Write to us : Contact.kshana@gmail.com

ಮರೆಯಾದ ಮಾಣಿಕ್ಯ….

0
(0)

ಮೊದಲು ಶೃಂಗೇರಿಯ ಸುಧಾಕರ ಕಾಮತ್ ರ ಅಂಗಡಿಗೆ ಅವರ ಸಹೋದರಿಯ ಫೋನ್ ಉಡುಪಿಯಿಂದ ಬರುತ್ತೆ.

ಕಾಳಿಂಗ ನಾವಡರಿಗೆ ಬೈಕ್ ಅಪಘಾತವಾಗಿದೆ ಎಂಬ ಭರಸಿಡಿಲಿನ ಸುದ್ಧಿಯದು.

ಒಂದು ದಿನ ಮೊದಲು ಅವರಿದ್ದ ( ಆಗ ಬಾಡಿಗೆ ಮನೆಯಲ್ಲಿದ್ದರು . ಛೇಂಪಿ ಬಳಿಯ ಕೃಷ್ಣನಿಲಯ ಎಂದು ನೆನಪು.) ಮನೆಗೆ ಹೋಗಿದ್ದೆ. ಆಗ ಮನೆ ನಿರ್ಮಾಣದ ಕೆಲಸ ನಡೆಯುತ್ತಿತ್ತು.

ಆ ಕೊನೇಯ ಭೇಟಿಗೆ ಯಾವತ್ತಿನ ಖುಶಿ ಇರಲಿಲ್ಲ. ಅವರು ಹಾಗೆ…. ಮಹಾನ್ ಮೂಡಿ…. ಖುಶಿಯಾಗಿದ್ದರೆ ಮುಗಿಯದ ಮಾತು. ಮೂಡಿಲ್ಲವೆಂದರೆ ಮಹಾನ್ ಮೌನಿ. ಮನೆಗೆ ಹೋಗಿ ಕುಳಿತಿದ್ದೆ. ಮಾತಿಲ್ಲ – ಕಥೆಯಿಲ್ಲ. ಇಂಥ ಸಂದರ್ಭಗಳು ನಮ್ಮಿಬ್ಬರ ಸ್ನೇಹದಲ್ಲಿ ಹಲವಾರು ಬಾರಿ ಬಂದಿದ್ದರಿಂದ ನನಗೇನೂ ಅನ್ನಿಸಲಿಲ್ಲ. ಮತ್ತೆ ಎಷ್ಟೊತ್ತಿಗಾದರೂ ಅದರ 2 ಪಟ್ಟು ಮಾತಾಡುತ್ತಾರೆಂದು ಗೊತ್ತಿತ್ತು. ಹಾಗಾಗಿ ವಿಜಯಶ್ರೀ ಯವರು ಬೇಸರಾಗಬೇಡೆಂದು ಮುಖ ಭಾವದಲ್ಲಿಯೇ ತಿಳಿಸಿ , ಬೆಳಗ್ಗಿನ ಉಪಾಹಾರವಿತ್ತು ಯಾವತ್ತಿನ ಸತ್ಕಾರ ಮಾಡಿದರು.

ಮತ್ತೆ ಸ್ವಲ್ಪಹೊತ್ತಿಗೆಲ್ಲಾ ನಾವಡರು ಮೂಡ್ ಗೆ ಬಂದರು. ಸಾಲ್ವ ಶೃಂಗಾರ ಕ್ಯಾಸೆಟ್ ಗಾಗಿ ನಾವಾಗ ಪ್ಲಾನ್ ಮಾಡುತ್ತಿದ್ದೆವು. ಡಿ. ಜಿ. ಹೆಗ್ಡೆ ಯವರನ್ನು ಉಡುಪಿಗೆ ಹೋಗಿ ನೋಡು ಎಂದರು. ಅದರ ಕಾಪಿ ರೈಟ್ಸ್ ನೀನಾಗಿ ಯಾವ ಕಂಪೆನಿಯ ಜೊತೆಗೂ ಮಾತಾಡಬೇಡ. ನಾನು ಶಿಳ್ಗೆ ಯವರಿಗೆ ಹೇಳುತ್ತೇನೆ ಎಂದರು.

ಸ್ವಲ್ಪಹೊತ್ತಾದ ಮೇಲೆ ಮತ್ತಷ್ಟು ಉಲ್ಲಸಿತರಾದರು. ಕಟ್ಟುತ್ತಿರುವ ಮನೆಯ ಬಗ್ಗೆ , ಮಾಣಿಯ ಬಗ್ಗೆ ಮಾತಾಡಿದರು. ” ಕುಂದಾಪುರಕ್ಕೆ ಹೋಗಿ ಹಲ್ಸನಾಡು ಅಂಗಡಿಯಿಂದ ಯಾವುದೋ ಕೆಲ್ಸ ಮಾಡಿಕೊಂಡು ಬಾ ಎಂದರು. ಸ್ವಲ್ಪ ತಡೆದು ” ಬೇಡ ಅಪ್ಪಿ – ಶೃಂಗೇರಿಯವನಾದ ನಿನಗೆ ಕುಂದಾಪುರ ಗೊತ್ತಿರಲ್ಲ ಬಿಡು ” ಎಂದರು.

ಅದೇ ಸಮಯಕ್ಕೆ ಸಾಲಿಗ್ರಾಮ ಮೇಳದ ಯಜಮಾನ ಕಿಶನ್ ಹೆಗ್ಡೆಯವರು ಅವರ ಮನೆಗೆ ಬಂದರು. ನೀನೂ ಇವರ ಜೊತೆ ಉಡುಪಿಗೆ ಹೋಗು ಎಂದು ನನ್ನನ್ನು ಕಳಿಸಿದರು. ಕಿಶನ್ ಹೆಗ್ಡೆಯವರ ಬುಲೆಟ್ ಬೈಕಿನಲ್ಲಿ ಕುಳಿತು ಬರುವಾಗ ಯಕೋ ಈ ಭೇಟಿ ಅಷ್ಟು ಸಂತಸ ತರಲಿಲ್ಲವಲ್ಲ ಎಂದು ಬೇಸರಪಟ್ಟಿದ್ದೆ.

ಅದೇ ಕೊನೆಯ ಭೇಟಿ. ಈಗಿಲ್ಲಿ ಅವರಿಗೆ ಅಪಘಾತ ವಾಗಿದೆಯೆಂಬ ಸುದ್ಧಿಕೇಳಿ ಸಿಕ್ಕಿದ ಬಸ್ಸು ಹತ್ತಿ ಬೇಗಾರಿಗೆ ಹೋದೆ. ನಾನು ತುಂಬಾ ಆರಾಧಿಸುವ ನಮ್ಮೂರ ದುರ್ಗಾಪರಮೇಶ್ವರಿ ಹೆಸರಲ್ಲಿ ಜೋಡು ಹಣ್ಣುಕಾಯಿ ತೆಗೆದಿರಿಸಿ ” ಸುದ್ಧಿ ಸುಳ್ಳಾಗಲಿ.. ” ಎಂದು ಪ್ರಾರ್ಥಿಸಿದ್ದೆ.

ಸಂಜೆ ವೇಳೆಗೆಲ್ಲಾ ಅವರ ಸಾವು ಖಚಿತವಾಯಿತು. ಸ್ಮಶಾನ ಮೌನ ಕವಿಯಿತು. ಹೆಂಗಸರೆಲ್ಲಾ ಎದೆಒಡೆದು ಅತ್ತರು. ಈಗಿನ ಹಾಗೆ ಯಾವ ಸಂಪರ್ಕ ಮಾಧ್ಯಮ ಇಲ್ಲದ ಆ ಕಾಲದಲ್ಲಿ ಕೂಡಾ ಸುದ್ಧಿ ಕಾಡ್ಗಿಚ್ಚಿನಂತೆ ಮೂಲೆ ಮೂಲೆಗೂ ತಲುಪಿತು.

ಆಗ ಉಂಟಾದ ಹರತಾಳ ಯಾವ ರಾಜಕೀಯ ಮಹಾನ್ ವ್ಯಕ್ತಿಗೂ ಕಡಿಮೆ ಇರಲಿಲ್ಲ. ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸಿದ್ದರು. ಎಲ್ಲಿ ಯ ಮಲೆನಾಡು – ಎಲ್ಲಿಯ ಕರಾವಳಿ. ಕಲೆ ಕಲಾವಿದನಿಗೆ ಇರುವ ಯೋಗ್ಯತೆಯದು. ದೇಶ ಕಾಲ ಮೀರಿ ನಾವಡರು ಜನ ಮಾನಸದಲ್ಲಿನಿಂತಿದ್ದರು.

ಮಾರನೇ ದಿನ ಬೆಳಿಗ್ಗೆ ಮುಂಚೆ , ಮೊದಲ ಬಸ್ಸಿಗೆ ಬ್ರಹ್ಮಾವರಕ್ಕೆ ಹೋಗಿ ಅವರ ಮನೆ ತಲುಪಿ ಅಂತಿಮ ದರ್ಶನ ಪಡೆದೆವು.

ಅಂತಿಮ ದರ್ಶನಕ್ಕೆ ಜನ ಸಾಗರವೇ ಸೇರಿತ್ತು. ಗುಂಡ್ಮಿಯ ಅವರ ಮನೆಯಿಂದ ವಾಪಾಸು ಬರುವಾಗ ಹೈ ವೆ. ಬಳಿ ಒಂದು ದೇವಸ್ಥಾನದಲ್ಲಿ ಯಾವುದೋ ಮದುವೆ ನಡೆಯುತ್ತಿತ್ತು. ಎಂಥಾ ವೈರುಧ್ಯ….

” ಈ ಸನ್ನಿವೇಶ ನೋಡುತ್ತಿದ್ರೆ ಅವರೇ ನಾಗಶ್ರೀ ಪ್ರಸಂಗಕ್ಕೆ ಬರೆದ ಪ್ರಭಾಂಗಿ ಪದ್ಯ ನೆನಪಾಗುತ್ತಿದೆ. ಮದುವೆಯ ವೈಭವ ಒಂದೆಡೆ.. ” ಎಷ್ಟೋ ದಿನಗಳಾದ ಮೇಲೆ ಒಮ್ಮೆ ಅವರ ಶ್ರೀಮತಿಯವರಿಗೆ ಸಾಂತ್ವನ ಹೇಳಲೆಂದು ಹೋಗಿದ್ದೆ. ಆಗ ಅವರಾಡಿದ ಮಾತು ಒಂದು ಅನ್ಯೋನ್ಯ ಭಾವ ಸಂಬಂಧದ ಅದ್ಭುತ ಅನುಬಂಧದ ಮಹಾನ್ ಗಾಥೆ.

ಅದನ್ನು ಪುಸ್ತಕ ರೂಪದಲ್ಲಿಯೇ ಹೊರತರುತ್ತೇನೆ.

ಅಮೇಲೆ ಅದೆಷ್ಟೋ ದಿನ ಗಂಪು ಕ್ಯಾಂಟೀನ್ ನ ಕೊಟ್ಟೆ ಕಡುಬಿನ ಸುರುಳಿ ಬಿಚ್ಚುತ್ತಾ ಪೈ ಗಳೊಂದಿಗೆ ಪರಸ್ಪರ ನೆನೆಪಿನ ಸುರುಳಿ ಬಿಚ್ಚುತ್ತಿದ್ದೆವು. ಅದೂ ಕೂಡಾ ಸಂಗ್ರಹ ಯೋಗ್ಯ….

ರಮೇಶ್ ಬೇಗಾರ್ ಶೃಂಗೇರಿ

^^^^^^^^^^^^^^^^^^^^^ ಕಾಳಿಂಗ ನಾವಡ ರ ಮೇಕಿಂಗ್ ಆಫ್ ಅಮೃತಮತಿ ನಾಳೆ ನಿಮಗೆ ನನ್ನ ಯೂಟೂಬ್ ಚಾನಲ್ ನಲ್ಲಿ ಲಭ್ಯವಾಗಲಿದೆ. ಅದರ ಸಣ್ಣ ಪ್ರಮೋಷನ್ ಈ ವೀಡಿಯೋ ದಲ್ಲಿದೆ.

https://youtu.be/eKmfuokOVPY

How do you like this post?

Click on a star to rate it!

Average rating 0 / 5. Vote count: 0

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಹುಡುಕುವೇನನು ಮರುಳೆ !