ಮಣ್ಣಿನದೊ ಕಲ್ಲಿನದೊ
ಮೂರ್ತಿ ಎಂತಿರಲೇನು ?
ಮಳೆಯಾಗೆ ಮಣ್ಕರಗೆ
ಮಣ್ಣಲ್ಲಿ ಮಣ್ಣು !
ಕಾಲ ಸಲೆ ಕಲ್ಲಳಿವು
ದೆಂತ ವೈಚಿತ್ರ್ಯಮಿದು
ಆತ್ಮ ಭಕ್ತಿಯೆ ಚಿರವೊ
ಜಾಣಮೂರ್ಖ //
ಮೂರ್ತಿ ಪೂಜೆಯ ಮನಶ್ಶಾಸ್ತ್ರೀಯ ಹಿನ್ನೆಲೆಯನ್ನು ನಾವು ಬಲ್ಲೆವು. ಅದನ್ನು ಅಲ್ಲಗಳೆಯಲಾಗದು. ಆದರೆ ಸ್ವಲ್ಪ ವಸ್ತುನಿಷ್ಠವಾಗಿ ಚಿಂತಿಸೋಣ. ಪೂಜಿಸುವ ಮೂರ್ತಿ ಮಣ್ಣಿನದೋ, ಕಲ್ಲಿನದೋ ಎಂತಾದರೂ ಇರಲಿ. ಮನದ ಭಕ್ತಿ ಮುಖ್ಯವಷ್ಟೆ. ಮಳೆ ಜೋರಾಗಿ ಬಂದು ಮಣ್ಣ ಮೂರ್ತಿಯು ತೊಯ್ದರೆ ! ಮಣ್ಣು ಮಣ್ಣನ್ನೇ ಸೇರುತ್ತದೆ. ಮಣ್ಣಿನಿಂದ ಮೂಡಿದ ಭಾವ ಮಾತ್ರ ಶಾಶ್ವತವಾಗಿರುತ್ತದೆ ಅಲ್ಲವೆ !? ಕಲ್ಲಿನ ವಿಗ್ರಹವೇ ಆಗಲಿ ಕಾಲ ಕಳೆದಂತೆ ಕಲ್ಲೂ ಸಹ ಭಿನ್ನವಾಗುತ್ತದೆ. ಆಗ ಅದು ಕೇವಲ ಕಲ್ಲಷ್ಟೆ ! ಭಿನ್ನವಾದ ವಿಗ್ರಹಗಳನ್ನು ಪೂಜಿಸುವರೇನು !? ಎಲ್ಲವೂ ಅಳಿಯುವವು. ಆದರೆ ಆತ್ಮಭಕ್ತಿಯಂತೂ ಅಳಿಯದು. ಅದು ಆತ್ಮವಿರುವವರೆಗೂ ಚಿರವು ! ಶಾಶ್ವತವು ! ಈ ಸತ್ಯವನ್ನರಿವ ತಾಳ್ಮೆ ನಮ್ಮಲ್ಲಿ ಬರಬೇಕಿದೆಯಷ್ಟೆ. ಆತ್ಮಕ್ಕೆ ಅಳಿವೆಲ್ಲಿಯದು !? ಹರಿ ನಮ್ಮವ , ಹರ ನಿಮ್ಮವ ಎಂಬುದನ್ನು ಬದಿಗಿಟ್ಟು ಅಂತಹುದೊಂದು ಅಗಮ್ಯವೂ , ಅದಮ್ಯವೂ ಆದ ಚೈತನ್ಯಕ್ಕೆ ಮನದಲ್ಲೇ ಮಣಿದು ಶರಣಾಗಿ , ಒಂದಾಗಿಬಿಡಿ ಗೆಳೆಯರೇ ! ದೇವರಲ್ಲಿ ಭೇದವಾದರೂ ಏಕೆ !? ಮರಣದ ನಂತರದಲ್ಲಿ ಪಂಚಭೂತಗಳನ್ನು ಸೇರುವ ಈ ಶರೀರಕ್ಕೆ ಮರಣದ ಮುನ್ನವೇ ಆತ್ಮ ಮುಖೇನವಾಗಿ ಅಂತಹುದೊಂದು ಭಾವವನ್ನು ತಳೆದು ಸಂತೋಷಿಸುವುದಿದೆಯಲ್ಲಾ ! ಅದೆಂತಹಾ ಅದ್ಭುತ ಅನುಭವ ಗೊತ್ತೆ !
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021