Write to us : Contact.kshana@gmail.com
5
(1)

ಕಾದಂಬರಿಕಾರರಾದ ಎಸ್.ಎಲ್.ಭೈರಪ್ಪ ಅವರೇ ತಮ್ಮ ಸಾಹಿತ್ಯದೆಶೆಯ ಆರಂಭದ ವಂಶವೃಕ್ಷ ಕಾದಂಬರಿಯು ಪ್ರಸಿದ್ಧಿ, ಜನಪ್ರಿಯತೆ ಮತ್ತು ಸ್ವೀಕಾರವನ್ನು ಪಡೆದಿದ್ದರೂ, ಸಾಹಿತ್ಯದ ರಚನಾ ಸಾಮರ್ಥ್ಯದ ದೃಷ್ಟಿಯಿಂದ ಜಲಪಾತವು ಮೊದಲ ಮಹತ್ವದ ಕೃತಿ ಎಂದಿರುವರು. ವಂಶವೃಕ್ಷ ಬರೆದ ನಂತರ ಅವರು ತಮ್ಮ ಸ್ವ ಸಾಹಿತ್ಯವಲೋಕನ ಮಾಡಿಕೊಂಡಾಗ ಕಂಡ ದೊರೆತ ದೋಷಗಳನ್ನು ಅರಿತು, ಸಾಹಿತ್ಯ ರಚನೆಯನ್ನು ಕಲೆಯ ಹದಕ್ಕೆ ತಲುಪಲು ಪ್ರತಿಭೆಯನ್ನು ಹೆಚ್ಚು ದುಡಿಸಿಕೊಂಡು ಪ್ರಜ್ಞಾಪೂರ್ವಕವಾಗಿ ಬರೆದ ಕೃತಿ ಜಲಪಾತ.

ಓದುವಾಗಲೂ ಓದಿದ ಮೇಲೂ ಎಷ್ಟೋ ಬಾರಿ ಅನ್ನಿಸಿದ್ದು ಅವರು ಮಂದ್ರದಂತಹ ಸಂಗೀತಾತ್ಮಕ ಕಲಾಕೃತಿಯನ್ನು ರಚಿಸದಿದ್ದರೂ ಏನೂ ತೊಂದರೆಯಿರಲಿಲ್ಲ; ಅದು ಆಗಲೇ ಜಲಪಾತದಲ್ಲಿ ಮುಟ್ಟಿದ ಸ್ವಯಂಪೂರ್ಣತೆಯಲ್ಲಿ ಒಂದು ದಡವನ್ನೂ ತಾತ್ವಿಕ ಸ್ವರೂಪವನ್ನೂ ಪಡೆದಿದೆ ಎಂಬುದು. ಜಲಪಾತ ಎಂಬ ಪದ ಕೇವಲ ಜಲ ಮಾತ್ರವೇ ಅಲ್ಲ, ಸಪ್ತಧಾತುವಿನಲ್ಲಿ ಅತ್ಯಂತ ಸಾಂದ್ರವಾದ ರೇತಸ್ಸಿನ ಪಾತ ಕೂಡಾ ಎಂಬುದು ಕಾದಂಬರಿಯುದ್ದಕ್ಕೂ ಮನುಷ್ಯನ ಜೀವಂತಿಕೆಗಾಗಿ ರತಿತೃಪ್ತಿ ಮತ್ತು ಸಂತಾನ ಸೃಷ್ಟಿಗಾಗಿ (ಗಮನಿಸಿ: ಅವರು ಸಂತಾನೋತ್ಪತ್ತಿ ಎಂದು ಪ್ರಜ್ಞಾಪೂರ್ವಕವಾಗಿಯೇ ಬರೆಯುವುದೂ ಚಿತ್ರಿಸುವುದೂ ಇಲ್ಲ. ಹಾಲಿನ ಹೆಚ್ಚಳಕ್ಕಾಗಿ ಪಶುಗಳಲ್ಲಿ ಮಾಡುವ ಕೃತಕ ಗರ್ಭಧಾರಣೆಯು ಉತ್ಪತ್ತಿಯ ಹವಣು. ಇಲ್ಲಿ ಸೃಷ್ಟಿಯ ಆನಂದವಿಲ್ಲ ಎಂಬುದು ಕಾದಂಬರಿಯ ಧಾಟಿ) ಏರ್ಪಡುವ ಮಿಲನದ ಕುರಿತಾದ ವಿಫುಲ ಆಲೋಚನೆಗಳಲ್ಲಿ ಕಂಡುಬರುತ್ತದೆ.

ಆರಂಭದಿಂದಲೂ ಕಾದಂಬರಿಯು ಎರಡು ಸಂಸ್ಕೃತಿ/ಜೀವನಶೈಲಿ/ವಿಚಾರಧಾರೆಗಳ ತುಲನೆಯಲ್ಲೇ ಮುಂದುವರೆಯುತ್ತದೆ. ಚಿತ್ರಕಲಾವಿದ ಶ್ರೀಪತಿಯು ಸ್ವಭಾವತಃ ಮುಕ್ತ ಮನೋಭಾವದವನು. ಒಳಗಿನ ತುಡಿತದ ಅಭಿವ್ಯಕ್ತಿಗೆ ಬೇಕಾದ ನಿರ್ಮಲ ವಾತಾವರಣ, ಸಹವರ್ತಿಗಳ ಸಹಕಾರಗಳಲ್ಲಿ ನಂಬಿಕೆಯಿಟ್ಟವನು. ಕಾಡುಮೇಡುಗಳಲ್ಲಿ ಅಲೆದಲೆದು ಪ್ರಕೃತಿಯನ್ನು ನೋಡುವುದು ಮಾತ್ರವಲ್ಲದೆ ಅದರೊಟ್ಟಿಗೆ ಜೀವಿಸಿ ತಾದಾತ್ಮ್ಯವಾದಾಗ ಮಾತ್ರವೇ ಅದರ ಕುರಿತ ಕುಂಚಕಲೆಯ ಅಭಿವ್ಯಕ್ತಿ ಸಾಧ್ಯ ಎಂಬ ಧ್ಯಾನಸ್ಥ ಚಿತ್ತದ ವ್ಯಕ್ತಿ. ಮದುವೆಯಾದ ಬಂಧುವೇ ಆಗಿದ್ದ ವಸು/ಭೂದೇವಿಗೂ ಅವನ ಗುಣ ಗೊತ್ತು. ಅವಳೂ ಅಂತಹದೇ ಚಿತ್ತ ವೃತ್ತಿ ಉಳ್ಳವಳು. ದೈನಂದಿನ ಅವಶ್ಯಕತೆಗಳಲ್ಲಿ ಸಮೃದ್ಧಿಯನ್ನು ಕಾಣುತ್ತ, ಅದನ್ನು ವ್ಯವಹಾರದ ಸರಕಾಗಿ ದುಡಿಸಿಕೊಳ್ಳದ ಸಾಂಪ್ರದಾಯಿಕ ಪರಿಸರದಲ್ಲೇ ಬೆಳೆದ, ಒಲವುಳ್ಳವರು. ಹೀಗಿರುವ ಶ್ರೀಪತಿಗೆ ಅವನ ಕಲೆಯ ಕಸುಬಿನ ದುಡಿಮೆಗೆ ತಕ್ಕ ವೇದಿಕೆ ಎಲ್ಲೂ ಸಿಗುವುದಿಲ್ಲ. ಅಲ್ಲಿಂದಲೇ ಈ ನಾಗರೀಕ ಸಮಾಜವು ಕಲೆಯ ಕುರಿತು ಇಟ್ಟುಕೊಂಡಿರುವ ಅವಜ್ಞೆಯನ್ನು ಬಿಚ್ಚಿಡುವ ವಿಚಾರಗಳು ಮೊದಲಾಗುತ್ತವೆ. ಅವನು ಕೆಲಸವನ್ನರಸಿ ಮುಂಬಯಿಗೆ ಬರಬೇಕಾಗುತ್ತದೆ.

ಆರಂಭವಾಕ್ಯದಿಂದಲೇ ಕಂಡುಬರುವ ಮುಂಬೈ ಎಂಬ ಸಾಂಕೇತಿಕ ಸಾಂದ್ರ ನಗರದ ಜೊತೆಗಿನ ಹಳ್ಳಿಯ ಬದುಕಿನ ಸೆಣಸಾಟವು ಕೊನೆಯ ಪುಟದವರೆಗೂ ಕಂಡುಬರುತ್ತದೆ.
ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲವೂ ಮುಂಬೈ/ನಗರ/ಅಲ್ಲಿನ ಜನಗಳ ವರ್ತನೆ/ಆಲೋಚನಾಧಾಟಿಯ ಕುರಿತಾಗಿ ಅದು ಹೇಗೆ ಮುಕ್ತ ಕಲಾಪ್ರಜ್ಞೆಯನ್ನು ನಿರ್ವೀಯಗೊಳಿಸುತ್ತದೆ ಎಂಬುದನ್ನು ಚಿತ್ರಿಸುತ್ತಾರೆ. ಅದನ್ನು ಎಷ್ಟು ತೆರನಾಗಿ ಹೇಳಿದರೂ ಲೇಖಕರಿಗೆ ಸಮಾಧಾನವಿಲ್ಲ. ಶ್ರೀಪತಿಯ ಮನಸ್ಸು ಯಾವಾಗಲೂ ತನ್ನ ಸ್ವಚ್ಛಂದ ಕಲೋಪಾಸನೆಯ / ಹಳ್ಳಿಯ ಸೌಂದರ್ಯದ / ಅಲ್ಲಿನ ಸ್ವಾಭಾವಿಕ ಜನಾನುರಾಗದ ಕುರಿತು ನೆನೆಯುತ್ತಾ ಅದರ ಮುಖಕ್ಕೆ ಹೊಡೆದಂತೆ ಬೆಳೆದಿರುವ ಮುಂಬೈ ಶಹರದ ಆಕ್ರಮಣಶೀಲತೆಯನ್ನು ಹಳಿಯುತ್ತಾನೆ. ಸಹಜ ಸ್ತ್ರೀ ಸ್ವಭಾವದ ಹೆಂಡತಿ ವಸು ಕೂಡಾ ಈ ಕಿಷ್ಕಿಂಧ ಬದುಕಿನ ಇಕ್ಕಟ್ಟಿನಲ್ಲಿ ಬಸವಳಿಯುತ್ತಾಳೆ. ಅಕ್ಕಿನ ದುಡ್ಡಿಂದ ಅಳೆಯೋ ಬುದ್ಧಿ ಬಂದೇ ಪ್ರಪಂಚ ಹಾಳಾಗಿದೆ ಎನ್ನುವ ವಾಕ್ಯವು ಅಲ್ಲಿ ಕಲೆಗೂ ಅನ್ವಯಿಸಿಕೊಳ್ಳುತ್ತಾನೆ. ಕಲೆಯು ಮಾರಾಟದ ಸರಕಾದ ನಂತರ ಆ ಸಹಜ ಕಲಾವಂತಿಕೆಗೆ ಸಿಗಬೇಕಾದ ಪ್ರೋತ್ಸಾಹ ಕಡಿಮೆಯಾಯಿತು. ಚಿತ್ರಕಲೆಯು ಸರಕೊಂದನ್ನು ಆಕರ್ಷಕವಾಗುವಂತೆ ಚಿತ್ರಿಸಿ ಜನರನ್ನು ಸೆಳೆಯುವ ದೃಶ‍್ಯಮಾಧ್ಯಮವಾಯಿತು. ಅಂರಹ ಜಾಹಿರಾತಿನ ಉದ್ಯಮವೊಂದರಲ್ಲಿ ಕೆಲಸ ಮಾಡುವ ಶ್ರೀಪತಿಗೆ ಯಾವಾಗಲೂ ಹಳಹಳಿಕೆಯೇ. ಅವನು ಅಲ್ಲಿ ಅತ್ಯುತ್ತಮ  ಕಲಾವಿದ ಎಂಬ ಹೆಸರು ಗಳಿಸಿದ್ದರೂ, ಆ ಅತ್ಯುತ್ತಮ ಬಿರುದು ಈ ಧಾವಂತದ ನಾಗರೀಕ ಜಗತ್ತಿನಿಂದ ದೊರೆತದ್ದು ಎಂಬ ಅನಾಸಕ್ತಿ. ಪಾರಂಪರಿಕ ಚಿತ್ರಕಲಾವಿದ್ಯೆಗೆ, ಸಹಜ ಪ್ರತಿಭೆಯಿಂದ ವಿಕಾಸಗೊಂಡು ಬೆಳೆಯುವ ಕಲಾವಿದನಿಗೆ ಬೆಲೆಕೊಡದೆ, ನೀವು ಎಲ್ಲಿ ಕಲಿತದ್ದು, ಯಾವ ಚಿತ್ರಶಾಲೆಗೆ ಹೋಗಿದ್ದು, ಯಾರು ನಿಮ್ಮ ಗುರುಗಳು ಎಂಬೆಲ್ಲ ಲೋಕಜೀವನದ ವಿದ್ಯಾಪದವಿಯ ಘಟ್ಟಗಳಿಂದ ಪ್ರಾವೀಣ್ಯತೆ ಅಳೆಯುವ ಗುರುತಿಸುವ ಮನೋಭಾವವನ್ನು ಎಂದೂ ಇಷ್ಟಪಟ್ಟವನಲ್ಲ. ಹೀಗೆ ಪಾರಂಪರಿಕವಾಗಿ, ಪ್ರಕೃತಿ ಪರಿಸರಗಳಿಂದ ಪ್ರಭಾವಿತನಾಗಿ ಕಲಿತ ಸಹಜಾಸಕ್ತ ವಿದ್ಯೆಗೂ ಮತ್ತು ಪಠ್ಯಾಧಾರಿತ ಲೋಕರೂಢಿಯ ಶಿಕ್ಷಣಪದ್ಧತಿಯಿಂದ ವಿದ್ಯಾಲಯಗಳಿಂದ ಗಳಿಸಿಕೊಂಡ ಅರ್ಹತೆಯ ಪದವಿ ವಿದ್ಯೆಗೂ ಇಲ್ಲಿ ತಾಕಲಾಟ ನಡೆಯುತ್ತಲೇ ಹೋಗುತ್ತದೆ. ಕಲೆಯೆಂದರೆ ಆಕರ್ಷಕವಾಗಿರಬೇಕು ಎಂಬ ಮುಂಬೈ ಶಹಕ ಸಂಸ್ಕೃತಿಯ ಪ್ರತೀಕವಾಗಿ ಅವನ ಕಂಪನಿಯ ಆರ್ಟ್ ಡೈರೆಕ್ಟರ್ ಮಾತ್ರಾನಿ, ಸ್ಟೆನೋ ರೆಬೆಲೊ, ವಸ್ತುಗಳ ಧಾರಣೆಯ ಮೂಲಕ ಬದುಕನ್ನು ಅಳೆಯುವ ಮೈದುನ ಸುಬ್ಬು, ದಾಂಪತ್ಯ ಮತ್ತು ಗಂಡು ಹೆಣ್ಣುಗಳ ಸಂಬಂಧವನ್ನು ತುಂಬ ವ್ಯಾವಹಾರಿಕವಾಗಿ ತಾರ್ಕಿಕವಾಗಿ ನೋಡುವ ಡಾ.ನಾಡಗೌಡ ಮುಂತಾದವರು ಒಂದು ಕಡೆಯಾದರೆ, ಪಡೆದದ್ದೆಲ್ಲ ದಾನವಾಗಿ ಸಂತರ್ಪಣೆಯಾಗಿ ಕರಗಬೇಕು ಎಂಬ ಮಾವ ಗುಂಡೂರಾಯರು, ಸೃಷ್ಟಿಶಾಲಿ ಕಲಾವಿದನು ತನ್ನ ನೈಪುಣ್ಯವನ್ನು ಅನ್ಯರ ಅಗತ್ಯಕ್ಕೆ ತಕ್ಕಂತೆ ಮಾರಿಕೊಂಡು ಜೀವಿಸಬೇಕಲ್ಲ ಎಂದು ಕೊರಗುತ್ತ ಬದುಕುವ ಶ‍್ರೀಪತಿ ದಂಪತಿಗಳು, ಮಗುವಿಗಾಗಿ ಹಂಬಲಿಸುವ ಸಹಜ ಸ್ತ್ರೀ ಸ್ವಭಾವದ ಸುಧಾಬಾಯಿ, ತುಂಬು ಬಾಳ್ವೆಯನ್ನು ನಡೆಸುವ ಜಾನಕಿ, ಶ್ರೀದೇವಿ, ಅವರ ತಾಯಿ ಮುಂತಾದವರು ಇನ್ನೊಂದು ಕಡೆ. ಕಾದಂಬರಿಯಲ್ಲಿ ಹೀಗೆ ಜೀವನಪ್ರೀತಿ ಉಳ್ಳವರೆಲ್ಲ ಸಂಸಾರವು ತುಂಬು ಕುಟುಂಬವಾಗಿರುವುದನ್ನು ನೋಡಬಹುದು. ಸುಬ್ಬುವಿಗೆ ಮಾತ್ರ ಎರಡು ಹೆಣ್ಣುಮಕ್ಕಳು. ರೆಬೆಲೋಗೆ ಮಕ್ಕಳು ಮಹತ್ವಾಕಾಂಕ್ಷೆಗೆ ಬರುವ ಅಡ್ಡಿ. ದೈಹಿಕ ಕಾಮನೆಗಳಿಗೆ ಮಾತ್ರಾನಿಯೋ, ಶ್ರೀಪತಿಯೋ ಯಾರಾದರೂ ಆದೀತು; ತನ್ನ ಗಂಡನ ಬಳಿ ಹೋಗಿ ಜೀವಿಸುವುದು ತನ್ನ ಜೀವನ ಸಾರ್ಥಕ್ಯವನ್ನು ಬಲಿಕೊಟ್ಟ ಹಾಗೆ, ಹಾಗೆಯೇ ಗಂಡವನ್ನು ತನ್ನಲ್ಲಿಗೆ ಕರೆಸಿಕೊಳ್ಳುವುದೂ ಅವನ ಆಕಾಂಕ್ಷೆಯನ್ನು ಬಲಿಕೊಟ್ಟಂತೆ ಎನ್ನುವ ರೆಬೆಲೋ ಬಳಿ ಹಾಗಾದರೆ ಸಂಸಾರ ಮಾಡುವುದು ಯಾವಾಗ ಎಂಬ ಶ್ರೀಪತಿಯ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ವಸು ಶ್ರೀಪತಿಯ ಜೊತೆ  ಬೊಂಬಾಯಿಗೆ ಬಂದು ವಾಸಿಸಲು ತೊಡಗಿದಾಗ ಆಕೆ ಬಸಿರಾಗಿಬಿಡುತ್ತಾಳೆ. ಅದಕ್ಕೆ ತೆಗೆಸಿಕೊಂಡ ಮೇಲೆ ನಾವು ಮುಂಬೈ ಜೀವನದಲ್ಲಿ ಎಚ್ಚರಿಕೆಯಿಂದ ಜೀವಿಸಬೇಕೇ ವಿನಃ ನಿಶ್ಚಿಂತರಾಗಿ ಸುಖಿಸಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಒಂದು ಕೃತಕ ತಡೆಯೊಂದಿಗೆ, ಬಂಧನದೊಳಗೇ ಬದುಕಬೇಕಾದ ಅನಿವಾರ್ಯತೆ. ಅದು ರತಿಸುಖವೋ, ಸಂಗೀತವೋ, ಚಿತ್ರಕಲೆಯೋ ಯಾವುದಾದರೂ ಆಗಿರಬಹುದು. ಒಟ್ಟಿನಲ್ಲಿ ಮುಂಬೈಯ್ಯಲ್ಲಿ ಹಣವೇ ಸರ್ವಸ್ವವನ್ನೂ ಆಳುವ ಕಾರಣ, ಕಲೆಯ ನೆಲೆಯನ್ನು ಪುರಸ್ಕಾರಕ್ಕೆ ಗತಿಯಿಲ್ಲ. ವೇಗವೇ ಅಲ್ಲಿನ ಗತಿ ಶ್ರುತಿ. ಶ್ರುತಿಯಲ್ಲಿಯೂ ಯಾಂತ್ರಿಕವಾದ ಶ್ರುತಿಯೇ ಇರುವುದನ್ನು ಜೋಗದ ಯಂತ್ರಗಳ ಸದ್ದಿನಿಂದ ಅರಿಯುವ ರೂಪಕವನ್ನು ನೋಡಬಹುದು.  ಸಮುದ್ರವೆಂಬ ಸ್ವಚ್ಛಂದ ಭಾವ ಪ್ರಪಂಚಕ್ಕೇ ಕಲ್ಲಿನ ತಡೆಯ ಒಡ್ಡು ಹಾಕಿ ಬೆಳೆದಿರುವ ಜಾಗ ಮುಂಬೈ.  ಗರ್ಭನಿರೋಧಕದಂತೆ. ಜೀವನಪ್ರೀತಿಯ ಪೂರ್ಣತೆಯನ್ನು ಅನುಭವಿಸದಂತೆ ಮಾಡುವ ಕೃತಕ ತಡೆಯಿದು ಎಂಬ ಭಾವವು ಯಾವಾಗಲೂ ಶ್ರೀಪತಿಯಲ್ಲಿ ಸ್ಥಾಯಿಯಾಗಿರುತ್ತದೆ. ಸಮುದ್ರವು ಶ್ರೀಪತಿ ವಾಸಮಾಡುವ ಮಾಹಿಮ್ ಭಾಗವು ಸಮುದ್ರದ ಸ್ವಾಭಾವಿಕ ದಡವಾಗಿರುವುದರಿಂದ ಶಾಂತಿಯುತವಾಗಿ ಕಶ್ಮಲರಹಿತವಾಗಿರುವುನ್ನೂ ಮತ್ತು ಸ್ಟೆನೋ ರೆಬೆಲೊ ನೆಲೆಸಿರುವ ಕೊಲಾಬಾದಲ್ಲಿ ಅಲ್ಲಿನ ಬಂದರು ಕೇಂದ್ರವು ಸ್ಟೀಮರು ದೋಣಿಗಳ ಹಾವಳಿಯಿಂದ ನಿರಂತರ ಕೊಳೆ ಮತ್ತು ಅಶಾಂತವಾಗಿರುವ ಸೂಕ್ಷ್ಮವನ್ನೂ ಗುರುತಿಸುತ್ತಾರೆ. ಒಟ್ಟಿನಲ್ಲಿ ಎಲ್ಲಿ ನೋಡಿದರೂ ಪ್ರಖರವಾದ ವೈರುಧ್ಯವು ರಾಚುತ್ತದೆ.

ಜಲಪಾತ ಕಾದಂಬರಿಯ ಪೂರ್ವಾರ್ಧದ ಅಂದರೆ ವಸು ಗರ್ಭವತಿಯಾಗುವ ಮುಂಚಿನ ಎಂದು ವಿಭಜಿಸಿಕೊಂಡರೆ,   ಅಲ್ಲಿ ಜಲಪಾತ/ಸಮುದ್ರ, ಸಂಗೀತ ಮತ್ತು ಸತಿ-ಪತಿಯ ಮಿಲನ ಇವನ್ನು ತಮ್ಮ ಸಾಹಿತ್ಯ ಶಕ್ತಿಯಿಂದ ಏಕೀಕರಿಸಿ ಭಾವಪೂರ್ಣವಾದ ವಿವರಣೆಯಿಂದ ಆಪ್ತವಾಗಿಸಿರುವ ಅಪರೂಪದ ಸಾಹಿತ್ಯ ಸೃಷ್ಟಿ ಇಲ್ಲಿ ಆಗಿದೆ. ಆ ಇಡೀ ಬರವಣಿಗೆಯು ಗಂಡುಹೆಣ್ಣಿನ ಸಮಾಗಮದ ದೃಷ್ಟಿಯಿಂದ ಮತ್ತು ಸಂಗೀತಾಭಿವ್ಯಕ್ತಿಯ ತಾತ್ವಿಕ ದೃಷ್ಟಿಯಿಂದ, ಚಿತ್ರಕಲೆಯ ವರ್ಣಸಾಮರಸ್ಯ ಮತ್ತು ಪ್ರಮಾಣಬದ್ಧತೆಯ ದೃಷ್ಟಿಯಿಂದ ಮತ್ತು ಸಮುದ್ರದುಬ್ಬರವಿಳಿತದ ಪ್ರಾಕೃತಿಕ ವಿವರಣ ದೃಷ್ಟಿಯಿಂದ ತಮ್ಮಷ್ಟಕ್ಕೆ ತಾವು ಅಚ್ಚರಿಗೊಳಿಸುವಷ್ಟು ಪರಿಪೂರ್ಣವಾಗಿವೆ. ಒಂದು ಕಲಾಮಾಧ್ಯಮದ ಭಾಷೆಯನ್ನು ಮತ್ತೊಂದಕ್ಕೆ ಒಗ್ಗಿಸಿ ದಕ್ಕಿಸಿಕೊಳ್ಳುವ ಪ್ರತಿಭೆಗೆ ಬೆರಗು ಮೂಡಿದರೂ ಅದನ್ನು ರತಿಸ್ವರೂಪಕ್ಕೂ ಅನ್ವಯಿಸಿ ಅರ್ಥೈಸುವ ಹಿಂದಿನ ಈ ವಿನಿಮಯಕ್ಕೆ ಪರಕ್ರಿಯಾ ಪ್ರವೇಶಕ್ಕೆ ಯಾವುದು ಮೂಲ ತಳಹದಿ ಎಂದು ಅರಿಯುವುದು ಅವಶ್ಯ. ಭಾರತೀಯ ಸಾಹಿತ್ಯದಲ್ಲಿ ರತಿಯ ಅಭಿವ್ಯಕ್ತಿಯ ಕುರಿತಾಗಿ ವಿಫುಲವಾದ ಕೃತಿಗಳು ರಚನೆಯಾಗಿವೆ. ಮಹಾಕಾವ್ಯ ಲಕ್ಷಣದಲ್ಲಿ ಅದೂ ಒಂದಾಗಿ ಭಾವಸಂಪನ್ನತೆಯನ್ನು ಪ್ರಕಟಿಸಲು ಬಳಕೆಯಾಗುವ ನವರಸಗಳಲ್ಲಿ ಶೃಂಗಾರವು ರಸರಾಜವೆಂದು ಪರಿಗಣಿತವಾಗಿದೆ. ಶಾಸ್ತ್ರ ಸಾಹಿತ್ಯದಲ್ಲೂ ಕಾಮಸೂತ್ರಗಳಂತಹ ಗ್ರಂಥಗಳು ಇಂದಿಗೂ ಲಭ್ಯ. ಶಿಲ್ಪಕಲೆಯಲ್ಲಿ ಮಿಥುನ ಶಿಲ್ಪಗಳ ಇರುವಿಕೆಯನ್ನು ಕಾಣದ ಪುರಾತನ ದೇಗುಲಗಳೇ ಇಲ್ಲ ಅನ್ನಬಹುದು. ಹೀಗೆ ಕಾಮವು ಕಸರತ್ತಲ್ಲ ಕಲೆ ಎಂಬ ಭಾವವು ಭಾರತೀಯ ಚಿಂತನೆಯಲ್ಲಿ ಬಹುಕಾಲದಿಂದಲೂ ಹರಿದು ಬಂದಿದೆ. ಆದ್ದರಿಂದ ಕಾಮಕಲೆಯೆಂಬುದು ಸ್ವೀಕೃತವೇ ಆಗಿದ್ದರೂ ಅದನ್ನು ಸಾಹಿತ್ಯದಲ್ಲಿ ಮತ್ತೊಂದು ಕಲೆಯ ಪರಿಭಾಷೆಯಿಂದ ಅಭಿವ್ಯಕ್ತಿಸುವುದು ಹೊಸತೆನ್ನಬಹುದು. ಈ ಹೊಸತನದಿಂದಲೇ ವಿವರಣಗಳಿಗೊಂದು ಲವಲವಿಕೆ ಚೈತನ್ಯ ಬಂದಿದೆ. ವಂಶವೃಕ್ಷದಲ್ಲಿ ಕಾತ್ಯಾಯನಿ-ರಾಜಾರಾಯರ ಮಿಲನದ ಸನ್ನಿವೇಶವನ್ನು ಕಾವ್ಯಾತ್ಮಕ ಋತುಪ್ರಕ್ರಿಯೆಯಲ್ಲಿ ವಿವರಿಸಿದ್ದ ಲೇಖಕರು ಇಲ್ಲಿ ಅಂತಹ ಪ್ರತೀಕ ಚಿತ್ರಣದಲ್ಲಿ ಹೊಸ ಎತ್ತರವನ್ನೇ ಮುಟ್ಟಿದ್ದಾರೆ. ಒಂದೊಂದು ಪುಟವೂ ಅದನ್ನು ಮೈಗೂಡಿಸಿಕೊಂಡು ಶಕ್ತಿಯ ಪ್ರಕಟಣೆಯಲ್ಲಿ ಉಂಟಾಗುವ ಶಾಂತಿಯೆಡೆಗೇ ಮನಸ್ಸನ್ನು ಉದ್ದೀಪಿಸುತ್ತದೆ. ಬಹುಶಃ ಕಲೆಯ ವಿಷಯದಲ್ಲಿ ಪರಸ್ಪರ ಸಂವಾದಿಗಳಾದ ಸಾಹಿತ್ಯ-ಚಿತ್ರಕಲೆ ಮತ್ತು ಸಂಗೀತವು ಇಷ್ಟು ಹಾರ್ದಿಕವಾಗಿ ಭುಜಕ್ಕೆ ಭುಜಕೊಟ್ಟು ಅಭಿವ್ಯಕ್ತಗೊಂಡದ್ದು ಬೇರೆ ಕೃತಿಗಳಲ್ಲಿ ಬಿಡಿ, ಭೈರಪ್ಪನವರ ಕೃತಿಗಳಲ್ಲೂ ಕಾಣಸಿಗದು ಎನ್ನಬಹುದೇನೋ. ಆ ದೃಷ್ಟಿಯಿಂದ ಜಲಪಾತವು ಸಾಂದ್ರ ಸಾಹಿತ್ಯ ಕಲಾಕೃತಿ. ಕಲೆಯ ಆಧುನಿಕ ಸಮಸ್ಯೆಯಾದ ಸ್ವಚ್ಛಂದಾಭಿವ್ಯಕ್ತಿಯ ಮಿತಿಯು ಇಲ್ಲಿ ತನ್ನೆಲ್ಲಾ ದುಃಖ ದುಗುಡ ದುಮ್ಮಾನಗಳನ್ನು ತೆರೆದಿಟ್ಟು ಚರ್ಚೆಗೊಳಗಾಗಿದೆ. ಅದನ್ನು ಪುಷ್ಟೀಕರಿಸಲು ಹಳೆಯಕಾಲದ ಗ್ರಾಮಜೀವನ, ಔದಾರ್ಯ, ಸಮೃದ್ಧಿ, ಸಹಬಾಳ್ವೆಗಳು ಪರಿಕರಗಳಾಗಿ ನೆರವಾಗಿವೆ.

ಭೈರಪ್ಪನವರು ಮುಂಬೈ ಶಹರವು ಕಲೆಯನ್ನು ಮೆಟ್ಟಿನಿಂತು ಖರೀದಿಸಿಕೊಂಡು, ಎಲ್ಲವನ್ನೂ ಕೇವಲ ಕ್ರಯ ವಿಕ್ರಯಗಳ ಕಣ್ಣಳತೆಯಲ್ಲೇ ನೋಡುವ, ಜಾಹಿರಾತಿನ ಆಕರ್ಷಣೆಯೇ ಧ್ಯೇಯವೆನ್ನುವ ಆಕ್ರಮಣಶೀಲತೆಯನ್ನು ಚಿತ್ರಿಸಿ, ಅದಕ್ಕೆ ವಿರುದ್ಧವಾದ ಹಳ್ಳಿಯ ಬದುಕಿನಲ್ಲಿ ಬಡತನವಿದ್ದರೂ ನೆಮ್ಮದಿಯಿದೆಯೆಂಬ ಸರಳ ಸಮೀಕರಣದಲ್ಲಿ ಕಾದಂಬರಿಯನ್ನು ಮುಗಿಸಲಿಲ್ಲ. ಹಾಗಾಗಿದ್ದರೆ ಅದೊಂದು ನವೋದಯ ಕಾಲದ ಕೃತಿಯಾಗುತ್ತಿತ್ತೇನೋ?! ಅದು ನಂತರ ಬದಲಾದ ಹಳ್ಳಿಯ ಅಧ‍ಃಪತಿತ ಜೀವನಚಿತ್ರಣದ ಕ್ರೌರ್ಯವನ್ನೂ ತುಂಬ ಸಂವೇದನಾಶೀಲತೆಯಿಂದ ಚಿತ್ರಿಸಿದೆ. ಅದರ ತುಲನೆಯಲ್ಲಿ ಮುಂಬೈಯಲ್ಲಿ ಉಳಿದಿರುವ ಸಹಾನುಭೂತಿಯ ಗುಣವು ಹೇಗೆ ಹಳ್ಳಿಯ ನಿಶ್ಚೇಷ್ಟಿತ ಜೀವನಕ್ರಮಕ್ಕಿಂತ ಉತ್ತಮ ಎಂಬುದನ್ನು ತಿಳಿಸುತ್ತದೆ. ಇದನ್ನು ಓದಿ ಪಟ್ಟಣದಿಂದ ಹಳ್ಳಿಯೆಡೆಗೆ ಮುಖ ಮಾಡುವವರೂ ಹತ್ತು ಸಲ ಯೋಚಿಸುವಂತೆ ಅಲ್ಲಿನ ನಿರ್ದಯ ಸಾಮಾಜಿಕ ಸ್ವಭಾವವನ್ನು ಚಿತ್ರಿಸಿದೆ. ನನ್ನ ವೈಯಕ್ತಿಕ ಅನುಭವದಲ್ಲಿ ಹೇಳುವುದಾದರೆ ಹಳ್ಳಿಯ ಮರಳುವಿಕೆಗೆ ಇದನ್ನು ಓದಿ ಇಂದಿನ ಕಾಲದಲ್ಲಿ ಅಷ್ಟೇನೂ ಗಾಬರಿ ಬೀಳಬೇಕಿಲ್ಲ. ಆದರೆ ಎಚ್ಚರವಂತೂ ಬೇಕು. ಸಾಹಿತ್ಯವು ಕಲೆಯ ಹದ ಮುಟ್ಟಬೇಕು ಎಂಬ ಕಲ್ಪನಾ ಧೀಶಕ್ತಿಯಿಂದ ಚಿತ್ರಿಸಬೇಕಾದ ಸಂದರ್ಭದಲ್ಲಿ ಕೆಲವೊಂದು ಅತಿಶಯಗಳು ಕಾಣುವುದು ಸಹಜ. ಅದನ್ನೇ ಸಂಪೂರ್ಣ ನಿಜವೆಂದು ನಂಬಿ ಅಧೀರರಾಗುವುದು ಒಳಿತಲ್ಲ. ನನ್ನ ಸ್ನೇಹಿತರೊಬ್ಬರು ಪಟ್ಟಣದ ಧಾವಂತದಿಂದ ಬೇಸತ್ತು ಹಳ್ಳಿಯೆಡೆಗೆ ಮುಖಮಾಡಲು ಹೊರಟಾಗ, ಅವರಿಗೆ ಜಲಪಾತದ ಈ ಎದೆ ನಡುಗಿಸುವ ದೃಶ್ಯಸರಣಿಗಳನ್ನು ಹೇಳಿ, ನೀವು ಶಹರದಲ್ಲೇ ಇರಿ ಎಂದು ಒಬ್ಬರು ಸಲಹೆ ಮಾಡಿದ್ದರಂತೆ. ಹಾಗಾಗಿ ಆ ವಿಚಾರದ ಕುರಿತಾಗಿ ನನಗೆ ತೋಚಿದ್ದಿಷ್ಟು ಹೇಳಬೇಕಾಯಿತು.
ಪಶುವೈದ್ಯ ನಾಡಗೌಡರ ವಿಲಕ್ಷಣವಾದ ಸಂಶೋಧನೆಗಳು , ಅವರ ಪತ್ನಿ ಸುಧಾಬಾಯಿಯವರ ಸಾತ್ವಿಕ ಸ್ವಭಾವ, ಸ್ಥಾಯಿಯಾದ ಸಾಂಸಾರಿಕ ದುಃಖವು ಹೆಚ್ಚೇ ಮನವನ್ನು ಕಲಕುತ್ತದೆ. ಸಂವೇದನೆಗಳೇ ಇಲ್ಲದ ಭಾವನಾರಾಹಿತ್ಯ ಚಿಂತನೆಯು ಜೀವನ ಮತ್ತು ಕಲೆ ಎರಡನ್ನೂ ಹೇಗೆ ನಾಶಕ್ಕೆ ಒಯ್ಯುತ್ತವೆ ಎಂಬುದನ್ನು ಚೆನ್ನಾಗಿ ಚಿತ್ರಿಸುತ್ತದೆ. ಕಸಾಯಿಖಾನೆಯ ವಿವರಗಳಂತೂ ಹೃದಯವಿದ್ರಾವಕ.  ಕಾದಂಬರಿಯುದ್ದಕ್ಕೂ ನಗರ ಜೀವನದ ಕುರಿತು ಹತಾಶೆಯನ್ನೇ ಮೊಗೆದಿಡುವ ಕೃತಿಯು ಕೊನೆಯಲ್ಲಿ ಹಳ್ಳಿಗಳು ಅದಕ್ಕಿಂತ ಹೀನ ಸ್ಥಿತಿ ಮುಟ್ಟಿರುವುದನ್ನೂ ಮತ್ತು ನಗರ ಕೇಂದ್ರಿತ ಸ್ವಭಾವದಲ್ಲಿನ ಒಳ್ಳೇತನಗಳನ್ನು ಗುರುತಿಸಬೇಕಾದ ಅವಶ್ಯಕತೆಯನ್ನೂ, ಅದರೊಟ್ಟಿಗೇ ಸಹಿಸಿಕೊಂಡು ಬದುಕಬೇಕಾದ ಅನಿವಾರ್ಯತೆಯನ್ನೂ ತಿಳಿಸುತ್ತದೆ. ನಡುವಿನಲ್ಲಿ ಶ್ರೀಪತಿಗೆ ಒಮ್ಮೆ ತನ್ನ ಸ್ವಭಾವದ ಬಗ್ಗೆ ತನಗೇ ಹೇವರಿಕೆ ಬಂದು ರೆಬೆಲೊಳನ್ನು ತಿರಸ್ಕರಿಸಿ, ಹಾದಿಯಲ್ಲಿ ಕಾಮಾಟಿಪುರದ ವೇಶ್ಯಾವಾಟಿಕೆಯ ಹಾದಿಯಲ್ಲಿ ತಿರುಗಾಡಿ ಬಂದು ವ್ಯಗ್ರ ಮನಸ್ಕನಾಗಿ ವಸುವನ್ನು ಮನೋಶಮನಕ್ಕೆಂಬಂತೆ ಕೂಡಿದ ನಂತದ ಅವಳು ಹೇಳುವ ಮಾತು ತುಂಬ ಪ್ರಸ್ತುತ: “ಶಾಸ್ತ್ರೀಯ ಸಂಗೀತಕ್ಕೆ ಒಂದು ಗಾಂಭೀರ್ಯ, ಒಂದು ನಿಧಾನಗತಿ ಇದೆ. ಕಂಠ ಕೂಡಿ, ಆಲಾಪ ವಿಸ್ತರಿಸಿ ಹಾಡು ಮುಗಿಯುವ ವೇಳೆಗೆ ಕಾಲವೃ ಮರೆಯುವಷ್ಟು ತಾಳ್ಮೆಯಿರುತ್ತದೆ. ಸಿನೆಮಾಹಾಡಿನಲ್ಲಿ ಆರಂಭದಲ್ಲೇ ವಾದ್ಯಗಳ ಅವಾಂತರ. ಎರಡು ನಿಮಿಷದಲ್ಲಿ ಕೂಗಿ ಕುಪ್ಪಳಿಸಿ ಮುಗಿದುಹೋಗುವ ಆತುರ. ಜೀವನವು ಸಿನೆಮಾಹಾಡಾಗಬಾರದು. ಅಲ್ಲವಾ? ತಾಳ್ಮೆಯಿರದಿದ್ದರೆ ಅದೆಂತಹ ಜೀವನ?”

ಇದರಿಂದ ತಾನು ಅವಳಲ್ಲಿ ವ್ಯಭಿಚಾರಿಕೆ ನಡೆಸುತ್ತಿದ್ದೇನೆಯೇ ಎಂಬ ಕುಸಿತವು ಅವನನ್ನು ಕಾಡಿ ನಂತರ ಬ್ರಹ್ಮಚರ್ಯ ಜೀವನ ನಡೆಸೋಣ ಧ್ಯೇಯ ಮೂಡಿದರೂ ಅದು ವಂಶವೃಕ್ಷದಲ್ಲಿ ಸದೃಢವಾಗಿ ನಿಂತಂತೆ ನಿಲ್ಲುವುದಿಲ್ಲ. ಹಾಗೆ ನಿಂತಿದ್ದರೆ, ಸಂತಾನದ ಸೃಷ್ಟಿಶಕ್ತಿಯು ಕಾಮ ಕಾದಂಬರಿಯ ಮೂಲನೆಲೆಯನ್ನು ಸ್ಥಾಪಿಸಿದಂತಾಗುತ್ತಿರಲಿಲ್ಲ. ಹಾಗಾಗಿಯೇ ಅದು ಗೃಹಸ್ಥನ ಸ್ಥಾಯಿ ಭಾವ ಅಲ್ಲ ಎಂಬುದು ಮನಸ್ಸಿಗೆ  ಬಂದು ಆ ಭಾವವೇ ಮತ್ತೆ ಅವರ ಮುಕ್ತ ಮಿಲನಕ್ಕೆ ಕಾರಣವಾಗುತ್ತೆ. ಹೀಗೆ ಆಕೆ ಗರ್ಭವತಿ ಆದ ಮೇಲೆ ಅವಳ ದೈಹಿಕ ಬದಲಾವಣೆ ವಿಕಾಸವನ್ನು ಅವನು ಲೋನಾವಾಲದ ಋತು ಬದಲಾವಣೆಯ ಪ್ರಕೃತಿ ಚಿತ್ರಗಳ ಜೊತೆ ಸಮೀಕರಿಸಿ ೮ ಚಿತ್ರಗಳಲ್ಲಿ ಬಿಡಿಸುತ್ತಾನೆ. ಆದರೆ  ಹಣದ ಮುಗ್ಗಟ್ಟಿನ ಕಾರಣ ಅದನ್ನು ಹೆಂಡತಿಯ ಬಾಣಂತನಕ್ಕೆ ಹೆರಿಗೆ ಖರ್ಚಿಗೆ ಮಾರುತ್ತಾನೆ. ಸಹಜ ಕಲಾವಂತಿಕೆಯ ಅಭಿವ್ಯಕ್ತಿಯು ಯಾಂತ್ರಿಕ ಜೀವನದ ಅನಿವಾರ್ಯತೆಗೆ ಮಾರಿಕೊಳ್ಳಬೇಕೆಂಬ ಪ್ರತೀಕ  ಇಲ್ಲಿ ಬಹಳ ಸೊಗಸಾಗಿ ಬಂದಿದೆ!

ಇಷ್ಟೆಲ್ಲಾ ನಡೆಯುತ್ತಾ ಎರಡು ಬಣ್ಣಗಳ ವ್ಯತ್ಯಾಸವನ್ನು ಬೆಳೆಸುತ್ತಾ ಸಾಗಿದೆ ಎಂದುಕೊಳ್ಳುತ್ತಿರುವಾಗ, ನಾಡಗೌಡರ ಸಂಸಾರ ಎದುರಿಗೆ ಬಂದು ನಿಲ್ಲುತ್ತದೆ. ನಿಷ್ಪ್ರಯೋಜಕವಾದುದನ್ನ ಹುಟ್ಟಲೇ ಬಿಡಬಾರದು ಎಂಬ ಮಾವೋವಾದ ಮೆಲ್ಲಗೆ ಬೆಳೆಯಲು ತೊಡಗಿ, ಸೃಷ್ಟಿಯ ಕಾಮನೆ ಮತ್ತು ಸುಖದ ಕಾಮನೆಗೆ ಹೊರತಾದ ಕೇವಲ ಉತ್ಪತ್ತಿಯ ಕಾಮನೆಯಿಲ್ಲದ ಕ್ರಿಯೆಯು ನಡುವೆ ನುಗ್ಗಿ, ಆಧುನಿಕತೆಯು ನಾಗರೀಕತೆಗೆ ಒಡ್ಡುವ ಸವಾಲುಗಳಿಗೆ ಹುಟ್ಟುವ ಹೃದಯರಹಿತ ಪರಿಹಾರವನ್ನು ನೀಡುವುದರಿಂದ ಉಂಟಾಗುವ ಶೈಥಿಲ್ಯವು ವಿವರವಾಗಿ ರೂಪುಗೊಂಡಿದೆ.

ಎಲ್ಲಕ್ಕಿಂತ ಲೇಖಕರ ಸಾಹಿತ್ಯ ಸೃಷ್ಟಿಶಕ್ತಿಯ ಹದವು ತನ್ನ ಉತ್ಕೃಷ್ಟತೆಯನ್ನು ಮುಟ್ಟವುದು ವಸುವಿನ ಗರ್ಭಧಾರಣೆಯಿಂದ ಹೆರಿಗೆಯ ಸಮಯದ ವಿವರಣೆಗಳಲ್ಲಿ. ಹೆರಿಗೆಯ ವಿವರಗಳಂತೂ ಪ್ರಜ್ಞಾಪ್ರವಾಹದ ತುಂಡು ವಾಕ್ಯಗಳಿಂದ ಅತ್ಯಂತ ಹೃದಯಸ್ಪರ್ಶಿಯೂ ವೇದನೆಯನ್ನು ನಮ್ಮದೇ ಆಗಿಸಿಕೊಳ್ಳುವ ಸಹೃದಯ ಸಹಾನುಭೂತಿಯನ್ನೂ ನೀಡಿದೆ. ಒಬ್ಬ ಮಗ ಇದ್ದಾನೆ,‌‌ ಮತ್ಯಾಕೆ ಬಸಿರಾದ್ರಿ ಅಂತ ಅವಳು ಹೆರಿಗೆಯ ನೋವು ತಿನ್ನುವಾಗ ನರ್ಸ್ ಕೇಳುತ್ತಾಳೆ. ಆಕೆಯ ನಿರ್ಭಾವುಕ ಮಾತು ನಗರ ಜೀವನಕ್ಕೆ ಬೇಕಾದ ಮೂಲಭೂತ ಅರ್ಹತೆ ಅನ್ನೋ ತರಹ ಕೇಳತ್ತೆ. ಪ್ರತಿಯೊಂದು ಸಂದರ್ಭದಲ್ಲೂ ಎರಡು ಜೀವನವನ್ನು ಹೋಲಿಸುತ್ತ, ಎರಡರ ನಡುವಿನ ಅವಸ್ಥಾಂತರವನ್ನೂ ಕೊನೆಗೆ ಗತ್ಯಂತರವಿಲ್ಲದ ಇದ್ದುದರಲ್ಲಿಯೇ ಸಹನೀಯವಾದ ಪರಿಸ್ಥಿತಿಯನ್ನು ಆರಿಸಿಕೊಂಡು ಜೀವನವನ್ನು ನಿಭಾಯಿಸಬೇಕಾದ ಸಿದ್ಧಮಾದರಿಯದಲ್ಲದ ವಾಸ್ತವ ಪರಿಹಾರಸೂತ್ರವನ್ನು ಕಾದಂಬರಿ ಓದುಗನಿಗೆ ನೀಡುತ್ತದೆ. ಜಲಪಾತ ಕಲೆ/ಸಾಹಿತ್ಯಗಳ ಗಂಭೀರ ಆಸಕ್ತರು ಖಂಡಿತಾ ಅಧ್ಯಯನ ಮಾಡಬೇಕಾದ ಕೃತಿ.

ಅವರ ಮುಂದಿನ ಮಹಾಕೃತಿಗಳ ಬ್ರಹ್ಮಾಂಡ ಸ್ವರೂಪವು ಇಲ್ಲಿ ಹ್ರಸ್ವವಾಗಿ ತನ್ನ ಮೊಳಕೆಯನ್ನು ತೋರಿಸಿದೆ ಅನ್ನಬಹುದು. ಅದನ್ನು ಅವರೂ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

How do you like this post?

Click on a star to rate it!

Average rating 5 / 5. Vote count: 1

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಚೈತನ್ಯ ಮಜಲುಕೋಡಿ
Latest posts by ಚೈತನ್ಯ ಮಜಲುಕೋಡಿ (see all)

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಪ್ರೇಮ