Write to us : Contact.kshana@gmail.com

ಜೋಕುಲಸರ್ಲೊನ್ ಹಿಮಗೆಡ್ಡೆಗಳ ಸರೋವರ (ಐಸ್ಲ್ಯಾಂಡ್ )

5
(1)

೨೫ ಅಕ್ಟೋಬರ್ ೨೦೧೭, ಇಂದು ಬೆಳಿಗ್ಗೆ “ಕಟ್ಲಾ ಹೊಫ್ಡಬ್ರೆಕ್ಕ” ಹೋಟೆಲಿನಲ್ಲಿ ತಿಂಡಿ ತಿಂದು ಜೋಕುಲ್ಸರ್ಲೊನ್ ಗೆ ನಮ್ಮ ಪ್ರಯಾಣವನ್ನು ಮುಂದುವರೆಸಿದೆವು. ಐಸ್ಲ್ಯಾಂಡಿನ ದಕ್ಷಿಣ ತೀರದ ಹೈ ವೇ ಯಲ್ಲಿ ಮುಂದೆ ಹೋದಂತೂ ಬೆಟ್ಟಗಳು ಕಡಿಮೆಯಾಗಿ, ಸಮತಟ್ಟಾದ ಜ್ವಾಲಾಮುಖಿಯ ಲಾವಾರಸ ತಣಿದು ಒಣಗಿದ ಕಲ್ಲು ಬಂಡೆಗಳ ಬರಡು ಭೂಮಿ ಐಸ್ಲ್ಯಾಂಡಿನ ಇನ್ನೊಂದು ಭೀಕರ ಸ್ವರೂಪವನ್ನು ಪ್ರತಿಬಿಂಬಿಸುತಿತ್ತು. ಒಣಗಿದ ಲಾವಾ ಕಲ್ಲು ಬಂಡೆಗಳ ಮೇಲೆ ಬೆಳೆದ ಸಗಣಿ ಬಣ್ಣದ ಪಾಚಿ, ದೊಡ್ಡದೊಂದು ಹಾವು ಹಸಿರು ಬಣ್ಣದ ಪೊರೆ ಬಿಟ್ಟು ಭೂಮಿಯ ಮೇಲೆ ಹಾಸಿದೆಯೇನೋ ಎನ್ನಿಸುತ್ತಿತ್ತು. ಮನುಷ್ಯರ ವಾಸ್ತವ್ಯದ ಸೂಚನೆಯೇ ಇರಲಿಲ್ಲ. ಮಧ್ಯೆ ಮಧ್ಯೆ ಆಗಾಗ ಒಂದೋ ಎರಡೂ ಕಾರು, ಲಾರಿಗಳು ಹಾದುಹೋಗುವುದನ್ನು ಬಿಟ್ಟರೆ, ಬೇರೆ ವಾಹನಗಳೂ ಇರಲಿಲ್ಲ. ಕಣ್ಣು ಹಾಯಿಸಿದಷ್ಟು ದೂರವೂ ಬರಡು ಭೂಮಿ. ಮಧ್ಯ ಕಪ್ಪು ರಸ್ತೆ. ಒಮ್ಮೊಮ್ಮೆ ಭೀಕರ ಎನಿಸಿದರೂ, ಆ ಭೀಕರತೆಯಲ್ಲಿಯೂ ದೈವತ್ವ ಕಾಣಿಸುತ್ತಿತ್ತು. ಕಣ್ಣಿಗೆ ಕಂಡಿದ್ದನ್ನು ಶಬ್ಧಗಳಲ್ಲಿ ವಿವರಿಸಲೂ ಸಾಧ್ಯವಿಲ್ಲ. ಫೋಟೋಗಳೂ ಕೂಡ ಆ ಭೀಕರತೆಯನ್ನು ಪ್ರತಿಬಿಂಭಿಸಲಾರವು.

ಕಿರ್ಕ್ಜುಬೇಜಾರ್ಕ್ಳಸ್ತೂರ್ ಎಂಬ ಹೆಸರು ಹೇಳಲೂ ಬಾರದ ಹಳ್ಳಿಯೊಂದರ ಹತ್ತಿರ ಹಲವಾರು ಕೃಷಿ ಕ್ಷೇತ್ರಗಳನ್ನು ನೋಡಿದೆವು. ನಾವು ಅಂದು ರಾತ್ರಿ ಉಳಿಯುವ ಪ್ಲಾನ್ ಮಾಡಿದ್ದ ಫಾಸ್ ಹೋಟೆಲ್ ಗ್ಲೇಸಿಯರ್ ಲಗೂನ್ ಇಲ್ಲೇ ಹತ್ತಿರದಲ್ಲೆಲ್ಲೂ ಇತ್ತು. ಆದರೆ ನಾವು ಮೊದಲು ಜೋಕುಲಸರ್ಲೊನ್ ಹೋಗಿ ವಾಪಸು ಬರುವಾಗ ಹೋಟೆಲಿಗೆ ಚೆಕ್ ಇನ್ ಮಾಡುವುದು ಎಂದು ನಿರ್ಧರಿಸಿದ್ದೆವು.

 

ಜೋಕುಲಸರ್ಲೊನ್ ಹತ್ತಿರ ಬಂದಂತೆ ಹಿಮಪರ್ವತಗಳು ಕಾಣತೊಡಗಿದವು.

ಜೋಕುಲಸರ್ಲೊನ್ ಸೇರುವಾಗ ಬೆಳಿಗ್ಗೆ ೧೧ ಗಂಟೆ. ಮೊದಲಿಗೇ ಆಂಫಿಬಿಯನ್ ಬೋಟ್ ರೈಡ್ ಮಾಡುವುದೆಂದು ನಿರ್ಧರಿಸಿದೆವು. ಚಕ್ರಗಳಿರುವ ಬೋಟ್ ನೆಲದ ಮೇಲೆ ಬಂದಾಗ ಚಕ್ರಗಳಿಂದ ಚಲಿಸುತ್ತದೆ. ನೀರಿಗೆ ಇಳಿದ ಮೇಲೆ ಬೋಟ್ ರೀತಿಯಲ್ಲಿ ತೇಲುತ್ತದೆ. ಅದಕ್ಕಾಗಿಯೇ ಆಂಫಿಬಿಯನ್ ಬೋಟ್ ಎಂದು ಹೆಸರು.

ಟಿಕೆಟುಗಳನ್ನು ಕೊಂಡುಕೊಂಡು ೧೨ ಗಂಟೆಯ ಟ್ರಿಪ್ಪಿಗೆ ಕಾದು ನಿಂತೆವು. ಹವಾಮಾನ ಚೆನ್ನಾಗಿತ್ತು. ಕೇಸರಿ ಬಣ್ಣದ ಸೇಫ್ಟಿ ಫ್ಲೋಟಿಂಗ್ ಜಾಕೆಟ್ಸ್ಗಳನ್ನು ವಿತರಿಸಿದರು. ಬೋಟಿನೊಳಗೆ ಹೋಗಿ ಕೂರಲು ಸ್ಥಳ ಮಾಡಿಕೊಂಡು ಕುಳಿತೆವು. ನೀರಿನಲ್ಲಿ ತೇಲುವ ಬೋಟಿನಷ್ಟೇ ದೊಡ್ಡದಾಗಿ, ಅಥವಾ ಅದಕ್ಕಿಂತ ದೊಡ್ಡದಾದ ಹಿಮಗೆಡ್ಡೆಗಳ ನಡುವೆ ಬೋಟಿನಲ್ಲಿ ಕರೆದೊಯ್ಯುತ್ತಾರೆ. ನೀರಿನ ಮೇಲೆ ಕಾಣುವುದು ಬರೀ ೨೫%. ಹಿಮಗೆಡ್ಡೆಗಳು ನೀರಿನ  ಒಳಗೆ ೭೫% ಮುಳುಗಿರುತ್ತವೆ ಎಂದು ಟೂರಿಸ್ಟ್ ಗೈಡ್ ವಿವರಿಸಿದಾಗ ನಮ್ಮ ಕಣ್ಣೆದುರು ಕಾಣುತ್ತಿರುವುದೇ ಅಷ್ಟು ದೊಡ್ಡದಾಗಿದ್ದರೆ, ನೀರಿನ ಒಳಗೆ ಇನ್ನೆಷ್ಟು ದೊಡ್ಡದಿರಬಹುದು ಎಂದು ಊಹಿಸಿಕೊಂಡು ಆಶ್ಚರ್ಯವಾಯಿತು.

 

ಒಂದು ಹಿಮಗೆಡ್ಡೆ ತಲೆಕೆಳಗಾಗಿ ನೀಲಿ ಬಣ್ಣದ ಗಾಜನ್ನು ಯಾರೋ ಕೊರೆದು ಶಿಲ್ಪವನ್ನಾಗಿ ಮಾಡಿದ್ದಾರೆ ಎನ್ನಿಸುವಂತೆ ಕಾಣುತ್ತಿತ್ತು. ಉಳಿದವಕ್ಕೆ ಹೋಲಿಸಿದರೆ ಇದರ ನೀಲಿ ಬಣ್ಣ ಗಾಢವಾಗಿತ್ತು. ಆಕ್ಸಿಜನ್ ಜೊತೆ ಸೇರಿದಾಗ, ಬಿಳಿಯಾದ ಹಿಮ ನೀಲಿಯಾಗಿ ಬದಲಾಗುತ್ತದೆ ಎಂದು ಟೂರಿಸ್ಟ್ ಗೈಡ್ ವಿವರಿಸುತ್ತಿದ್ದ.

ಜೋಕುಲ್ಸರ್ಲೊನ್ ಬೋಟ್ ಟ್ರಿಪ್ ಮುಗಿಸಿ ಸರೋವರದ ಇನ್ನೊಂದು ಬದಿಯಲ್ಲಿ, ಸಮುದ್ರ ತೀರದಲ್ಲಿ ಇರುವ ಡೈಮಂಡ್ ಬೀಚಿಗೆ ಹೋದೆವು.

ಈ ಬಾರಿಯ ಐಸ್ಲ್ಯಾಂಡ್ ಟ್ರಿಪ್ಪಿನಲ್ಲಿ ಅತೀ ವಿಶೇಷವಾಗಿ ಕಂಡಿದ್ದು ಈ ಡೈಮಂಡ್ ಬೀಚ್. ಜೋಕುಲ್ ಸರ್ಲೊನ್ ಸರೋವರದಲ್ಲಿ ಕರಗಿ ಚಿಕ್ಕದಾದ ಹಿಮ ಗೆಡ್ಡೆಗಳು ನೀರಿನಲ್ಲಿ ತೇಲಿಕೊಂಡು ಸಮುದ್ರ ಸೇರಿದಾಗ, ಸಮುದ್ರದ ಅಲೆಗಳು ಆ ಚಿಕ್ಕ ಚಿಕ್ಕ ಹಿಮಗೆಡ್ಡೆಗಳನ್ನು ತೀರದಲ್ಲಿ ತಂದು ದೂಡುತ್ತವೆ. ಕಪ್ಪು ಮರಳಿನ ಸಮುದ್ರ ತೀರದಲ್ಲಿ ಗಾಜಿನಂತೆ ಕಾಣುವ ವಿಧ ವಿಧವಾದ ಆಕೃತಿಯಲ್ಲಿರುವ ಹಿಮಗೆಡ್ಡೆಗಳು ವಜ್ರದಂತೆ ಕಾಣುವುದು ಸಹಜವೇ. ಅದಕ್ಕೇ ಡೈಮಂಡ್ ಬೀಚ್ ಎಂದು ಹೆಸರು. ಚಿಕ್ಕ ಗೆಡ್ಡೆಗಳನ್ನು ಕೈಯಲ್ಲಿ ಎತ್ತಿ, ರುಚಿ ನೋಡಿದ್ದೂ ಆಯಿತು.

 

ಹಲವಾರು ಜನರು ಫೋಟೋಗ್ರಾಫರ್ಸ್ ಅಲ್ಲಲ್ಲಿ ಕುಳಿತು ಫೋಟೋ ತೆಗೆಯುವ ಪ್ರಯತ್ನ ಮಾಡುತ್ತಿದ್ದರು. ಒಬ್ಬಳು ಲೇಡಿ ಫೋಟೋಗ್ರಾಫರ್ ನೆಲದ ಮೇಲೆ ಮಲಗಿಕೊಂಡು ಅಲೆಗಳ ಫೋಟೋ ತೆಗೆಯುವ ಪ್ರಯತ್ನ ಮಾಡುವಾಗ ಜೋರಾಗಿ ಬಂದ ಅಲೆಯಲ್ಲಿ ಅವಳೂ ಸಂಪೂರ್ಣ ನೀರಿನಡಿಯಲ್ಲಿ ಇದ್ದರೂ, ಆಕೆಯ ಕೈ ಕ್ಯಾಮೆರಾವನ್ನು ಎತ್ತಿ ಹಿಡಿದು ರಕ್ಷಿಸುವ ಪ್ರಯತ್ನ ಮಾಡುತ್ತಿತ್ತು. ಜೊತೆಯಲ್ಲಿದ್ದ ಫೋಟೋಗ್ರಾಫರ್ ಆಕೆಯನ್ನು ಮೇಲೆತ್ತುವ ಪ್ರಯತ್ನ ಮಾಡದೇ , ಆಕೆಯ ಕ್ಯಾಮೆರಾ ಬ್ಯಾಗ್ ತೆಗೆದುಕೊಂಡು ತೆರೆಯಿಂದ ದೂರ ಓಡುತ್ತಿದ್ದ. ನನ್ನ ಬಳಿ ಸ್ಲೋ ಶಟರ್ ಜೊತೆಗೆ ಫೋಟೋ ತೆಗೆಯಲು ಅನುಕೂಲವಾಗುವ ಸಲಕರಣೆಗಳಿದ್ದರೆ, ನಾನೂ ಅವರಲ್ಲಿ ಒಬ್ಬಳಾಗಿರುತ್ತಿದ್ದೆ ಎಂದು ಯೋಚಿಸಿ ನಗು ಬರುತ್ತಿತ್ತು.

 

ನಾವು ಆಲ್ಮೋಸ್ಟ್ ೩-೪ ಗಂಟೆಗಳ ಕಾಲ ಬೀಚಿನಲ್ಲಿ ಒಂದೊಂದೇ ಹಿಮಗೆಡ್ಡೆಗಳನ್ನು ನೋಡುತ್ತಾ, ಅವುಗಳ ಸೌಂದರ್ಯವನ್ನು ಸವಿಯುತ್ತಾ ಓಡಾಡುತ್ತಿದ್ದೆವು.

 

ಜೋಕುಲ್ ಸರ್ಲೊನ್ ಪಕ್ಕದಲ್ಲಿಯೇ ಇರುವ ಫ್ಜಲ್ ಸರ್ಲೊನ್ ಎನ್ನುವ ಇನ್ನೊಂದು ಸರೋವರವನ್ನು ನೋಡಿ ವಾಪಸು ಹೋಗುವ ಪ್ಲಾನ್ ಮಾಡಿದ್ದೆವು. ಆ ಸರೋವರ ಜೋಕುಲ್ಸರ್ಲೊನ್ ನಿಂದ ೧೦ ಕಿಲೋಮೀಟರು ದೂರದಲ್ಲಿ ಇತ್ತು.
ಅಲ್ಲಿ ಹೋಗಿ ತಲುಪುವಾಗ ಚಳಿಯಲ್ಲಿ ನೆಡೆದಾಡಿ ಎಷ್ಟು ಸುಸ್ತಾಗಿತ್ತು ಎಂದರೆ, ಸರೋವರದ ಹತ್ತಿರ ಹೋಗಲು ಮನಸ್ಸಾಗದೆ ದೂರದಿಂದಲೇ ಫೋಟೋ ತೆಗೆದುಕೊಂಡು ವಾಪಸು ಹೊರಟೆವು.

ಸರೋವರದ ನೀರು ನದಿಯಾಗಿ ಸಮುದ್ರ ಸೇರುತ್ತಿತ್ತು. ಆ ನದಿಯಲ್ಲಿ ಕರಗುತ್ತಾ ತೇಲುವ ಹಿಮಗೆಡ್ಡೆಗಳು ನೋಡಲು ಸುಂದರವಾಗಿದ್ದರೂ, ನೀರಿನ ಬಣ್ಣ , ಆ ನೋಟ ಭಯ ಹುಟ್ಟಿಸುವಂತಿತ್ತು.

How do you like this post?

Click on a star to rate it!

Average rating 5 / 5. Vote count: 1

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಅಶ್ವಿನಿ ಕೋಟೇಶ್ವರ

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಬಾಳ ಬಾಧೆಯ ಮೂಲ