Write to us : Contact.kshana@gmail.com

ದನದ ಅನ್ನನಾಳದಲ್ಲೇನಿತ್ತು ?

3.9
(7)

ಮುಳುಗಡೆ ಪ್ರದೇಶದಲ್ಲೊಂದು ಶಸ್ತ್ರಚಿಕಿತ್ಸೆ

ಅಂದು ರಾತ್ರಿ 9 ಕ್ಕೆ ಯಡೂರಿನ ಪಶುವೈದ್ಯರಾದ ಡಾ.ಧನಂಜಯ ಅವರ ಫೋನ್ ಸಾರ್…. ಯಡೂರಿನ ಹೆಬ್ಳೆಬೈಲು ಬಳಿಯ ಶೋಭ ರವೀಂದ್ರ ಅವರ ಹಸುವಿಗೆ ಗಂಟಲಿನಲ್ಲಿ ಯಾವುದೋ ವಸ್ತು ಸಿಕ್ಕಿಬಿದ್ದಿದೆ….ಅದು ನರಳುತ್ತಾ 5 ದಿನಗಳೇ ಕಳೆದಿವೆ. ಬೆಳಗ್ಗೆ ನಮ್ಮಲ್ಲಿಗೆ ಬಂದು ಶಸ್ತ್ರಚಿಕಿತ್ಸೆ ಮಾಡಬಹುದೆ? 5 ದಿನಗಳು ಆಗಿವೆ ಎಂದ ಕೂಡಲೆ ಹುಬ್ಬೇರಿಸಿದ ನಾನು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ನಾಳೆಯ ಕೆಲವು ಕೆಲಸಗಳನ್ನು ಮುಂದೂಡಿ ಅಗತ್ಯವಾಗಿ ಬರುವೆ ಡಾಕ್ಟ್ರೇ ಎಂದು ಸಿದ್ದತೆಗಳನ್ನು ಮಾಡಿಕೊಂಡೆ.
ಬೆಳಗ್ಗೆ ಯಡೂರಿನ ಕಡೆಗೆ ಬೈಕು ತಿರುಗಿಸಿದಾಗ ಮಾರ್ಗಮಧ್ಯದಲ್ಲಿ ಫೋನೊಮ್ಮೆ ರಿಂಗಣಿಸಿತು .ಸಾರ್, ನಾನು ಯಡೂರಿನ ಶೋಭ ಮಾತನಾಡುವುದು . ನಿಮ್ಮ ಹಳೆಯ ಊರು ಹೋಳೇಗದ್ದೆ, ನಿಮ್ಮ ಅಜ್ಜ, ಅಜ್ಜಿ, ಎಲ್ಲರೂ ನಮ್ಮ ಯಜಮಾನರಿಗೆ ಪರಿಚಯ , ಈಗ ಅವರಿಲ್ಲ ಎಂದು ಹೇಳುತ್ತಾ ನಮ್ಮ ಹಸುವಿಗೆ ಸೂಕ್ತ ಚಿಕಿತ್ಸೆ ನೀಡಿ ಸಾರ್…. ಎಂದು ವಿನಂತಿಸಿದರು. ಯಡೂರು , ಹೋಳೇಗದ್ದೆ ಎಂದು ಹೇಳುತ್ತಲೇ ನನ್ನ ಅಜ್ಜನ ಮನೆ, ಅಲ್ಲಿಯ ಪ್ರಕೃತಿ ಸೌಂದರ್ಯ, ನಾನು ಅಲ್ಲಿ ಕಳೆದ ಬಾಲ್ಯದ ಕಡೆ ಮನ ಕೊಂಡೊಯ್ಯಿತು. ಅಬ್ಬಾ ಅದು ಊರಲ್ಲ ಸ್ವರ್ಗ, ಎತ್ತ ನೋಡಿದರು ಬೆಟ್ಟ ಗುಡ್ಡಗಳಿಗೆ ಹಸಿರು ಹೊದಿಕೆ ಹಾಸಿದ ಪಶ್ಚಿಮಘಟ್ಟಗಳ ಸಾಲು, ಸೂರ್ಯ ರಶ್ಮಿಯು ನೆಲಕ್ಕೆ ತಾಗದಷ್ಟು ಕಗ್ಗತ್ತಲೆಯ ಕಾಡು , ಗೊಂಡಾರಣ್ಯಗಳ ನಡುವೆ ಖಗ-ಮೃಗ, ಸರಿಸೃಪ , ಜೀವವೈವಿದ್ಯಗಳ ಬೀಡು, ವರ್ಷದಲ್ಲಿ 6 ತಿಂಗಳು ಮಳೆ ನೀಡುತ್ತಿದ್ದ ಮಳೆಕಾಡು, ಅಂಗಳದಲ್ಲೇ ನಲಿಯುತ್ತಿದ್ದ ನವಿಲ ನರ್ತನ, ಹೊಳೆಯಲ್ಲಿ ಮತ್ಸ್ಯ ಸಾಮ್ರಾಜ್ಯ , ಇವೆಲ್ಲವುಗಳ ನಡುವೆ ಅಲ್ಲೊಂದು ಇಲ್ಲೊಂದು ಎಂಬಂತೆ ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುತ್ತಿದ್ದ ಮುಗ್ದ ಮನಸುಗಳು.


ಇಂತಹ ಸೌಂದರ್ಯ ದೇವತೆಗೆ ಅದ್ಯಾವ ರಕ್ಕಸನ ಕಣ್ಣು ಬಿತ್ತೋ “ಮುಳುಗಡೆ” ಎಂಬ ಭೂತ ಇಡೀ ಊರನ್ನೇ ಆವರಿಸಿ ಜನರ ಬದುಕನ್ನು ಮೂರಾಬಟ್ಟೆ ಮಾಡಿ, ಸಹಸ್ರಾರು ಬದುಕುಗಳನ್ನು ನೀರಿನಲ್ಲಿ ಮುಳುಗಿಸಿ, ಸಂಬಂಧಗಳಿಗೇ ಕೊಳ್ಳಿಯಿಟ್ಟು ದಿಕ್ಕಿಗೊಬ್ಬರಂತೆ ಚದುರಿ ಹೋದ ದಿನಗಳು, ಕಣ್ಮುಂದೆ ಬರುತ್ತಿರುವಾಗ ಜೋರಾಗಿ ಅಪ್ಪಳಿಸಿದ ಜಡಿ ಮಳೆಯ ಹನಿಗಳು ಕಪಾಳ ಮೋಕ್ಷ ಮಾಡಿದಂತಾಗಿ “ಈ ಕ್ಷಣ ನನ್ನ ಮನ”ವೆಲ್ಲಾ ವರ್ತಮಾನಕ್ಕೆ ಜಾರುವಂತೆ ಮಾಡಿ ಬೈಕು ಹೆಬ್ಳೆಬೈಲು ಶ್ರೀಮತಿ ಶೋಭ ರವೀಂದ್ರ ಅವರ ಮನೆಯ ಬಳಿ ಬಂದು ನಿಂತಿತು .


ಕಳೆದ 6 ದಿನಗಳಿಂದ ಆಹಾರ ನೀರಿಲ್ಲದೆ ನಿತ್ರಾಳವಾಗಿದ್ದ ಹಸು ಗಂಗೆಯ ದಯನೀಯ ಸ್ಥಿತಿ ಕಂಡು ಕರುಳು ಕಿವುಚಿದಂತಾಯ್ತು. ನನ್ನ ಮುಖವನ್ನೇ ದಿಟ್ಟಿಸಿ ನೋಡಿದ ಗಂಗೆ , ಇವನೇನಾದರು ಪ್ರಾಣ ಉಳಿಸುವೆನೇನೋ ಎಂಬ ಆಶಾಭಾವನೆಯಿಂದ ನೋಡಿದಂತಿತ್ತು. ಅದರ ಮೈ ಸವರುತ್ತ ಗಂಟಲಿನ ಭಾಗವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಗಟ್ಟಿಯಾದ ವಸ್ತುವೊಂದು ಅನ್ನನಾಳದಲ್ಲಿ ಸಿಲುಕಿರುವುದು ಖಾತ್ರಿಯಾಯಿತು . ಗ್ರಾಮೀಣ ಮಟ್ಟದಲ್ಲಿ ಕೆಲಸ ನಿರ್ವಹಿಸುವಾಗ x- ray ತೆಗೆಯಲು ಉಪಕರಣಗಳು ಯಾವುದೂ ಇರುವುದಿಲ್ಲ . ಏನಿದ್ದರೂ ರೋಗಲಕ್ಷಣಗಳು , ಭೌತಿಕ ಪರಿಶೀಲನೆ ಮತ್ತು ಅನುಭವದ ಆಧಾರದ ಮೇಲೆಯೇ ಸಮಸ್ಯೆಯ ಮೂಲ ಪತ್ತೆಹಚ್ಚಿ ಲಭ್ಯವಿರುವ ಕನಿಷ್ಟ ಸೌಲಭ್ಯದಲ್ಲಿ ಗರಿಷ್ಟ ಗುಣಮಟ್ಟದ ಚಿಕಿತ್ಸೆ ನೀಡುವುದು ಪಶುವೈದ್ಯರಿಗೆ ಸಿದ್ದಿಸಿದ ವಿದ್ಯೆ. ಹೆಚ್ಚು ತಡ ಮಾಡದೆ ಶಸ್ತ್ರಚಿಕಿತ್ಸೆಗೆ ಸಿದ್ದತೆ ಮಾಡಿಕೊಂಡೆ. ನನ್ನೊಂದಿಗೆ ಯಡೂರಿನ ಪಶುವೈದ್ಯರಾದ ಡಾ.ಧನಂಜಯ ಅವರು ಸಹಕರಿಸಲು ಅಣಿಯಾದರು. ಅನ್ನನಾಳದ ಶಸ್ತ್ರಚಿಕಿತ್ಸೆ ಎಂಬುದು ಬಹಳ ಕ್ಲಿಷ್ಟಕರವಾದ ಕಾರ್ಯ. ಸಾಮಾನ್ಯವಾಗಿ ಯಾವುದೇ ಶಸ್ತ್ರಚಿಕಿತ್ಸೆಗಳು ಇದ್ದರೂ ಅದಕ್ಕೆ ಸಂಬಂದಿಸಿದ ಕೆಲವು ಪುಸ್ತಕಗಳನ್ನು ತಿರುವಿಹಾಕಿ , ಪಶುವೈದ್ಯ ಮಿತ್ರರೊಂದಿಗೆ ಚರ್ಚಿಸಿ, ಹಳೆಯ ಅನುಭವಗಳನ್ನು ಮೆಲುಕು ಹಾಕಿಯೇ ಪ್ರಾರಂಭಿಸುವುದು. ಆದರೂ ಪ್ರತಿ ಶಸ್ತ್ರಚಿಕಿತ್ಸೆಗಳು ಹಲವಾರು ಹೊಸ ಸವಾಲುಗಳನ್ನು ನಮ್ಮ ಮುಂದಿಡುತ್ತವೆ. ಶಸ್ತ್ರಚಿಕಿತ್ಸೆ ಪ್ರಾರಂಭಿಸಿ ಅನ್ನ ನಾಳವನ್ನು ಸಮೀಪಿಸುತ್ತಿದ್ದಂತೆ ಗಂಟಲು ಭಾಗದಲ್ಲಿ ಹಾದು ಹೋಗುವ ಹಲವಾರು ರಚನೆಗಳು ಕಣ್ಣಿಗೆ ಬಿದ್ದವು . ನನಗಾಗ ಅಂಗರಚನಾ ಶಾಸ್ತ್ರವನ್ನು ಭೋದಿಸಿದ ಡಾ.ಅನಿಲ್ ಕುಮಾರ್ ಸರ್ ಅವರು ನೆನಪಿಗೆ ಬರುವಂತಾಯಿತು. ಮೆದುಳಿಗೆ ಸರಬರಾಜು ಮಾಡುವ ರಕ್ತ ನಾಳವು ಬಡಿದುಕೊಳ್ಳುತ್ತಿದ್ದರೆ, ಪಕ್ಕದಲ್ಲಿಯೇ ಹಾದು ಹೋದ ಅಪಧಮನಿಗಳು, ನರವ್ಯೂಹಗಳನ್ನು ಕಂಡು ಕ್ಷಣಕಾಲ ಬೆವರಿಹೋದೆ. ಅದೇನೆ ಇರಲಿ , ಒಬ್ಬ ಯಶಸ್ವಿ ಶಸ್ತ್ರಚಿಕಿತ್ಸಕನಿಗೆ ಸಿಂಹದ ಹೃದಯ ಇರಬೇಕಲ್ಲವೆ. ಧೈರ್ಯದಿಂದಲೇ ಅನ್ನನಾಳವನ್ನು ಗುರುತಿಸಿ , ಅದನ್ನು ಸೀಳಿದಾಗ ಸಿಕ್ಕಿಬಿದ್ದ ವಸ್ತು ಏನಿರಬಹುದು ಎಂಬ ಎಲ್ಲರ ಕುತೂಹಲಕ್ಕೆ ತೆರೆ ಬಿದ್ದಿತು. ಅದು ಗಟ್ಟಿಯಾದ ಜೇನಿನ ಮೇಣದ ತುಂಡು .
ಸಾಮಾನ್ಯವಾಗಿ ಪೋಷಕಾಂಶಗಳ ಕೊರತೆ ಇರುವ ರಾಸುಗಳು ಈ ರೀತಿಯ ವಸ್ತುಗಳನ್ನು ಹುಡುಕಿ ತಿನ್ನುತ್ತವೆ. ಆಗ ಕೆಲವೊಂದು ಅನ್ನ ನಾಳದಲ್ಲಿ ಸಿಕ್ಕಿ ಬಿದ್ದರೆ, ಕೆಲವು ಉದರ ಸೇರಿ ನಂತರ ಜೀರ್ಣಾಂಗ ವ್ಯೂಹದಲ್ಲಿ ಸಿಲುಕಿ ಸಮಸ್ಯೆ ನೀಡುತ್ತವೆ. ಅಂತು ಸಂಧೀರ್ಘ ಒಂದೂವರೆ ತಾಸುಗಳವರೆಗೆ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾದಾಗ ನೆರೆದಿದ್ದವರೆಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟರು . ಶಸ್ತ್ರಚಿಕಿತ್ಸೆಯ ನಂತರ ಹದಿನೈದು ದಿನಗಳ ಮಟ್ಟಿಗೆ ಮೆದು ಆಹಾರ ನೀಡಿದ್ದಲ್ಲದೆ ನಂತರದ ದಿನಗಳಲ್ಲಿ ಡಾ. ಧನಂಜಯ ಅವರು ಗಂಗೆಗೆ ಅವಶ್ಯಕ ಚಿಕಿತ್ಸೆಗಳನ್ನು ನೀಡಿದರು. ಆರು ದಿನಗಳವರೆಗೆ ಜೀವನ್ಮರಣದ ನಡುವೆ ನಡೆದ ಹೋರಾಟ ಅಂತಿಮವಾಗಿ ಸುಖಾಂತ್ಯಗೊಂಡು ಗಂಗೆ ಬದುಕುಳಿದಳು.
ಎಲ್ಲರಿಗೂ ಶುಭವಾಗಲಿ,ನಮಸ್ಕಾರಗಳು
✍ಯುವರಾಜ ಹೆಗಡೆ

How do you like this post?

Click on a star to rate it!

Average rating 3.9 / 5. Vote count: 7

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಡಾ. ಯುವರಾಜ ಹೆಗಡೆ

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಮನೆಯಿಂದ ಕೆಲಸ