಅನ್ನೋ ಭರದಲ್ಲಿ ರಂಗ, ‘ಇವತ್ತು ನಾನು ಏನೇನು ನೋಡಿದೆ ಗೊತ್ತಾ? ಆನೆ,ಹುಲಿ,ಸಿಂಹ…! ಎಂತೆಂತ ಹಣ್ಣು…! ಏನೇನು ತಿಂಡಿ! ನೀನ್ ನೋಡ್ಬೇಕಿತ್ತು…! ಅಯ್ಯೋ ಅಷ್ಟು ದೂssರ ನಿನಗೆಲ್ಲಿ ಆಗತ್ತೆ…?’ ಎನ್ನುತಿದ್ದಂತೆ ಭೈರವಿಗೆ ಏನೋ ನೆನಪಾಗಿ ‘ಅಣ್ಣಾ! ಅಡುಗೆ ಆಟ ಆಡೋಣ ಬಾರೋ…’ ಎನ್ನುತ ಓಡಿ ಹೋಗಿ ಕಂಬಳಿ ತರುವಳು. ಸಾಕಾಗಿದ್ದ ರಂಗನಿಗೂ ಇದೇ ಬೇಕಾಗಿತ್ತು. ಇಬ್ಬರೂ ಕಂಬಳಿ ಹೊದ್ದವರೆ ಬೆನ್ನನ್ನೇ ಗೋಡೆಯಾಗಿಸಿಕೊಂಡು ವಿರುದ್ಧ ಮುಖ ಮಾಡಿ ಮಲಗುವರು. ಕಂಬಳಿಯನ್ನು ತಲೆಯಿಂದ ಕಾಲಿಂದ ಮೀಟಿಕೊಂಡರೆ ಅಕ್ಕಪಕ್ಕಕೆರಡು ಅಡುಗೆಮನೆ ಸಿದ್ಧವಾಗುವುದು…
‘ರೀ ಭೈರಮ್ಮನೋರೆ ಸ್ವಲ್ಪ ನೀರು ಇದ್ರೆ ಕೊಡ್ರಿ..’
‘ತಗೊಳಿ..’
‘ರಂಗಣ್ಣೋರೆ ಎಲ್ಡ್ ಚಿಪ್ಪು ಹಿಟ್ಟಿದ್ರೆ ಕೊಡ್ರಿ ನಾಳೀಕ್ ಕೊಡ್ತೀನಿ..’
‘ಅಯ್ಯೋ…ನಮ್ ಮನೇಲಿ ನಿನ್ನೆಯಿಂದ ಎಲ್ರೂ ಉಪಾಸ ಕಣ್ರಿ..ಒಂದ್ ಚಿಪ್ ಅಲ್ಲ…ಒಂದ್ ಚಿಟ್ಕಿ ಹಿಟ್ಟೂ ಇಲ್ಲ’
‘ಇರ್ಲಿ ಬಿಡಿ ಇದು ತಗೊಳ್ರಿ ಇವತ್ತಿಗೆ ತಿನ್ನಿ…ನಾಳೆಗೆ ಕೊಟ್ರಾಯ್ತು…!’
ರಂಗನ ಬಾಯಲ್ಲಿ ಚಿಲ್ಲೆಂದು ನೀರ್ಚಿಮ್ಮುವುದು! ಭೈರವಿ ಇಂದು ಚಿಗುಣಿ ಮಾಡಿದ್ದಾಳೆ…ನುಣುಪಾದ ಸೂರಿನ ಕಡ್ಡಿ ತುದಿಗೆ ಅದನ್ನು ಮೆತ್ತಿಕೊಂಡು, ಅಣ್ಣನಿಗಾಗಿ ತೆಗೆದಿರಿಸಿದ್ದಾಳೆ. ಇವತ್ತಿಡಿ ದಿನ ದಣಿದಿದ್ದ ಅಣ್ಣನ ದೀರ್ಘ ಪಯಣಕೊಂದು ಸಾರ್ಥಕ ಭಾವ!
ಹುಣಸೆಹಣ್ಣು ಉಪ್ಪು ಬೆಳ್ಳುಳ್ಳಿ ಜೀರಿಗೆ ಬೆಲ್ಲ ಖಾರದಪುಡಿ ಹಾಕಿ ಕರಿದುಂಡಿ ಮೇಲಿಟ್ಟು ಕುಟ್ಟಿ ನುಣುಪಾಗಿಸಿಕೊಂಡು ಚೀಪಿದರೆsss ಆಹಾ! ಮಹದಾನಂದ! ಬಾಯಲ್ಲಿ ಜಲಪಾತವೇ ಸೃಷ್ಟಿಯಾಗಿ…ಅಲೆ ಅಲೆಯಾಗಿ ಚಿಮ್ಮುವುದು!  ಮಾವು ಹಲಸು ಕಿತ್ತಲೆ ಪೇರಲೆ ಎಲ್ಲವನ್ನೂ ನಿವಾಳ್ಸಿ ತೆಗಿಬೇಕು!? ‘ಭೈರವಿದು ಎಷ್ಟೊಳ್ಳೆ ಮನಸು…ನಾ ಬರುವವರೆಗೂ..ಬಚ್ಚಿಟ್ಟು…ನನಗಾಗಿ ನೀಡಿದ್ದಾಳೆ…’ ಎಂದುಕೊಳ್ಳುತ ಜೇಬನ್ನು ತಡಕಾಡುವನು. ಇಬ್ಬರೂ ಸೇರಿ ಕೂಡಿಟ್ಟಿದ್ದ ಪೈಸೆಗಳವು. ಭೈರವಿಗೆ ಕೊಡೋಣವೆಂದರೆ ಅವಿಲ್ಲ…? ಊsss….ಉಂ…ಅವಿಲ್ಲ!
ಹೆದ್ದಾರಿಯ ಟಾರಿನಲ್ಲಿ ಲಾರಿ ಬೆಳಕಿಗೆ ಮಿನುಗುತ್ತಿವೆ…?
ಬಾಯೊಳಗಿಲ್ಲಿ ಚಿಗುಣಿ ಕರಗುತ್ತಿದೆ….!!

How do you like this post?

Click on a star to rate it!

Average rating 0 / 5. Vote count: 0

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಅರಬಗಟ್ಟೆ ಅಣ್ಣಪ್ಪ
Latest posts by ಅರಬಗಟ್ಟೆ ಅಣ್ಣಪ್ಪ (see all)

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಸತ್ಯದರ್ಶನ