ಕನಕ ಮುಕುಟಾಭರಣ ಪೀತಾಂಬರವ ಕೊಟ್ಟು
ಮನದೊಳಗೆ ಕೊಟ್ಟೆ ನಾನೆನಲೇನು ಬಂತು ?
ಅನಿಬರ್ಗೊ ದೇವಂಗೊ ಕೊಟ್ಟುದೇನಾರ್ಗೆ ಪೇಳ್ !
ಹನನಮಾಯ್ತೈ ಭಾವ ಜಾಣಮೂರ್ಖ//
ಇತ್ತೀಚೆಗೆ ಕೊಡುವಿಕೆ , ನೀಡುವಿಕೆಗಳು ಒಂದು ತರಹೆ ತೋರ್ಪಡಿಕೆಯಾಗಿಬಿಟ್ಟಿದೆ. ದೇವರಿಗೆ ಬಂಗಾರದ ಕಿರೀಟ ಕೊಟ್ಟೆ , ಪೀತಾಂಬರ ಕೊಟ್ಟೆ , ಇಲ್ಲಿ ಇಷ್ಟು ಜನಕ್ಕೆ ಊಟ ಹಾಕಿಸಿದೆ ! ಏನಾಶ್ಚರ್ಯ ಅಲ್ಲವೇ ? ಮನದೊಳಗೆ ನಾನು ಕೊಟ್ಟೆ ಎಂಬ ಭಾವ ಲೇಶಮಾತ್ರ ನುಸುಳಿದರೂ ಸಾಕು. ಏನು ಪ್ರಯೋಜನವಾಯ್ತು ? ಕೊಟ್ಟುದೇನಿದ್ದರೂ ನಿಷ್ಪ್ರಯೋಕವಾಯ್ತು. ಹೋಗಲಯ್ಯ , ಕೊಡಲು ನೀನಾರು ? ಕೊಟ್ಟುದಾದರೂ ಯಾರಿಗೆ ? ಜನರಿಗಾಗೋ ! ದೇವನಿಗಾಗೋ ?! ಕೊಟ್ಟುದಾಯಿತು ಬಿಡು ! ಮತ್ತೆ ನಾನೆಂಬ ಭಾವವೇಕೆ ? ಕೊಟ್ಟ ನೀನಾಗಲಿ, ಪಡೆದವರಾಗಲಿ, ಕೊಟ್ಟದೇನೇ ಆಗಿರಲಿ ಎಲ್ಲವೂ ಇಲ್ಲಿ ನೆಪಮಾತ್ರ. ಕೊಟ್ಟ ಭಾವವೇ ಮುಖ್ಯ ಕಣಯ್ಯ ಗೆಳೆಯ . ಭಗವಂತ ನೋಡೋದು ಅದನ್ನೇ. ನೀ ಕೊಟ್ಟೆ , ಅದನ್ನು ನಿನಗೇ ಕೊಟ್ಟೆ ! ಕೆರೆಯ ನೀರನು ಕೆರೆಗೆ ಚಲ್ಲಿದೆ ಅಷ್ಟೆ ಎಂಬ ಭಾವದಲ್ಲಿ ನೀಡಿದರೆ ಅದು ದೈವ ಚಿತ್ತಕ್ಕೆ ತುಂಬಾ ಪ್ರಿಯ. ಅಷ್ಟಕ್ಕೂ ನಾ ತಂದಿರುವುದಾದರೂ ಏನು ? ಕೊಂಡೊಯ್ಯೋದಾದರೂ ಏನು ? ಅಲ್ವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021