ಸಂಕಟವು ಬಂದಾಗ
ಸಂಕಟವು ಬಂದಾಗ ವೆಂಕಟನ ನೆನೆವೇನು ?
ಮಂಕೆ ಸುಂಕವದುಂಟೆ ಸಿರಿ ಹರಿಯ ನೆನೆಯೆ ?
ಅಂಕೆಯಿಲ್ಲದೆ ಮೆರೆದು ಬಿಂಕದಿಂ ಶಂಕಿಸುತ
ಕೊಂಕು ನುಡಿವೇಕೆ ಬಿಡು ಜಾಣಮೂರ್ಖ//
ಮನುಷ್ಯ ಹೀಗೇನೇ ! ಸಂಕಟ ಬಂದಾಗ ವೆಂಕಟರಮಣ ಎನ್ನುತ್ತಾನೆ. ಚೆನ್ನಾಗಿದ್ದಾಗ ಆತನ ನೆನಪೇ ಇರೋದಿಲ್ಲ ! ಅಂಕೆಯಿಲ್ಲದೇ ಮೆರೆಯುತ್ತೇವೆ. ದೇವನಿರುವನೇ !? ಇರುವನೆನಲು ಏನಾದರೂ ಆಧಾರವಿದೆಯೇ? ಎಂಬ ರೀತಿಯಲ್ಲಿ ಶಂಕಿಸುತ್ತೇವೆ ! ಬಿಂಕ ಬಿನ್ನಾಣದದಿಂದ ವರ್ತಿಸುತ್ತೇವೆ. ಕೆಲ ಸಮಯದಲ್ಲಂತೂ ತುಂಬಾ ವಿಚಾರವಾದಿಗಳಂತೆ ಸೋಗು ಹಾಕುತ್ತಾ , ನಾಸ್ತಿಕರಾಗಿ ಕೊಂಕು ನುಡಿಯುತ್ತೇವೆ. ನಿಜ ಹೇಳಬೇಕೆಂದರೆ ನಾಸ್ತಿಕನೊಬ್ಬನ ಮನದಾಳದಲ್ಲಿ ಮೊಗದಲ್ಲಿ ದೇವನಿದ್ದರೆ ! ಎಂಬ ಭಯ ಎದ್ದು ಕಾಣುತ್ತಿರುತ್ತದೆ. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆಂಬಂತೆ ಕುಣಿದಾಡುತ್ತಾರಷ್ಟೆ. ಆದರೆ ಆಸ್ತಿಕ ಜನರಷ್ಟು ನೆಮ್ಮದಿ ಶಾಂತಿಗಳು ಅವರಲ್ಲಿರುವುದಿಲ್ಲ!ಕಷ್ಟ ಬಂದಾಗ ಓ ದೇವನೇ ನಿನಗೇ ಕರುಣೆ ಬಾರದೇ ? ಎನ್ನ ಕೈ ಬಿಟ್ಟೇಕೆ ? ಎಂದು ಕೂಗುತ್ತೇವೆ. ಭಗವಂತನಿದ್ದಾನೆಂಬ ನಿಶ್ಚಲ ನಂಬಿಕೆಯಲ್ಲಿದ್ದವರಿಗೆ ಭಗವಂತನ ಸಾಕ್ಷಾತ್ಕಾರವೂ ಲಭಿಸುತ್ತದೆ. ದೈವಮೂಲವನ್ನರಸಿ, ಸುಮ್ಮನೆ ವ್ಯರ್ಥ ಜಿಜ್ಞಾಸೆಗಳಲ್ಲಿ ತೊಡಗಿ ಆಯಸ್ಸನ್ನೂ, ಕಾಲವನ್ನೂ ಸವೆಸೋದಕ್ಕಿಂತ ಆಸ್ತಿಕರಾಗಿ ನೆಮ್ಮದಿಯಿಂದ ಬದುಕಬಹುದಲ್ಲವೇ !? ಹರಿನಾಮಕ್ಕೆ ಕರ(ಸುಂಕ)ವನ್ನೇನೂ ತೆರಬೇಕಿಲ್ಲವಲ್ಲ !? ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021