ಬಿಸಿಲತೊರೆಯರಿವಂತೆ
ಬಂಧ ಬಿಗಿಗೊಂಡೊಡಾ
ಯ್ತಂತೆ ಹುರಿದಿಹ ಬಿತ್ತು
ಮೊಳೆಗೊಳ್ವುದೇನು ?
ಜ್ಞಾನಾಗ್ನಿಯೊಳು ಬೆಂದ
ಅಜ್ಞಾನಕಿಹುದೆ ಗತಿ !
ಅನುಭವಿಸು ಬೇಯೇಳು
ಜಾಣಮೂರ್ಖ //
ಬಿಸಿಲತೊರೆ ಎಂದರೆ ಮರೀಚಿಕೆ (ಬಿಸಿಲುಗುದುರೆ) ಎಂದರ್ಥ. ಅದನ್ನು ಅರ್ಥೈಸಿಕೊಂಡರೆ ಆಯ್ತು. ಮರೀಚಿಕೆಯ ಅರ್ಥ ‘ಸುಳ್ಳು’ ಎಂಬುದಷ್ಟೇ !. ಇದೆಲ್ಲದರ ಅರ್ಥ ತಿಳಿದು ಮಾಗಿದರೆ ಮುಗಿಯಿತು. ಮನಸ್ಸು ಪಕ್ವವಾದಂತೆ. ಹುರಿದ ಬಿತ್ತು ಹೇಗೆ ಮೊಳೆತು ಬೆಳೆಯುವುದಿಲ್ಲವೋ ಹಾಗೆ ನಮ್ಮ ಜ್ಞಾನಾಗ್ನಿಯಲ್ಲಿ ಬೆಂದ ಅಜ್ಞಾನಕ್ಕೆ ಮತ್ತೆ ಅಸ್ತಿತ್ವವಿದೆಯೇ ? ಆದ್ದರಿಂದ ಓ ಗೆಳೆಯ, ಬಂದದ್ದನ್ನು ಸ್ವೀಕಾರ ಮಾಡು. ಅನುಭವಿಸು. ಅನುಭವದ ಜ್ಞಾನದಿಂದ ಅನುಭಾವಿಯಾಗಯ್ಯ ! ಬದುಕಿನ ಸಂಕಷ್ಟಗಳಲ್ಲಿ ಬೇಯಬೇಕು. ಹೆದರಬಾರದು. ಈ ಕಷ್ಟಗಳೆಲ್ಲಾ ನಮ್ಮನ್ನು ಗಟ್ಟಿಗೊಳಿಸಲೆಂದೇ ಬರುತ್ತವೆ. ಬೆಂದ ಅರಿವಿನಿಂದ ಬಂದ ಅರಿವಿನ ಬಂಧ ಬಲವಾದದ್ದು . ಇಂತಹಾ ಜ್ಞಾನದ ಬಲದಿಂದ ಅಜ್ಞಾನದ ಕೇಡನ್ನು ಕಂಡು, ಉಂಡು ಮತ್ತು ಪಕ್ವಗೊಂಡು ಮೋಕ್ಷ ಪ್ರಾಪ್ತಿಯಾಗುತ್ತದೆ ಕಣಯ್ಯ ಗೆಳೆಯ. ಅದಕ್ಕೇ ದಾಸವರೇಣ್ಯರಾದ ಪುರಂದರ ದಾಸರು ” ಜ್ಞಾನವೊಂದೇ ಸಾಕು ಮುಕ್ತಿಗೆ , ಇನ್ನೇನು ಬೇಕೊ ಹುಚ್ಚು ಮಾನವನೇ” ಎಂದಿರುವುದು ಎಷ್ಟು ಅರ್ಥಪೂರ್ಣ ಅಲ್ಲವೇ ಗೆಳೆಯರೇ ?!
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021