ಓಡುತಿಹರಿಲ್ಲೆಲ್ಲರದಕಾನುಮೋಡುತಿಹೆ
ಓಡುತಿಹುದೇಕೆ ಮೇಣೆಲ್ಲಿಗೆಂದರಿಯೆ
ನೋಡಲಲ್ಲಿಯೆ ಇದ್ದೆ ಕಾಲ ನಿಲದೋಡಿತ್ತು
ಮೋಡಿಗೊಳಗಾದೇಕೊ ಜಾಣಮೂರ್ಖ //
ಈ ಜಗತ್ತಿನಲ್ಲಿ ಎಲ್ಲರೂ ಓಡುತ್ತಿದ್ದಾರೆ ! ಅದಕ್ಕೇ ಅವರ ಜೊತೆ ನಾನೂ ಸಹ ಓಡುತ್ತಿದ್ದೇನೆ. ಎಲ್ಲಿಗೆ ಅಂತ ಅವರಿಗೂ ಗೊತ್ತಿಲ್ಲ ! ಕ್ಷಮಿಸಿ , ನನಗೂ ಗೊತ್ತಿಲ್ಲ ! ಏನಾಶ್ಚರ್ಯ ಇಷ್ಟು ವರ್ಷಗಳು ನಿರಂತರ ಓಡಿದೇ…. ಓಡಿದೇ…. ಆದರೇನು !? ಇದ್ದಲ್ಲಿಯೇ ಇದ್ದೀನಿ !? ಮುಂದೆ ಹೋಗಿಯೇ ಇಲ್ಲ ! ಕಾಲ ಮಾತ್ರ ಬಹು ವೇಗದಲ್ಲಿ ಸಾಗಿಬಿಟ್ಟಿದೆ ! ನನ್ನ ಮನಸ್ಸೇ ನನ್ನನ್ನು ಕಂಡು ನಕ್ಕು ಹೇಳಿತು -“ಓ , ನೀನಿನ್ನೂ ಇಲ್ಲಿಯೇ ಇರುವೆಯಾ ! ಚಿಂತಿಸಬೇಡ. ಎಲ್ಲರ ಪಾಡೂ ಇದೇ ಆಗಿದೆ ! ಜಗದ ಮಾಯಾ ಮೋಡಿಗೆ ಒಳಗಾಗಿರುವವರೇ ಹೆಚ್ಚು ! ಅವರಲ್ಲಿ ನೀನೂ ಒಬ್ಬನಷ್ಟೆ. ಆದರೆ ಇನ್ನಾದರೂ ಎಚ್ಚೆತ್ತುಕೋ ! ಈ ಮೋಡಿಯ ಪೊರೆ ಸರಿಸು ! ಬಹಳಷ್ಟು ಮಂದಿ ಮುಂದೆ ಸಾಗಿರುವ ಜಾಡಿದೆ. ಆ ಜಾಡಿನಲ್ಲಿ ಸಾಗು ! ಗುರಿ ಮುಟ್ಟಬಹುದೆಂದು ! ಅಚ್ಚರಿಯೆನಿಸಿತು ! ಆದರೆ ಅದು ಸತ್ಯವೂ ಆಗಿತ್ತು !! ಹೌದು ಗೆಳೆಯರೇ, ಯಾರೋ ಕುಣಿಯುತ್ತಾರೆ ಅಂತ ನಾವು ಕುಣಿಯೋದು ಬೇಡ. ಸಾವಧಾನವಾಗಿ ಕುಳಿತು ಬದುಕಿನ ಗುರಿಯನ್ನು ಅರಿತು ಆಲೋಚಿಸಿ ಹೆಜ್ಜೆ ಇಡೋಣ. ಆಗ ಬದುಕು ಬಹು ಸುಂದರ ಮತ್ತೆ ಅರ್ಥಪೂರ್ಣ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021