Write to us : Contact.kshana@gmail.com

ವೈದ್ಯರಿಗೆ ನಮನ

5
(2)
ಬದಲಾವಣೆ ಜಗದ ನಿಯಮ. ಆದರೆ ನಮಗೂ ಬದಲಾವಣೆಗೂ ಆಗಿಬರುವುದಿಲ್ಲ. ಸದ್ಯ ನಮ್ಮ ಬಳಿ ಒಂದು ಬಾಳೆಹಣ್ಣಿದೆಯೆಂದರೆ ಅದನ್ನು ಬಳಸಿ ಇನ್ನೂ ಉಳಿಸಿಕೊಳ್ಳಲು ಸಾಧ್ಯವಿದೆಯೆ? ಎಂಬ ಆಲೋಚನೆಗಳೆ ಹೆಚ್ಚು ಮನೆಮಾಡುವುವು. ಹಲಸಿನಂಥ ಹಣ್ಣಿನ ಬಗ್ಗೆ ಹೋಗಲಿ, ಇನ್ನೊಂದು ಬಾಳೆಹಣ್ಣಿನ ಬಗೆಗೂ ಯೋಚಿಸುವುದಿಲ್ಲ. ಅನೇಕರ ಸ್ಥಿತಿಯೇ ಅಂಥದು. ಅವರು ಬದಲಾವಣೆಯನ್ನು ಜಗತ್ತಿನ ಕೈಗೆ ಒಪ್ಪಿಸಿ ಅದು ನೀಡಿದ್ದನ್ನೇ ಮಹಾಪ್ರಸಾದವೆಂದು ಆನಂದಿಸುವವರು. ಕಾರಣವಿಷ್ಟೆ ಜೀವನ ಮಹಾಸಾಗರದಲ್ಲಿ ಇನ್ನೇನು ಮುಳುಗುವ ಸ್ಥಿತಿಯಲ್ಲಿರುವ ಬದುಕಿನ ನಾವೆಯನ್ನು ಉಳಿಸಲು ಪ್ರಯತ್ನ ಹಾಕುವ ಭರದಲಿ ನಾಲ್ಕು ಘಳಿಗೆ ಜೀವಿಸುವ ಅವಕಾಶವೂ ಕೈತಪ್ಪಿ ಹೋಗುವ ಸಂಭವವೇ ಹೆಚ್ಚು. ಇಂಥವೇ ಸ್ಥಿತಿಗಳು ನಮ್ಮ ಬದುಕಿನುದ್ದಕ್ಕೂ ಪ್ರಕಟವಾದ್ದರಿಂದ ಹೆಚ್ಚಿನ ಬದಲಾವಣೆಗಳಿಗೆ ತಾನಾಗಿಯೇ ಕೈ ಹಾಕದೆ ಯಾವ ಗೊಂದಲ ಸಾಹಸಗಳಿಗೂ ಪ್ರಯತ್ನಿಸದೆ ವಸ್ತುಸ್ಥಿತಿಯನ್ನೇ ಮುನ್ನೆಡೆಸಿಕೊಂಡು ಹೋಗುವ ಮನಸ್ಥಿತಿ ಬೆಳೆದು ಬಿಟ್ಟಿತು. ವೈಚಿತ್ರ್ಯವೆಂದರೆ ಯಾವುದಾದರೂ ಬದಲಾವಣೆಗೆ ಕೈ ಹಾಕಿದೆವೋ ಅದನ್ನು ಪ್ರಗತಿ ಕಾಣಿಸದೇ ವಿರಮಿಸುವುದಿಲ್ಲ. ಇಂಥ ಬದುಕಿನ ಹೋರಾಟದಲ್ಲೆ ಬಂದವರು ನಮ್ಮವ್ವ! ಮದುವೆಯಾದ ಹೊಸತು ಎಲ್ಲವೂ ಚೆನ್ನಿತ್ತು, ಬರಬರುತ್ತ ಅಲ್ಲೋಲ್ಲಕಲ್ಲೋಲವಾದ ಜೀವನ ಇವಳದು. ಬಂಧುಗಳಲ್ಲಿ ನಮಗೆ ಹೆಚ್ಚಾಗಿ ತಾಯಿ ಕಡೆಯ ಸಂಬಂಧವೇ ಹೆಚ್ಚು ನಿಕಟವಾಗುತ್ತದೆ. ತಂದೆಯ ಕಡೆಯ ಸಂಬಂಧಗಳು ಮಸುಕು ಮಸುಕಾಗಿ ಬಿಡುತ್ತವೆ. ಕಾರಣ ತುಂಬಾ ಸರಳ. ತಂದೆ ಕಡೆ ಸಂಬಂಧ ಎಷ್ಟೇ ಚೆನ್ನಿದ್ದರು ಅದನ್ನು ಹಾಳು ಮಾಡಲು ಭೌತಿಕ ಸಂಪತ್ತಿನ ಹಂಚಿಕೆಯೊಂದು ಕಾದು ಕುಳಿತಿರುತ್ತದೆ. ಆದರೆ ತಾಯಿ ಕಡೆಯ ಸಂಬಂಧಕ್ಕೆ ಇಂಥವಾವುದರ ಗೊಡವೆಯೇ ಇಲ್ಲ. ಬರೀ ಪ್ರೀತಿ ಮಮತೆ ಊಟ ತಿಂಡಿ ತೀರ್ಥಗಳನ್ನೇ ಹಾಸುಹೊದ್ದು ಮಲಗುವುದರಿಂದ ಈ ಸಂಬಂಧ ಹೆಚ್ಚಿನ ಪೇಚಿಗೆ ಸಿಲುಕುವುದಿಲ್ಲ. ತುಂಬು ಕಷ್ಟಗಳನೇ ಎದುರಿಸಿದ ನಮ್ಮಪ್ಪ ಅವ್ವರದು ಸಾಹಸಮಯ ಜೀವನ. ತೊಂಬತ್ತರ ದಶಕದಿಂದ ಇಲ್ಲಿಯವರೆಗೂ ಸಾಗಿದೆ ಪಯಣ. ಇರುವ ಐವತ್ತೆಂಟು ಗುಂಟೆ ಖುಷ್ಕಿ ಜಮೀನಂತು ಪಾಯಿದೆಯಿಲ್ಲದ್ದು…ಬಿತ್ತನೆಯ ಕೂಲಿ ಸಿಕ್ಕರೆ ಸಾಕಿತ್ತು. ಹೀಗಾಗಿ ಕೂಲಿಯೊಂದನ್ನೇ ತಮ್ಮ ಕೇಂದ್ರಸರ್ಕಾರಿ ನೌಕರಿಯನ್ನಾಗಿಸಿಕೊಂಡು ಮೇಲೆ ಬಂದ ಹೋರಾಟವಿವರದು. ಎಷ್ಟು ಕೂಲಿ ಮಾಡಿದರೆ ಏನು ಬಂತು. ಪ್ರತೀದಿನ ಹತ್ತು ಹದಿನೈದು ಮೈಲಿ ನಡೆದು ನಡೆದೂ ಎಷ್ಟು ದಿನ ಹೊಟ್ಟೆ ಹೊರೆಯಲಾದೀತು. ಅಂತಿಮವಾಗಿ ಮಕ್ಕಳಿಗೆ ನಾವೇ ಹೊರೆಯಾಗಬಾರದೆಂದೆನಿಸಿ ದಾಯಾದಿಗಳಲ್ಲೇ ಮಾರಾಟಕ್ಕಿದ್ದ ಜಮೀನೊಂದನ್ನು ಖರೀದಿಸಲು ಮುಂದಾದರು. ಜೀವನದ ಎರಡನೆ ಪ್ರಮುಖ ಬದಲಾವಣೆಗೆ ಕೈ ಹಾಕಿದರು. ಮೊದಲನೆಯದು ಮನೆಯಿಂದ ಹೊರಬಂದು ಮುಡುಕೆಯೊಷ್ಟು ಜಾಗವಿದ್ದ ಕೊಟ್ಟಿಗೆಯ ಗುಡಿಸಲಿಗೆ ವಾಸ್ತವ್ಯ ಬದಲಾವಣೆ. ಎರಡನೆಯದು ಈ ಜಮೀನು ಖರೀದಿ. ಮಾತುಕತೆ ಪಂಚಾಯಿತಿ ಹೇಗಾದವು ಎಂಥದಾವು ಎಂಬುದಿಲ್ಲಿ ಮುಖ್ಯವಲ್ಲ. ನಮ್ಮ ಕಡೆಯೇ ನ್ಯಾಯವೆಷ್ಟು ಪ್ರಖರವಿತ್ತೆಂಬುದನು ವಿವರಿಸಲೂ ಮನಸ್ಸಿಲ್ಲ. ಆದರೆ ಯಾವುದೇ ಸಮಸ್ಯೆಗಳಿಗೆ ಜಗಳವೊಂದೇ ಪರಿಹಾರವಲ್ಲ. ಅದಾಗದೂ ಕೂಡ. ಆದರೆ ನಮ್ಮ ಈ ಜಮೀನು ಖರೀದಿಯ ವಿಷಯದಲ್ಲಿ ಆಗಿಯೇ ಬಿಟ್ಟಿತೊಂದು ಮಹಾಯುದ್ಧ. ನಮ್ಮನ್ನು ಪ್ರೀತಿಯಿಂದ ಎತ್ತಿ ಆಡಿಸಿದ ಕಾಕಂದಿರು ಒಂದೆಡೆ, ಮುದ್ದಾಗಿ ಸಾಕುತಿರುವ ನಮ್ಮಪ್ಪ ಅವ್ವರು ಒಂದೆಡೆ. ಇದನ್ನು ಯಾವ ಮಕ್ಕಳಾದರೂ ಕಣ್ತುಂಬಿಕೊಳ್ಳಲು ಇಷ್ಟಪಟ್ಟಾರೆಯೇ? ಪುಟ್ಟ ಗುಡಿಸಲಿನ ಜಗುಲಿಯಲಿ ನಾನು ನನ್ನ ತಂಗಿ ಗೋಳೋs ಎಂದು ಅಳುವುದಷ್ಟೆ… ಈ ಮುಗ್ಧರ, ಅಮಾಯಕರ ಕೂಗನ್ನು ಮಹಾಯುದ್ಧಗಳು ಎಂದಾದರೂ ಕೇಳಿಸಿಕೊಂಡ ಉದಾಹರಣೆಗಳು ಇತಿಹಾಸದಲ್ಲಿವೆಯೇ! ಮೊದಲ ಬಲಿಯಂತೂ ಅವರೆ. ಜಗಳದಲಿ ಒಬ್ಬರ ಕೈ ಮತ್ತೊಬ್ಬರ ಕೈ ಮೇಲಾಗುತಿದೆ! ಹಳ್ಳಿ ಜಗಳ ಖದರೇ ವಿಚಿತ್ರ!! ಬಿಡಿಸಲು ಬಂದವರೂ ಜಗಳ ಕಾದ ಬೇಕಾಗುತ್ತದೆ!! ಹಲವೊಮ್ಮೆ ಜಗಳದ ದಿಕ್ಕೇ ಬದಲಾಗಿ ಮತ್ತೊಂದು ಯುದ್ಧ ಘಟಿಸಿಬಿಡಬಹುದು. ನನಗಿನ್ನು ಆ ದಿನ ಕಣ್ಣಿಗೆ ಕಟ್ಟಿದಂತೆ ನೆನಪಿದೆ. ಹುಣ್ಣಿಮೆಯಾದರೂ ಪ್ರಖರ ಅಂಧಕಾರದ ಸಂಜೆ. ಚಂದ್ರನಿಗೂ ಹೇಸಿಗೆಯುಟ್ಟಿ ಕಾರ್ಮೋಡಗಳ ಒಳಗೆ ಅವಿತಿದ್ದಾನೆ. ಎಳೆಯ ಮಕ್ಕಳಾದ ನಮಗೆ ಯಾವ ರಕ್ಷಣೆಯಿಲ್ಲ. ನನ್ನನ್ನು ನನ್ನ ತಂಗಿ, ನನ್ನ ತಂಗಿಯನು ನಾನು ಗಾಢವಾಗಿ ಹಿಡಿದುಕೊಂಡು ನಡುಗುತ್ತ ‘ಅಣ್ಣಾsss ಅವ್ವsss’ ಎಂಬ ಅಳುವೇ ತಡೆಗೋಡೆ. ಮಸುಕು ಮಸುಕಾದ ಕಣ್ಣುಗಳಿಗೆ ನಮ್ಮ ಗುಡಿಸಲ ಮುಂದೆ ಕುರಿ ಕಟ್ಟಲಿರುವ ಗೂಟಗಳು ಕಾಣಿಸುತ್ತಿವೆ. ನಮ್ಮಣ್ಣ ಎಡವಿ ಬಿದ್ದ ರಭಸಕೆ ರಕ್ತ…. ನಮ್ಮವ್ವನನು ಅರಸಿ ಬೀಸಿ ಬಂದ ದೊಣ್ಣೆಯೊಂದು ದಿಕ್ಕು ತಪ್ಪಿ ನಮ್ಮಣ್ಣನ ತಲೆಗೆ ಬಲವಾಗಿ ಬಿದ್ದದ್ದೇ ತಡ… ಅದೂssವರೆಗು ಭೋರ್ಗರೆಯುವ ಮೋಡಗಳಂತೆ ನೆರೆದಿದ್ದ ಕರಾಳವೆಲ್ಲ ನುಣುಚಿಕೊಂಡು ನಮ್ಮನೆಯೊಂದಕೆ ನುಗ್ಗಿದ ಹೋರಿಯಂಥಾಗಿತ್ತು. ಕೆಸರಿನ ಮಡುವಲ್ಲಿ ಬಿದ್ದ ನಮ್ಮಣ್ಣನನ್ನು ನಮ್ಮವ್ವ ನಾವಿಬ್ಬರು ಮೆಲ್ಲಗೆ ಎತ್ತಿಕೊಳ್ಳಲು ಸಾಹಸಪಟ್ಟು ಗುಡಿಸಲಿನ ಒಳಕ್ಕೆ ಎಳೆದೊಯ್ದೆವು. ಇಂದಿಗೂ ನೆನಪಿದೆ ಅಂದು ನಮ್ಮಣ್ಣನನ್ನು ಒಳಕ್ಕೆ ಸಾಗಿಸಿ ಮೆಲ್ಲಗೆ ನೀರು ಕುಡಿಸುವಾಗ ಸಮಾಧಾನಿಸಿದ ಒಬ್ಬೇ ಒಬ್ಬರೆಂದರೆ ಸಣ್ಣಬಸಪ್ಪ ಮಾಸ್ಟರ್! ಅದೂವರೆಗೂ ದೊಡ್ಡಿಯಂಥೆ ತುಂಬಿಕೊಂಡ ಜನ ಒಬ್ಬರೂ ಇರಲಿಲ್ಲ. ಭೀಕರ ವರ್ಷಧಾರೆಯ ನಂತರ ಶಾಂತವಾದ ಪರಿಸರದಲ್ಲಿ ನರಳುವ ದನಿಯೊಂದು ನಮ್ಮನ್ನು ಕಂಗೆಡಿಸುತಿದೆ. ಆಸ್ಪತ್ರೆಯಿಲ್ಲ, ಬಸ್ಸುಗಳಿಲ್ಲ! ಅವಾದರೊ ಪಾಪ ಇರಲಿಲ್ಲ ಬಿಡಿ. ನೆರೆಹೊರೆ ಬಂಧುಜನ ಇದ್ದೂ ಇರಲಿಲ್ಲ. ನಟ್ಟನಡುರಾತ್ರಿ ಬೇರೆ. ಬಸವಳಿದು ನರಳುತ್ತ ಬಿದ್ದ ನನ್ನಣ್ಣನನ್ನು ಕ್ಷಣಕ್ಷಣಕ್ಕೂ ಕಾಪಿಟ್ಟು ಕೋಳಿ ಕೂಗುವುದನೇ ಕಾದು ಮುಂಮುಂಜಾನೆಗೇ ಹೊತ್ತು ನಡೆದಳು ನಮ್ಮವ್ವ. ನಮ್ಮನ್ನು ಹೇಗೆ? ಎಲ್ಲಿಗೆ? ಯಾವಾಗ? ಕಳುಹಿಸಿದಳು ನನಗಂತೂ ನೆನಪಿಲ್ಲ! ಜಗಳದ ಪ್ರಹಾರದ ತೀವ್ರತೆಗೆ ಅವೆಲ್ಲ ಮಸುಕಾಗಿ ಬಿಟ್ಟಿವೆ. ಅಂದು ಊರಿಗೆ ಬಸ್ಸಿರಲಿಲ್ಲ. ಬೆಳಗ್ಗೆಯೇ ಎಲ್ಲಿಗೋ ಹೊರಟಿದ್ದ ಪಕ್ಕದೂರಿನ ಚಕ್ಕಡಿಯನ್ನು ತಡೆದು ಅಣ್ಣನನ್ನು ಹೊನ್ನಾಳಿಗೆ ಕರೆತಂದಿದ್ದಾಳೆ. ಕೈಯಲ್ಲಿರುವುದು ಬರೀ ನೂರು ರೂಪಾಯಿ! ಹತ್ತರ ನೋಟಿನ ಕಂತೆ. ಎಲ್ಲಿಗೆ ಹೋಗುವುದು? ಗೊತ್ತು ಪರಿಚಯವಿಲ್ಲದೆ ಯಾವಯಾವುದೋ ಆಸ್ಪತ್ರೆಗಳಿಗೆ ಹೋದರೆ ಆಗುವ ಗತಿಯೇನೆಂಬುದು ತಿಳಿದದ್ದೆ! ತಕ್ಷಣ ನೆನಪಾದವರು ತನ್ನ ತವರೂರಿನ ಪಕ್ಕದ ಕೊಮ್ಮನಾಳು ಆಸ್ಪತ್ರೆಯ ಡಾಕ್ಟರ್. ರಾಜೇಶ್ವರ ಡಾಕ್ಟ್ರು ರಾಜೇಶ್ವರ ಡಾಕ್ಟ್ರು ದೇವರಂಥ ಜನರೆಂದು ಈಗಲೂ ಕೈ ಮುಗಿದು ಸ್ಮರಿಸುತ್ತಾಳೆ ನಮ್ಮವ್ವ. ಆಗಿನ ಕಾಲಕ್ಕೆ ನಮ್ಮಂಥ ಜನರಿಗೆ ದೇವರಂಥವರು! ಸೀದಾ ಬೂದಿಗೆರೆಗೆ ಟಿಕೇಟು ಮಾಡಿಸಿ ಬಂದು ಇಳಿದದ್ದಾಯಿತು. ಅದೊಂದು ಮೂರುರಸ್ತೆಗಳು ಕೂಡುವ ಜಾಗ. ನಿರ್ಜನ ಪ್ರದೇಶ. ಅಲ್ಲಿಂದ ಕೊಮ್ಮನಾಳು ಆಸ್ಪತ್ರೆಗೆ ಒಂದು ಕಿಮೀ ದೂರದ ಎದೆ ನಡುಗಿಸುವಂಥ-ಕಾಲುಗಳು ಅದುರುವಂಥ ಕಡಿದಾದ ಇಳಿಜಾರಿನ ರಸ್ತೆ. ತಗ್ಗು ದಿಣ್ಣೆ ಗುಂಡಿಗಳು ಬೇರೆ. ಆಗಿನ್ನು ಟಾರಿನ ಸ್ಪರ್ಶಗಳು ಅಷ್ಟಾಗಿರಲಿಲ್ಲ. ನನ್ನಣ್ಣನ ಶಿರ ಬೇರೆ ನಿಲ್ಲುತ್ತಿಲ್ಲ. ಜೋಲಿ ಹೊಡೆಯುತ್ತಲೆ ಬಾಯಲ್ಲಿ ಜೊಲ್ಲು ಸುರಿಯುತ್ತಿದೆ. ನಡೆಯಲೂ ಆಗದು ಏನು ಮಾಡಬೇಕು? ತಡಮಾಡದೆ ಅಣ್ಣನನ್ನು ಹೊತ್ತುಕೊಂಡೆ ಅಷ್ಟು ದೂರ ಸಾಗಿದ್ದಾಳೆ. ಇಳಿಜಾರು ಕಳೆದ ನಂತರ ಕಮ್ಮಾರಿಕೆಯ ಕೆಲಸದವರು, ಇಟ್ಟಿಗೆಗುಮ್ಮಿಯ ಕೆಲಸದವರು ಭಯ ಅಚ್ಚರಿಗೊಳಗಾಗಿ ನಿಂತು ನೋಡುತಿದ್ದಾರೆ. ಇದಾವುದೋ ಅಪಘಾತದ ಕೇಸಿರಬೇಕೆಂದು ಒಬ್ಬರು ಓಡಿಹೋಗಿ ಆಸ್ಪತ್ರೆಗೆ ಸುದ್ಧಿ ಮುಟ್ಟಿಸಿದ್ದಾರೆ. ಕಾಂಪೌಡರು ಸಿಸ್ಟರುಗಳು ಹೊರಬಂದು ನಮ್ಮವ್ವನ ಹೆಗಲಿನಿಂದ ನಮ್ಮಣ್ಣನ ಮೊದಲು ಇಳಿಸಿಕೊಂಡು ನೀರುನಿಡಿಕೊಟ್ಟು ಸಮಾಧಾನಿಸಿದ್ದಾರೆ. ರಾಜೇಶ್ವರ ಡಾಕ್ಟ್ರು ಏನು ಎತ್ತ ಎಲ್ಲವನ್ನು ನಿಧಾನಿಸಿ ಕೇಳಿ ಸಮಾಧಾನಪಡಿಸಿ ಪ್ರಥಮಚಿಕಿತ್ಸೆ ನೀಡಿಯಾಗಿದೆ. ಆದರೆ ಕತ್ತು ಮಾತ್ರ ನಿಲ್ಲುತಿಲ್ಲ. ದೊಡ್ಡಚಿಕಿತ್ಸೆಗೆ ಶಿವಮೊಗ್ಗಕ್ಕೆ ಹೋಗಬೇಕು. ನಮ್ಮವ್ವನ ಬಳಿ ಹಣವಿಲ್ಲ. ಇದ್ದದ್ದೇ ನೂರು! ಅದೂ ಚಿದ್ದಂಚೂರಾಗಿ ಉಳಿದದ್ದಿಷ್ಟು ಪುಡಿಗಾಸು! ದಾರಿ ಕಾಣದೆ ಕೂತ ನಮ್ಮವ್ವನನ್ನು ಸಮಾಧಾನಿಸಿ ನರ್ಸ್ ಒಬ್ಬರನ್ನು ಜೊತೆ ಮಾಡಿ ಪರಿಚಯದ ಶಿವಮೊಗ್ಗ ಆಸ್ಪತ್ರೆಯೊಂದಕೆ ಚೀಟಿಯನ್ನು ಕೊಟ್ಟು ಕಳುಹಿಸಿದವರು ಕೊಮ್ಮನಾಳು ಸರ್ಕಾರಿ ಆಸ್ಪತ್ರೆಯ ರಾಜೇಶ್ವರ ಡಾಕ್ಟ್ರು! ನಡೆದಾಡುವಷ್ಟು ಗುಣಮುಖರಾದ ಮೇಲೆ ವಾಪಾಸ್ಸು ಊರಿಗೆ ಹೋಗಲಿಕ್ಕೇ ಭಯ ನಮ್ಮಣ್ಣನಿಗೆ. ‘ಊರು ಬಿಟ್ಟು ಬಂದ್ರೆ ಕರು ಕಟ್ಟೊ ಗೂಟಕ್ಕಿಂತ ಕಡೆಯಾಗಿ ಹೋಗ್ತೀವಿ’ ಎಂದರಿತು ತವರೂರು ಸೋಮಿನಕೊಪ್ಪದಲ್ಲಿದ್ದ ನಮ್ಮನ್ನೂ ಕರೆದುಕೊಂಡು ಮತ್ತೆ ಊರೆಡೆಗೆ ಹೊರಟಿದ್ದಾಯಿತು. ಕೊಮ್ಮನಾಳು ಡಾಕ್ಟ್ರನ್ನು ಕಂಡು ಹೋಗಲು ನಿರ್ಧರಿಸಿ ಹೊರಟೆವು.
‘ಇಂಥ ಅನ್ಯಾಯ ಮೋಸವನ್ನು ನೀವು ಖಂಡಿಸಲೇ ಬೇಕು. ನಾನಿದ್ದೀನಿ ಅಮ್ಮ. ಕಂಪ್ಲೆಂಟ್ ಬರೆದು ಕೊಡಿ. ನಾನು ನಿಂತು ನಿಮಗೆ ನ್ಯಾಯ ಕೊಡಿಸುತ್ತೇನೆ. ಅದೆಷ್ಟೆ ಖರ್ಚಾಗಲಿ. ದುಡಿಯೋ ಗಂಡಂತೂ ಮೂಲೆಗೆ ಬಿತ್ತು. ಎರಡು ಚಿನ್ನದಂಥ ಮಕ್ಕಳು ಬೇರೆ ಇದಾವೆ. ನೀನೊಬ್ಬಳೇ ಕೂಲಿ ಮಾಡಿ ಬದುಕೋದು ಆಡಿದಷ್ಟು ಸುಲಭದ ಮಾತಲ್ಲ ತಾಯಿ. ನಿಮಗೆ ಬೇಕಾದ ಸಹಕಾರ ಕೊಡುತಿನಿ. ಮೊದ್ಲು ಕಂಪ್ಲೆಂಟು ಕೊಡು’ ಎಂದ ಕರುಣಾಮಯಿ ಡಾಕ್ಟ್ರಿಗೆ ನಮ್ಮವ್ವನದು ಒಂದೇ ಉತ್ತರ, ‘ಎಷ್ಟಾದರು ಅಣ್ಣತಮ್ಳು ಜಗ್ಳ ಇವತ್ತು ಹೋಗದಲ್ಲ ನಾಳೀಕೆ ಬರೋದಲ್ಲ! ಇವ್ರು ಬಾಯಚ್ಚಿ ಕಡುದ್ರು, ಅವ್ರು ಕಣಗೆ ತಗಂಡು ಹೊಡುದ್ರು. ಅಲ್ಲಿಗೆ ಸರಿಹೋತು ಅನ್ಕತೀವಿ. ನಮಗಂತೂ ಈಗ ಒಂದೊತ್ತಿಗಾದ್ರೆ ಇನ್ನೊಂದೊತ್ತಿಗಿಲ್ಲ. ಕೊಲ್ಟು ಕಚೇರಿ ಅಂತೊದ್ರೆ ಜನ ಮೆಚ್ತಾರಾ. ನಮ್ಮ ಪೈಕಿ ಇದೂವರ್ಗೂ ಯಾರೂ ಕೊಲ್ಟ್ ಮೆಟ್ಲು ಹತ್ತಿಲ್ಲ. ಅದೇ ಕಡುಕ್ಲು ರೊಟ್ಟಿ, ಬಳುಕ್ಲು ಮುದ್ದೆಯಾದ್ರೂ ಚಿಂತಿಲ್ಲ. ನಮ್ಮಲ್ಲಿ ಒಳ್ಳೇತನ ಇರೋದಾದ್ರೆ ಹನುಮಪ್ಪ ಉಳ್ಸ್ಕೋತಾನೆ ಇಲ್ಲಾ ಮುಳ್ಗ್ಸತಾನೆ. ಆದರೆ ಒಂದೇ ಒಂದು ಭಾಷೆ ಡಾಕ್ಟ್ರೆ ಈಗ ನನ್ನತ್ರ ತಲೆಹೊಡುದ್ರೂ ಐಪೆಸಾ ಇಲ್ಲ. ಊರಾಗ ಹಿರೇರು ಪುಣಾತ್ಮರು ಅಂತ ಅದಾರೆ. ಆ ಜಮೀನು ಖರೀದಿಗೆ ಕೊಟ್ಟ ಅಡ್ವಾಂಸು ಹೇಗಾದ್ರೂ ಮಾಡಿ ವಾಪಾಸು ಇಸ್ಕೊಂಡೆ ಮ್ಯಾಲೇ ನಿಮ್ಮ ದುಡ್ಡು ಕೊಡೋಕಾಗೋದು. ನಮ್ಮತ್ರ ಹಣ ಅಂತಿದ್ರೆ ಅದೊಂದೆ!’
‘ಅಲ್ಲ ತಾಯಿ ನಾನೊಂದು ಹೇಳಿದ್ರೆ ನೀನೊಂದು ಹೇಳ್ತಿ. ನಾನೀಗ ದುಡ್ಡು ಕೇಳಿದ್ನಾ? ನ್ಯಾಯ ನಿಮ್ಕಡೆನೇ ಇದೆ. ಆದ್ರೂ ಕೋರ್ಟು ಕಛೇರಿ ಬೇಡ ಅಂತೀಯಾ. ಇದೇ ಧರ್ಮ ನಿಮ್ಮನ್ನು ಕಾಪಾಡುತ್ತೆ. ಬಸ್ಸಿಗೇನಾದ್ರೂ, ಮನೆ ಖರ್ಚಿಗೇನಾದ್ರೂ ದುಡ್ಡು ಬೇಕಾಗಬಹುದು ಕೇಳಿ ಪಡಿ ತಾಯಿ. ದುಡ್ಡೇನು ವಾಪಾಸು ಕೊಡುದು ಬೇಡ. ಒಳ್ಳೇದಾಗ್ಲಿ ಅಷ್ಟು ಸಾಕು!’ ಎಂದ ಡಾಕ್ಟರನು ನೆನದಾಗ ನಮ್ಮವ್ವ ಈಗಲು ಕೈಮುಗಿದು ನೆನೆಯುವುದರಲ್ಲಿ ಅಚ್ಚರಿಯೇನಿಲ್ಲ. ಈಗವರು ಬದುಕಿಲ್ಲವೆಂಬುದು ವಿಷಾದದ ಸಂಗತಿ!
ಸ್ವಲ್ಪ ಸುಧಾರಿಸಿಕೊಂಡಿದ್ದ ಅಣ್ಣನೊಟ್ಟಿಗೆ ಊರಿಗೆ ಹೋದ ಕೆಲವೇ ದಿನಕ್ಕೆ ಮತ್ತಷ್ಟು ಪೀಕಲಾಟಗಳು ಶುರು. ಅಣ್ಣ ಸರಿರಾತ್ರಿಯಲ್ಲಿ ಎದ್ದೆದ್ದು ಕೂಡುವುದು ಹಾಸಿಗೆಯನ್ನಲ್ಲ ಮಡಿಚಿಟ್ಟು ‘ನನಗೆ ಯಾರೋ ಹೊಡಿತಾರೆ, ಇಲ್ಲಿರೋದು ಬೇಡ. ನನಗೆ ಮತ್ತೆ ಹೊಡಿತಾರೆ’ ಈ ತರಹದ ಮಾನಸಿಕ ಉಲ್ಬಣಗೊಳ್ಳುತ್ತಿದ್ದಂತೆ ಪುಟ್ಟೇ ಪುಟ್ಟದಾದ ಸಂಸಾರ ಮತ್ತೆ ಹಳಿ ತಪ್ಪತೊಡಗಿತು.
ಮುಂದಿನದು ಮತ್ತೊಂದು ಮಹಾಯಾತ್ರೆ! ಬರೆಯುವೆ!

How do you like this post?

Click on a star to rate it!

Average rating 5 / 5. Vote count: 2

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಅರಬಗಟ್ಟೆ ಅಣ್ಣಪ್ಪ
Latest posts by ಅರಬಗಟ್ಟೆ ಅಣ್ಣಪ್ಪ (see all)

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಸಂಕಲ್ಪ