Write to us : Contact.kshana@gmail.com

ಆಂಗ್ಲಭೂತ (1)

0
(0)

ಅಜಾತಶತ್ರುಗಳಂತಿದ್ದ ನಮಗೆ ಅದಾವ ಕರ್ಮವೋ ಗ್ರಹಗತಿಯೋ ನಮ್ಮಿಡೀ ಜನ್ಮಕ್ಕೆ ಕುಲಕಂಟಿದ ಶಾಪವಾಗಿ ವಕ್ಕರಿಸಿದ ಶತ್ರು ಇಂಗ್ಲೀಷ್! ಇದೊಂಥರ ಗಂಡುಜಾತಿಯ ಶತ್ರುತ್ವ, ನಿಜಕ್ಕೂ ಇದು ಹೆಣ್ಣುಜಾತಿಯದ್ದಾಗಿದ್ದರೆ ಚೂರು ಪೀಡಿಸುತಿತ್ತೇ ಹೊರತು ಈ ಪರಿ ದ್ವೇಷಿಸುತ್ತಿರಲಿಲ್ಲ. ಇದರ ಮಧ್ಯೆ ನಮ್ಮಂಥಹ ಬಡಪಾಯಿ ಜೀವಗಳನ್ನು ವಿಶೇಷ ಕಕ್ಕುಲತೆಯಿಂದ ಎತ್ತಿಕೊಂಡದ್ದು ತಾಯಿ ಕನ್ನಡತಿ. ಹೀಗಾಗಿ ಇವಳ ಮೇಲೆ ವಿಶೇಷ ಪ್ರೀತಿ ಅಭಿಮಾನ ನಮಗೆ. ಅದಾವ ಪರಿಯೆಂದರೆ ಇಂಗ್ಲೀಷ್ ಆಂಟಿಯೇನಾದರೂ ಎದುರಾದರೆ ಸಾಕು ನಮ್ಮವ್ವ ಕನ್ನಡತಿಯ ಸೀರೆ ಸೆರಗಿನಲ್ಲಿ ಅವಿತುಕೊಂಡು ಬಿಡುತಿದ್ದೆವು. ಕಾರಣಗಳು ಸಾವಿರಾರು!!

ಇವತ್ತಿನ ಈ ಕ್ಷಣದವರೆಗೆ ನನಗೆ ಒಂಚೂರು ಹಿಂಜರಿಕೆ, ಅಸಹಾಯಕತೆ, ಖಿನ್ನತೆ, ಬೇಸರಗಳಿದ್ದರೆ ಅದಕ್ಕೆ ಕಾರಣಗಳು ಎರಡೇ ಎರಡು! ಅದರಲ್ಲೊಂದು ಈ ಇಂಗ್ಲೀಷು!! ಒಂದರಿಂದ ನಾಲ್ಕನೆಯ ತರಗತಿಯವರೆಗೆ ನಮಗಿದ್ದದ್ದು ಒಂದೋ ಎರಡೋ ಪುಸ್ತಕ. ಕನ್ನಡ ಕಸ್ತೂರಿಯೆಂಬುದೊಂದು ನೆನಪಿದೆ. ಇನ್ನೊಂದು ಗಣಿತವೇ ಇರಬೇಕು. ಎಂಬತ್ತು ಪೈಸೆ, ನಲವತ್ತು ಪೈಸೆಗೊಂದರಂತೆ ಅವುಗಳನ್ನು ಹೊನ್ನಾಳಿಯಿಂದ ಕೊಂಡುತರುತಿದ್ದಳು ನಮ್ಮವ್ವ. ಹೊಸಪುಸ್ತಕ ತರುವುದನ್ನೇ ಕಾಯುತಿದ್ದ ನಮಗೆ ಅವು ನಮ್ಮ ಕೈಗೆ ಸೇರಿದ ದಿನವಂತೂ ಹಬ್ಬವೋ ಹಬ್ಬ! ಪ್ರಮುಖವಾಗಿ ಮೂಗಿಗೆ!! ಪುಟಪುಟಗಳನ್ನೂ ತೆರೆದು ಮೂಸುತಿದ್ದ ನಮಗೆ ಮೊದಲ ಮಳೆಯ ಮಣ್ಣಿನ ಘಮದಂತೆ ಅಪ್ಯಾಯಮಾನವಾಗುತಿತ್ತು ಅದರ ಪರಿಮಳ. ಈಗಿನ ಪುಸ್ತಕಗಳ ವಾಸನೆಯಂತೂ ಕಿತ್ತೋದ ಸೀಮೆಎಣ್ಣೆಯಂತಿರುತ್ತದೆ. ಸಾಮಾನ್ಯವಾಗಿ ಗಣಿತಕ್ಕಿಂತ ಕನ್ನಡ ಪುಸ್ತಕವೇ ಹೆಚ್ಚು ಇಷ್ಟವಾಗುತಿತ್ತು. ಕಾರಣವೆಂದರೆ ಅದರಲ್ಲೆರಡು ಚಿತ್ರಗಳಾದರೂ ಇರುತಿದ್ದವು. ಈ ಗಣಿತದಲ್ಲೇನಿರುತಿತ್ತು ಲೊಳಲೊಟ್ಟೆ. ಎಲ್ಲಾದರು ಒಂದು ಚಿತ್ರವಿದ್ದರೂ ನಮ್ಮಿಷ್ಟದಂತೆ ನೋಡಲು ಅವಕಾಶವೇ ಇರುತ್ತಿರಲಿಲ್ಲ. ಎಷ್ಟು ಪಕ್ಷಿಗಳು ಹಾರುತ್ತಿವೆ? ಎಷ್ಟು ಮನೆಗಳಿವೆ? ಎಷ್ಟು ಮರಗಳಿವೆ? ಎಷ್ಟು ಹಂದಿ ಕೋತಿ ನಾಯಿ … ಬರೀ ಎಣಿಸೋದೇ ಪಜೀತಿ. ಆ ಪಕ್ಷಿ ಗೂಡೆಲ್ಲಿದೆ… ಮನೆಯೊಳಗೆ ಯಾರಿರಬಹುದು… ಇದು ಯಾವ ಮರ… ಹಣ್ಣು ಬಿಟ್ಟಿದೆಯೇ….ಇಂಥಹ ನಮ್ಮ ಹುಡುಕಾಟಗಳಿಗೆ ಅವಕಾಶವೇ ಆಗದೆ… ಬೆರಳು ಮಡಿಚಿ ತೆಗೆದು ಮತ್ತೆ ಮಡಚಿ ತೆಗೆದು…. ಥೋssss
‘ಅಣ್ಣನು ಮಾಡಿದ ಗಾಳಿಪಟ
ಚೆಂದದ ಹಾಳೆಯ ಗಾಳಿಪಟ
ದಾರವ ಜಗ್ಗಿ ದೂರದಿ ಬಗ್ಗಿ
………………………………….
ಬಾಲಂಗೋಚಿಯ ನನ್ನ ಪಟ’
ನಮ್ಮೀ ಮೊದಲ ಪದ್ಯವಂತೂ ಯಾವ ಮಧ್ಯರಾತ್ರಿ ಒದ್ದು ಎಬ್ರಿಸಿ ಕೇಳಿದರೂ ಚಿತ್ರಸಮೇತ ‘ಹೇಳಿಬಿಡುತ್ತೇವೆ’! ಹಂಗೆ ಪ್ರಿಂಟಾಗಿದೆ ಮನದೊಳಗೆ! ಇಂಥ ಪದ್ಯಗಳಿಂದ ನಮ್ಮ ಕಲ್ಪನೆಯು ಕಟ್ಟೆಯೊಡೆದು ಹಾರುತ್ತಿತ್ತು. ‘ನಮ್ಮ ಮನೆ’ ‘ವಾಸನೆಯ ಬೆಲೆ’ ಇಂಥವೆಷ್ಟೋ ಕತೆಗಳು ಈಗಲೂ ನೆನಪಾಗುತಿರುತ್ತವೆ. ಸುಪ್ತಮನದಲಿ ಗೊರಕೆ ಹೊಡೆಯುತ್ತಿವೆಯಷ್ಟೆ. ನಾಲ್ಕನೆಯ ತರಗತಿ ಪಾಸಾದರೆ ಸಾಕು ನಮ್ಮೆದೆ ಢವssssಢವssss ಎನ್ನುತಿತ್ತು. ಐದರ ಕೋಣೆಯೊಳಗೆ ಇಂಗ್ಲೀಷೆಂಬ ಭೂತ ನಮಗಾಗಿಯೇ ಹೊಂಚುಹಾಕಿ ಕೂತಿದೆಯೆನಿಸಿತಿತ್ತು. ಒಂಚೂರು ಧೈರ್ಯಕ್ಕಿರಲಿಯೆಂದು ಮಗ್ಗಿಪುಸ್ತಕ ನೋಡಿ ನೋಡಿ a ಯಿಂದ z ವರೆಗೂ ಹಂಗೂssಹಿಂಗೂss ಉರು ಹೊಡೆದಿರುತಿದ್ದೆವು.
ಐದನೆಯ ತರಗತಿ ಆರಂಭದಲ್ಲಂತೂ ನಮಗೆ ಇಂಗ್ಲೀಷಿಗಿಂತ ಅದನ್ನು ಬಿಟ್ಟುಹೋದ ಬ್ರಿಟಿಷರ ಪರಿಚಯವೇ ಹೆಚ್ಚಾಗಿತ್ತು. ಇಂಗ್ಲೀಷ್ ಮಾಸ್ತರರೆಂದರೆ ಹಂಗಿತ್ತು ಭಯ. ಚಮ್ಡ ಸುಲಿದು ಹೋಗುವಂತೆ ಅವರು ಬಾರಿಸುತಿದ್ದ ಪರಿಗೆ ನಮ್ಮ ಸ್ವಾತಂತ್ರ್ಯವೆಲ್ಲ ಹರಿದು ಧೂಳೀಪಟವಾಗಿತ್ತು. ಇದರಿಂದ ಬಿಡುಗಡೆ ಯಾವಾಗ ಎಂದು ಕತ್ತೆತ್ತಿ ನೋಡಿದೆಯೋ ಅದೆಷ್ಟು ಉದ್ದನೆಯ ಏಣಿಯದು… ನೇರ ನರಕಕ್ಕೇ ದಾರಿ ತೋರಿಸುತ್ತಿದೆ… ನಾವಿನ್ನು ಐದರ ಬುಡದಲ್ಲಿದ್ದೇವೆ. ಹೆಂಗೋ ಕಣ್ಮುಚ್ಚಿಕೊಂಡು ಜೈ ಎನಿಸಿ ಬಿಡೋಣವೆಂದುಕೊಂಡೆವಷ್ಟೆ. ಇಂಗ್ಲೀಷ್ ಪುಸ್ತಕಗಳಲ್ಲಿ ಬರೆದದ್ದಕ್ಕಿಂತ ಇದ್ದಬದ್ದ ಚಿತ್ರಗಳನ್ನೆಲ್ಲ ತಿದ್ದಿದ್ದೇ ಹೆಚ್ಚು!
ಆರನೆಯ ತರಗತಿಗೆ ಬರುವಷ್ಟರಲ್ಲಿ ನಮ್ಮೊಳಗಿನ ಸ್ವಾತಂತ್ರ್ಯ ಹೋರಾಟಗಾರ ದೀನತೆಯನ್ನು ತೊರೆದು ತೋರಿಕೆಗಾದರೂ ತಿರುಗಾಡಬೇಕೆಂದು ಬಯಸಿ ಸ್ವಲ್ಪ ಓಡಾಡತೊಡಗಿದ. ಮೂರು ಕಿಮೀ ದೂರದ ಹರಳಹಳ್ಳಿಯಿಂದ ಸೈಕಲ್’ನಲ್ಲಿ ಬರುತಿದ್ದ ಬಸವಣ್ಯಪ್ಪರೆಂಬ  ಮಾಸ್ತರರು ನಮಗಾಗ ಆರಕ್ಕೆ ಇಂಗ್ಲೀಷ್  ಮಾಷ್ಟ್ರು. ನನ್ನ ಅಂದಿನ ಆಪ್ತಮಿತ್ರ ಗಣಪತಿಯ ಸಹಕಾರದಿಂದ ಉರು ಹೊಡೆದು ಹೊಡೆದುss ಕಲಿತಿದ್ದ ಇಂಗ್ಲೀಷ ಮೊದಲ ಪಾಠವನ್ನು ಪಟಪಟನೇ ಓದಿ ‘ಭೇಷ್’ ಎನಿಸಿಕೊಂಡಿದ್ದೆ. ಅವರು ಬೆನ್ನು ಸವರಿದ ಗುರುತು, good ಎಂಬ ಪ್ರಶಂಸೆ ಈಗಲೂ ಅಚ್ಚಳಿಯದೆ ಉಳಿದಿದೆ. ಆದರೆ ಇದು ಒಂದೆರೆಡು ಕಂಠಪಾಠಗಳಿಂದ ಆಗುವ ಮಾತೇ? ಮತ್ತೂ ನಮ್ಮದು ಇಂಗ್ಲೀಷ್ ಪರೀಕ್ಷೆಗಳನ್ನು ಕಾಪಿ ಮಾಡಿಯೇ ಪಾಸ್ ಮಾಡಬೇಕಾದ ದುಃಸ್ಥಿತಿ ಬಂದಿತು. ಇಂಗ್ಲೀಷ್ ಪರೀಕ್ಷೆಗಳಲ್ಲಿ ಹೊಂದಿಸಿ ಬರೆಯಿರಿ, ಸೂಕ್ತಪದ ಆಯ್ದು ಬರೆಯಿರಿ ಇಂಥ ಕೆಲಪ್ರಶ್ನೆಗಳಿಗೆ ಪ್ರಾಮಾಣಿಕ ಪ್ರಯತ್ನ ಹಾಕುತಿದ್ದೆವಾದರೂ ಉಳಿದೆಲ್ಲವನ್ನು ಆ ದೇವರೇ ಕಾಪಾಡಬೇಕಿತ್ತು. ವಾಕ್ಯದ ಉತ್ತರ ಬಯಸುವ ಪ್ರಶ್ನೆಗಳಿಗಂತೂ Ans: ಎಂದು ಬರೆದು ಪ್ರಶ್ನೆಯಲ್ಲಿರುವ ಪ್ರಶ್ನಾರ್ಥಕ ಚಿಹ್ನೆ ಹಾಗೂ ಪ್ರಶ್ನಿಸುವ ಪದ(what who when….etc) ತೆಗೆದು ಬರೆದರೆ ಅಲ್ಲಿಗೆ ಕೃಷ್ಣಾರ್ಪಣಮಸ್ತು!! ನಮಗೆ ಹೆಚ್ಚು ಖುಷಿಕೊಡುತಿದ್ದದ್ದು passage! ಕಾರಣವಿಷ್ಟೆ… ಇದಕ್ಕೆ ಉತ್ತರ ಬರೆಯುವುದಂತೂ ಅತ್ಯಂತ ಸುಲಭ. ಪ್ರಶ್ನೆಯಲ್ಲಿರುವ ಪದಗಳು ಆ passageನಲ್ಲಿ ಎಲ್ಲಿರುತ್ತವೋ ಅದೇ ವಾಕ್ಯ ಅದಕ್ಕೆ ಉತ್ತರವಾಗುತಿತ್ತು. ಇನ್ನು ನಮ್ಮಿಡೀ ವಿದ್ಯಾರ್ಥಿ ಜೀವನವನ್ನೇ ಮುಡುಪಾಗಿಟ್ಟು ಉರು ಹೊಡೆದೂ ಹೊಡೆದೂ ನೆನಪಿಟ್ಟ ಕೋಟ್ಯಂತರ opposites, genders ವಗೈರೆ ವ್ಯಾಕರಣಾಂಶ ಸಹಿತ ಯಾವೊಂದು ಉಪಯೋಗಕ್ಕೆ ಬರಲಿಲ್ಲ. ನಮ್ಮ ಇಂಗ್ಲೀಷ್ ಮಹಾಸಾಗರ🤣ವನ್ನು ಬಿಟ್ಟು ಯಾವುದೋ ಪುಟ್ಟದ್ವೀಪದ ಬಗ್ಗೆ ಪ್ರಶ್ನೆಗಳಿರುತ್ತಿದ್ದವು.
ಈ ಇಂಗ್ಲೀಷ್ ಮನೆ ಹಾಳಾಗೋಗ್ಲಿ ಎಂದು ನಾವು ಹಿಡಿಶಾಪ ಹಾಕುತಿದ್ದಾಗಲೇ ನಮ್ಮೂರಲ್ಲೊಬ್ಬ ವಿಚಿತ್ರವ್ಯಕ್ತಿ ನಮಗೆ ಪರಿಚಿತನಾದ. ಅವನ ಕತೆ ಏನು ಕೇಳುತ್ತೀರಿ…. ಎಲ್ಲೆಂದರಲ್ಲಿ ತಿರುಗಾಡುವ…. ಸಿಕ್ಕಸಿಕ್ಕಲ್ಲೇ ಕೂರುವ… ಚಿಂದಿಚಿತ್ರಾನ್ನವಾದ ಬಟ್ಟೆ ತೊಡುವ…ಮಾಸಲು ದೇಹ… ಇಳಿಬಿದ್ದ ಕೂದಲೊಳಗಿಂದ ವಕ್ರನೋಟ… ಇವನು ಯಾಕೆ ಹೀಗಾದ?
‘ಭಾರೀ ಓದುತಿದ್ದನಂತೆ ಅದಕೆ ಹಿಂಗಾದ!’
 ‘ಇವನಿಗೆ ಇಂಗ್ಲೀಷ್ ಗೊತ್ತು ಅದಕೇ ಹಿಂಗಾದ!!’
 ‘ತುಂಬಾ ಓದಿದರೆ ನಮ್ಗೂ ಇದೇ ಗತಿ!!!’ ನಮ್ಮ ಪಡ್ಡೆಹೈಕಳಲ್ಲಿ ಒಬ್ಬೊಬ್ಬರದೊಂದು ತೀರ್ಮಾನ…..ತೀರ್ಪು….!! ಅವನ ಹತ್ತಿರ ಹೋಗಲಿಕ್ಕೆ ಒಂಥರಾ ಭಯ… ಆದರೆ ಅಂದಿನ ಕುಣಿಯುವ ಕಿತಾಪತಿ ಮನಸ್ಸು ಬಿಡಬೇಕಲ್ಲ….?
ಆತನ ಹೆಸರು ‘ಶೇಷಗಿರಿಯಪ್ಪ’ ಅಕ್ಸಾಲೇರಾ ಶೇಷ್ಗಿರಿಯಪ್ಪ…. ಅದೆಷ್ಟೇ ಬಿಡಿಸಿಕೊಂಡರು ಈತನೆಡೆಗೆ ನಮಗೆ ಎಲ್ಲಿಲ್ಲದ ಆಕರ್ಷಣೆ….! ಒಂದೇ ಒಂದು ಕೋರೆಬೀಡಿ ಕೊಟ್ಟರೆ ಸಾಕು!!! ಇವನು ಏನು ಬೇಕಾದರೂ ಮಾಡುತಿದ್ದ…. ಏನನ್ನು ಬೇಕಾದರೂ ತೋರಿಸುತಿದ್ದ….!!! ಅವರವರ ಆಸಕ್ತಿಗೆ ಅನುಗುಣವಾಗಿ ಕೋರೆಬೀಡಿ ಕೊಟ್ಟು ಹುಡುಗರು ತಮ್ಮ ಚಪಲ ತೀರಿಸಿಕೊಳ್ಳುತಿದ್ದರು. ಕೋರೆಬೀಡಿಯೆಂದರೆ ಜನಗಳು ಸೇದಿ ಎಸೆದ ಬೀಡಿ ತುಣುಕು!! ನಮಗೆ ಮಾತ್ರ ಇವನಿಂದ ಇಂಗ್ಲೀಷ್ ಮಾತಾಡಿಸಬೇಕು! ಮಾತಾಡಲು ನಮಗೆಂಥಾ ಇಂಗ್ಲೀಷ್ ಬರುತಿತ್ತು!! ಏನಾದರೂ ಕೊಟ್ಟರೆ ಓದುತಿದ್ದ…. ಹಾದಿಬೀದಿ ಹೋಟೆಲು ಅಂಗಡಿ ಕಸವನ್ನೆಲ್ಲ ತಡಕಾಡಿ ಇಂಗ್ಲೀಷ್ ಇರುವ ಹಾಳೆಗಳನ್ನು ಹುಡುಕಿ ತಂದು ಕೊಡುತಿದ್ದೆವು… ಜೊತೆಗೆರಡು ಕೋರೆಬೀಡಿ ಇಟ್ಟರಷ್ಟೇ ಕೆಲಸ….!!  ಅವಕ್ಕೇನು ಬರವೆ? ಅದೂss ನಮ್ಮೂರಲ್ಲಿ…!! … ಅಬ್ಬಾ… ಚೆಂದ ಮಾಡಿ ಓದುತ್ತಿದ್ದ ! ನಮಗದು ಅರ್ಥವೇ ಆಗುತ್ತಿರಲಿಲ್ಲ… ಹಾಗೇ ಓದುತ್ತಿದ್ದ ನೋಡಿ ಶೇಷ್ಗಿರಿಯಪ್ಪ!
ಕೊನೆಗೊಂದು ದಿನ ತಿಳಿದ ವಿಚಾರವೆಂದರೆ ಈತ ಮೊದಲು ಮೇಷ್ಟ್ರಾಗಿದ್ದ…!!!
ಹೀಗೆಲ್ಲ ಪ್ರಾಥಮಿಕ ಅನುಭವಗಳನ್ನು ದಾಟಿ ಹೈಸ್ಕೂಲಿಗೆ ಪಾದಾರ್ಪಣೆ ಮಾಡಿದ ನಮ್ಮ ಇಂಗ್ಲೀಷ್ ದಾಸ್ಯದ ದಿನಗಳು ಇನ್ನೂ ಕ್ರೂರವಾಗುತ್ತ ಸಾಗಿದವು…
ಮುಂದುವರೆಯುವುದು …

How do you like this post?

Click on a star to rate it!

Average rating 0 / 5. Vote count: 0

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಅರಬಗಟ್ಟೆ ಅಣ್ಣಪ್ಪ
Latest posts by ಅರಬಗಟ್ಟೆ ಅಣ್ಣಪ್ಪ (see all)

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಬಲ್ಲೊಡೇಕಿಂತು ಪೇಳ್